ಮಡಿಕೇರಿ, ಆ. 4: ನಿನ್ನೆಯಿಂದ ಪ್ರಾರಂಭವಾದ ಆಶ್ಲೇಷಾ ಮಳೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ವಿಪರೀತ ಗಾಳಿ ಸಹಿತ ಧಾರಾಕಾರವಾಗಿ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪರಿಣಾಮ ಕೆಲವೆಡೆ ಭಾರೀ ಮರಗಳು ಧರೆಗುರುಳಿದರೆ, ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದು ಗ್ರಾಮೀಣ ಭಾಗಗಳಲ್ಲಿ ಕಾರ್ಗತ್ತಲೆ ಆವರಿಸುವಂತಾಗಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ಹೋಬಳಿಯ ಕೋಟೂರು, ಚೆಯ್ಯಂಡಾಣೆ ಸಮೀಪದ ಕೋಕೇರಿ, ಬೇತ್ರಿ, ಚೆಟ್ಟಳ್ಳಿ ಸನಿಹ ಕಡಗದಾಳುವಿನಲ್ಲಿ ಹಾಗೂ ಕೂಡಿಗೆಯಲ್ಲಿ ದೊಡ್ಡಗಾತ್ರದ ಮರಗಳು ಬಿದ್ದು ರಸ್ತೆ ಸಂಪರ್ಕಕ್ಕೆ ಅಡಚಣೆಯೊಂದಿಗೆ ವಿದ್ಯುತ್ ತಂತಿಗಳು ಹಾನಿಗೊಂಡಿವೆ.ಆಶ್ಲೇಷಾ ಮಳೆ ದ್ವಿತೀಯ ದಿನವೂ ಆರ್ಭಟ ಮುಂದುವರೆಸಿದೆ. ಬಾಳೆಲೆ, ಭಾಗಮಂಡಲ-ಅಯ್ಯಂಗೇರಿ ರಸ್ತೆ ಜಲಾವೃತಗೊಳ್ಳತೊಡಗಿದೆ. ಸಂಗಮದಲ್ಲಿ ನೀರು ಹೆಚ್ಚಾಗಿದೆ. ಭಾಗಮಂಡಲ, ಕರಡ, ಸಿದ್ದಾಪುರ, ಗರ್ವಾಲೆ, ಹಮ್ಮಿಯಾಲ, ಹಚ್ಚಿನಾಡು ಮಾರ್ಗದಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಿಂದ ಸಂಪರ್ಕ ಕಡಿತಗೊಂಡಿರುವ ಮಾಹಿತಿ ಲಭಿಸಿದೆ. ಜಿಲ್ಲಾ ಕೇಂದ್ರ ಮಡಿಕೇರಿ ರಸ್ತೆಗಳಲ್ಲಿ ತೋಡಿನ ರೀತಿ ನೀರಿನ ಕೋಡಿ ಹರಿಯುತ್ತಿದ್ದು, ಓಂಕಾರೇಶ್ವರ ರಸ್ತೆ ಬಳಿ ಭೂಕುಸಿದಿದೆ. ಆಂಜನೇಯ ಗುಡಿ ಬಳಿ ಕೆರೆಯಂತೆ ಜಲಾವೃತಗೊಂಡಿದೆ. ಮಕ್ಕಂದೂರು ಉದಯಗಿರಿ ಸಮೀಪ ರಸ್ತೆಗೆ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು.

ನಾಪೆÇೀಕ್ಲುವಿನಲ್ಲಿ ಮಳೆ

ನಾಪೆÇೀಕ್ಲು ವ್ಯಾಪ್ತಿಯಲ್ಲಿ ಬಿರುಸಿನ ಗಾಳಿ ಸಮೇತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಕೊಟ್ಟಮುಡಿ, ಬೊಳಿಬಾಣೆಯಲ್ಲಿ ಕಾವೇರಿ ನದಿ ಪ್ರವಾಹ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಬೊಳಿಬಾಣೆಯಲ್ಲಿ ಕಾವೇರಿ ನದಿ ಪ್ರವಾಹವು ರಸ್ತೆ ಮಟ್ಟದಲ್ಲಿ ಹರಿಯುತ್ತಿದ್ದು, ಯಾವ ಕ್ಷಣದಲ್ಲಾದರೂ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ. ಇದೇ ರೀತಿ ಮಳೆ ಮುಂದುವರಿದರೆ ನಾಪೆÇೀಕ್ಲು -ಮೂರ್ನಾಡು, ನಾಪೆÇೀಕ್ಲು- ಪಾರಾಣೆ ಮುಖ್ಯ ರಸ್ತೆಗಳು ಸೇರಿದಂತೆ ಅಲ್ಲಲ್ಲಿ ಸಂಪರ್ಕ ಕಡಿತಗೊಳ್ಳುವ ಭೀತಿ ಉಂಟಾಗಿದೆ.

ಬಿರುಸಿನ ಗಾಳಿಯ ಕಾರಣದಿಂದ ಜನ ಹೆಚ್ಚಿನ ಆತಂಕ ಎದುರಿಸುತ್ತಿದ್ದು, ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಳಿ ಮಳೆಯ ಕಾರಣದಿಂದ ಈ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿಯಿಂದ ವಿದ್ಯುತ್ ಇಲ್ಲದೆ ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದು ನಷ್ಟ ಉಂಟಾದ ಬಗ್ಗೆ ವರದಿಯಾಗಿದೆ. ಆದರೆ ಯಾವದೇ ಅನಾಹುತ ಸಂಭವಿಸಿದ ಬಗ್ಗೆ ತಿಳಿದು ಬಂದಿಲ್ಲ.

ರಸ್ತೆ ದುರಸ್ತಿ: ನಾಪೆÇೀಕ್ಲು ಮುಖ್ಯ ರಸ್ತೆಯ ಮುತ್ತಪ್ಪ ದೇವಸ್ಥಾನದ ಬಳಿ ರಸ್ತೆಯಲ್ಲಿ ನೀರು ಸಂಗ್ರಹಗೊಂಡು ವಾಹನ, ಜನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ಬಗ್ಗೆ ಸಂಬಂಧಿಸಿದವರು ಯಾವದೇ ಕ್ರಮಕೈಗೊಂಡಿರಲಿಲ್ಲ. ಈಗ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಲೋಕೋಪಯೋಗಿ ಇಲಾಖೆ ಜೆಸಿಬಿ ಯಂತ್ರದ ಮೂಲಕ ರಸ್ತೆ ದುರಸ್ತಿಗೆ ಕ್ರಮಕೈಗೊಂಡಿದೆ.

ದಕ್ಷಿಣ ಕೊಡಗು

ಶ್ರೀಮಂಗಲ: ದಕ್ಷಿಣ ಕೊಡಗಿನಲ್ಲಿ 2 ದಿನಗಳಿಂದ ನಿರಂತರ ಭಾರೀ ಗಾಳಿ ಸಹಿತ ಧಾರಾಕಾರ ಮಳೆಯ ಅಬ್ಬರ ಹೆಚ್ಚಾಗಿದೆ. ಮಳೆಯೊಂದಿಗೆ ಭಾರೀ ಗಾಳಿಯಿಂದ ರಸ್ತೆ, ವಿದ್ಯುತ್ ತಂತಿ ಮೇಲೆ ಮರ ಬಿದ್ದಿದೆ. ತೋಟಗಳಲ್ಲಿ ಮರಗಳು ಅಪಾರ ಪ್ರಮಾಣದಲ್ಲಿ ಧರೆಗೆ ಉರುಳಿವೆ.

ದಕ್ಷಿಣ ಕೊಡಗಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ. ಬಿರುನಾಣಿ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ಹುದಿಕೇರಿ, ಕುಟ್ಟ, ಕೆ.ಬಾಡಗ, ನಾಲ್ಕೇರಿ, ಕಾನೂರು, ಬಲ್ಯಮುಂಡೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಧಾರಾಕಾರ ಮಳೆಯಿಂದ ದಕ್ಷಿಣ ಕೊಡಗಿನ ಕಕ್ಕಟ್ಟ್ ಪೆÇಳೆ, ಲಕ್ಷ್ಮಣ ತೀರ್ಥ, ರಾಮ ತೀರ್ಥ ನದಿಗಳು ತುಂಬಿ ಹರಿಯುತ್ತಿವೆ. ಅಲ್ಲಲ್ಲಿ ವಿದ್ಯುತ್ ಕಂಬ, ತಂತಿ ಮೇಲೆ ಮರಗಳು ಮುರಿದು ಬಿದ್ದಿರುವುದು ಕಂಡು ಬಂದಿದೆ. ರಸ್ತೆ ಮೇಲೂ ಬಿದ್ದಿರುವ ಮರಗಳನ್ನು ಸ್ಥಳೀಯರೇ ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡುತ್ತಿದ್ದಾರೆ.

ಮಳೆ ಗಾಳಿಯ ತೀವ್ರತೆಯಿಂದ ಮನೆಯಿಂದ ಜನ ಹೊರ ಬರಲು ಹಿಂದೇಟು ಹಾಕುತ್ತಿದ್ದು, ಮುಖ್ಯವಾಗಿ ಭತ್ತದ ಕೃಷಿ ಚಟುವಟಿಕೆ, ಕಾಫಿ ತೋಟದಲ್ಲಿ ಕೆಲಸ ಕಾರ್ಯವನ್ನು ಸ್ಥಗಿತಗೊಳಿಸಿರುವುದು ಕಂಡು ಬಂದಿದೆ.

ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆವರೆಗೆ ಬಿರುನಾಣಿ 7 ಇಂಚು,

(ಮೊದಲ ಪುಟದಿಂದ) ಟಿ.ಶೆಟ್ಟಿಗೇರಿ 6.50 ಇಂಚು, ಮಂಚಳ್ಳಿ 6.50, ಶ್ರೀಮಂಗಲ 5 ಇಂಚು ಮಳೆ ಸುರಿದಿದೆ.

ಇರ್ಪು ರಸ್ತೆ ಬಂದ್

ಗೋಣಿಕೊಪ್ಪಲು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇತಿಹಾಸ ಪ್ರಸಿದ್ಧ ಇರ್ಪು ಜಲಪಾತಕ್ಕೆ ತೆರಳುವ ರಸ್ತೆ ಮಾರ್ಗ ಬಂದ್ ಆಗಿವೆ. ರಸ್ತೆಯ ಎರಡು ಬದಿಯಲ್ಲಿರುವ ಭಾರೀ ಗಾತ್ರದ ಮರಗಳು ರಸ್ತೆಗೆ ಬಿದ್ದ ಪರಿಣಾಮವಾಗಿ ಈ ರಸ್ತೆ ಸಂಪೂರ್ಣ ಸಂಪರ್ಕ ಕಡಿದುಕೊಂಡಿದೆ.

ವಿದ್ಯುತ್ ನಿಲುಗಡೆಯಾಗಿದೆ. ವಿದ್ಯುತ್ ಕಂಬಗಳು, ಟ್ರಾನ್ಸ್ ಪಾರ್ಮರ್ ಹಾನಿಗೊಂಡಿದ್ದು, ಚೆಸ್ಕಾಂ ಇಲಾಖೆಯ ಅಧಿಕಾರಿ, ಸಿಬ್ಬಂದಿ ದುರಸ್ತಿ ಕಾರ್ಯ ನಡೆಸುವಲ್ಲಿ ನಿರತರಾಗಿದ್ದಾರೆ. ಆದರೆ ಮಳೆ ವಿಪರೀತ ಅಡ್ಡಿಯಾಗಿದೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಲು ಪ್ರಯತ್ನ ಮಾಡಿದರೂ ಎಡೆಬಿಡದೆ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ.

ನೆಲ ಕಚ್ಚಿದ ಬಾಳೆ ತೋಟ

ಶ್ರೀಮಂಗಲ: ಶ್ರೀಮಂಗಲ ಸನಿಹದ ಕುರ್ಚಿ ಗ್ರಾಮದಲ್ಲಿ ನಿನ್ನೆ ಹಾಗೂ ಇಂದು ಭಾರೀ ಗಾಳಿ-ಮಳೆಯಿಂದಾಗಿ ಅಲ್ಲಿನ ಬೆಳೆಗಾರ ಅಜ್ಜಮಾಡ ಟಿ. ಚಂಗಪ್ಪ ಅವರು ಬೆಳೆದಿದ್ದ ಅಪಾರ ಪ್ರಮಾಣದ ಬಾಳೆ ಕೃಷಿ ಬಹುತೇಕ ನೆಲಕಚ್ಚಿವೆ. ಇವರು ತಮ್ಮ ಗದ್ದೆ ಹಾಗೂ ತೋಟದಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಬಾಳೆಗಿಡ ಬೆಳೆದಿದ್ದು, ಇದರ ಪೈಕಿ 5 ಸಾವಿರಕ್ಕೂ ಅಧಿಕ ಫಸಲಿಗೆ ಬರುತ್ತಿದ್ದ ಬಾಳೆ ಕಂದುಗಳು ಮುರಿದು ಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಈ ಬಾರಿ ಉತ್ತಮ ಫಸಲಿನೊಂದಿಗೆ ಹಲವು ಲಕ್ಷ ಆದಾಯದ ನಿರೀಕ್ಷೆ ಇತ್ತು. ಆದರೆ ಇದೀಗ ಎಲ್ಲವೂ ನೆಲಸಮಗೊಂಡಿದೆ. ತೋಟ ನಿರ್ವಹಣೆಗೆ ಖರ್ಚು ಮಾಡಿದ್ದ ಲಕ್ಷಾಂತರ ಹಣವೂ ಪೋಲಾದಂತಾಗಿದೆ ಎಂದು ಕೃಷಿಕ ಚಂಗಪ್ಪ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಟ್ರಾನ್ಸ್‍ಫಾರ್ಮರ್‍ಜಖಂ

ವೀರಾಜಪೇಟೆ: ವೀರಾಜಪೇಟೆ ವಿಭಾಗಕ್ಕೆ ನಿರಂತರ ಮಳೆಯಾಗುತ್ತಿದ್ದು, ನಿನ್ನೆ ಇಲ್ಲಿನ ದಖ್ಖನಿ ಮೊಹಲ್ಲಾದಲ್ಲಿ ನೂತನವಾಗಿ ಅಳವಡಿಸಲಾಗಿದ್ದ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಜರಿದು ತಂತಿಗಳು ತುಂಡಾಗಿದ್ದರಿಂದ ದಖ್ಖನಿಮೊಹಲ್ಲಾ, ಸುಂಕದಕಟ್ಟೆ, ತೆಲುಗರಬೀದಿ, ಜೈನರಬೀದಿ ಹಾಗೂ ದೇವಾಂಗ ಬೀದಿಯಲ್ಲಿ ನಿನ್ನೆ ರಾತ್ರಿಯಿಂದಲೇ ಕಾರ್ಗತ್ತಲು ಆವರಿಸಿದೆ. ಸೆಸ್ಕಾಂ ಘಟಕ ದುರಸ್ತಿ ಕಾಮಗಾರಿಯಲ್ಲಿ ತೊಡಗಿದ್ದು ಮಳೆಯ ಕಾರಣ ದುರಸ್ತಿ ವಿಳಂಬವಾಗಿದೆ.

ವೀರಾಜಪೇಟೆ ವಿಭಾಗದಲ್ಲಿ ಮೂರು ದಿನಗಳಿಂದ ಬಿದ್ದ ಮಳೆಗೆ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ವಿದ್ಯುತ್ ಕಂಬಗಳು, ಹೆಗ್ಗಳ ಗ್ರಾಮದಲ್ಲಿ 6 ವಿದ್ಯುತ್ ಕಂಬಗಳು, ಬಿಟ್ಟಂಗಾಲ ಗ್ರಾಮದ ವ್ಯಾಪ್ತಿಯಲ್ಲಿ 5, ಪಾಲಂಗಾಲ ಗ್ರಾಮದಲ್ಲಿ 3 ವಿದ್ಯುತ್ ಕಂಬಗಳು ಧರೆಗೆ ಉರುಳಿವೆ ಎಂದು ಇಲ್ಲಿನ ಸೆಸ್ಕಾಂ ಕಿರಿಯ ಇಂಜಿನಿಯರ್ ರಮೇಶ್ ತಿಳಿಸಿದ್ದಾರೆ.

ವೀರಾಜಪೇಟೆ ಕಲ್ಲುಬಾಣೆಯಲ್ಲಿ ನಿನ್ನೆ ರಾತ್ರಿ ಮರವೊಂದು ರಸ್ತೆಗೆ ಉರುಳಿದೆ. ಬೇತ್ರಿ ಗ್ರಾಮದಲ್ಲಿ ಮರ ರಸ್ತೆ ಬದಿ ಬಿದ್ದಿದೆ.

ಪೆÇನ್ನಂಪೇಟೆ ವರದಿ

ಕಳೆದೆರಡು ದಿನಗಳಿಂದ ಪೆÇನ್ನಂಪೇಟೆ ವ್ಯಾಪ್ತಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು ಗದ್ದೆಗಳು ಜಲಾವೃತವಾಗಿವೆ. 24 ಗಂಟೆ ಅವಧಿಯಲ್ಲಿ 4.90 ಇಂಚು ಮಳೆಯಾಗಿದ್ದು, ಇಂದೂ ಕೂಡ ಗಾಳಿ ಮಳೆಯ ಆರ್ಭಟ ಮುಂದುವರೆದಿದೆ.

ಬೇಗೂರು ಗ್ರಾಮಕ್ಕೆ ನೆನ್ನೆ ಬೆಳಿಗ್ಗೆಯಿಂದ ಇಂದು ಬೆಳಿಗ್ಗೆ ವರೆಗೆ 4.26 ಇಂಚು ಮಳೆಯಾಗಿದ್ದು ಗ್ರಾಮದ ಗದ್ದೆಗಳು ಜಲಾವೃತಗೊಂಡಿವೆ.

ಬಲ್ಯ ಮಂಡೂರು ಸಮೀಪ ಹರಿಹರ ಸೇತುವೆ ಬಳಿ ಎರಡೂ ಕಡೆ ಗದ್ದೆಗಳು ನೀರಿನಲ್ಲಿ ಮುಳುಗಿ ಹೋಗಿದ್ದು ಲಕ್ಷ್ಮಣ ತೀರ್ಥ ನದಿಯ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪೆÇನ್ನಂಪೇಟೆ -ಹುದಿಕೇರಿ ರಸ್ತೆಯ ಬೇಗೂರು ಕೊಲ್ಲಿಯ ಎರಡೂ ಕಡೆ ಗದ್ದೆ ಜಲಮಯವಾಗಿದೆ.

ಧರೆಗುರುಳಿದ ಮರ: ಮಳೆಯ ಜೊತೆಗೆ ಗಾಳಿಯು ರಭಸದಿಂದ ಬೀಸುತ್ತಿರುವ ಪರಿಣಾಮ ಹುದಿಕೇರಿ ಶ್ರೀಮಂಗಲ ಮುಖ್ಯ ರಸ್ತೆಯಲ್ಲಿ ಬೆಳ್ಳೂರು ಗ್ರಾಮದ ಸಮೀಪ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದ್ದು, ಸಂಪರ್ಕ ಕಡಿತಗೊಂಡಿತ್ತು.

ಮನೆಯ ಮೇಲೆ ಮರ...

ಗೋಣಿಕೊಪ್ಪಲು: ವಿಪರೀತ ಸುರಿಯುತ್ತಿರುವ ಮಳೆಯಿಂದಾಗಿ ಪೊನ್ನಂಪೇಟೆ ಹೋಬಳಿಯ ಬಿ.ಶೆಟ್ಟಿಗೇರಿ ಗ್ರಾಮದ ಚೇಂದಿರ ಎ. ಪೂಣಚ್ಚ ಅವರ ಮನೆಯ ಮೇಲೆ ಮರವೊಂದು ಉರುಳಿ ಬಿದ್ದಿದ್ದು ಮನೆಯ ಮೇಲ್ಛಾವಣಿ ಸೇರಿದಂತೆ ಗೋಡೆ ಬಿರುಕುಗೊಂಡಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಕ್ಕಂದೂರು: 2018ರಲ್ಲಿ ಭೂಕುಸಿತವುಂಟಾಗಿ ಸಾವು ನೋವು ಸಂಭವಿಸಿದ್ದ ಮಡಿಕೇರಿ ಬಳಿಯ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದಲ್ಲಿ ಕಳೆದ ರಾತ್ರಿಯಿಂದ ಇಂದು ಬೆಳಗ್ಗಿನವರೆಗೆ 3.45 ಇಂಚು ಮಳೆ ಸುರಿದಿದೆ. ಮರಗಳು ರಸ್ತೆಗುರುಳಿ ಸಂಚಾರಕ್ಕೆ ಅಡಚಣೆಯಾಗಿತ್ತು. ಇಂದೂ ಕೂಡ ಭಾರೀ ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿದಿದೆ.

ನೆಲ ಕಚ್ಚಿದ ಜೋಳ

ಕೂಡಿಗೆ: ಎರಡು ದಿನಗಳಿಂದ ಭಾರೀ ಗಾಳಿ ಮಳೆ ಹಿನ್ನೆಲೆಯಲ್ಲಿ ಈಗಾಗಲೇ ಬೆಳೆದು ನಿಂತ ಜೋಳದ ನೂರಾರು ಎಕರೆ ಪ್ರದೇಶದ ಬೆಳೆ ನೆಲ ಕಚ್ಚಿದ ದೃಶ್ಯ ಗೋಚರಿಸಿದೆ.

ಕೂಡಿಗೆ ಅಳುವಾರ ಸಿದ್ದಲಿಂಗಪುರ ಗ್ರಾಮದಲ್ಲಿ ಹೆಚ್ಚು ಜೋಳ ಬೆಳೆಯಲಾಗಿದೆ. ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಬೆಳೆ ನೆಲಕಚ್ಚಿದೆ. ಈ ಬಾರಿ ಹೈಬ್ರೀಡ್ ತಳಿಯ ಜೋಳದ ಬೆಳೆ ಈಗಾಗಲೇ ನಾಲ್ಕು ಐದು ಅಡಿಗಳ ಎತ್ತರಕ್ಕೆ ಬೆಳೆದು ನಿಂತಿತ್ತು. ಬಿರುಗಾಳಿ ಮಾದರಿಯಲ್ಲಿ ಬೀಸಿದ ಗಾಳಿಗೆ ಬೆಳೆ ನೆಲಕ್ಕೆ ಬಿದ್ದಿದೆ.

ಸಂಬಂಧಿಸಿದ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಪರಿಹಾರ ಒದಗಿಸುವಂತೆ ನಷ್ಟಕ್ಕೆ ಒಳಗಾದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪದ ಜೇನುಕಲ್ಲು ಬೆಟ್ಟದ ರಸ್ತೆಯಲ್ಲಿ ಗಾಳಿಗೆ ಎರಡು ಮರಗಳು ಬಿದ್ದಿದ್ದವು. ಅವುಗಳನ್ನು ಗ್ರಾಮಸ್ಥರ ಸಹಕಾರದಿಂದ ಅರಣ್ಯ ಇಲಾಖೆಯವರು ತೆರವುಗೊಳಿಸಿದರು.

ಹಾರಂಗಿ ಜಲಾಶಯದಿಂದ ನೀರು ನದಿಗೆ

ಹಾರಂಗಿಯ ಜಲಾಶಯದಿಂದ ನದಿಗೆ 11 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು, ಜಲಾನಯನ ಪ್ರದೇಶದ ಮೇಲ್ಭಾಗದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಹೆಚ್ಚುವರಿಯಾಗಿ ನೀರು ಬರುತ್ತಿದೆ. ಆದ್ದರಿಂದಾಗಿ ಅಣೆಕಟ್ಟೆಯಿಂದ ನದಿಗೆ ಹೆಚ್ಚು ನೀರನ್ನು ಹರಿಸಲಾಗುತ್ತಿದೆ.

2859 ಅಡಿ ಗರಿಷ್ಠ ಸಾಮಾಥ್ರ್ಯದ ಜಲಾಶಯದಲ್ಲಿ 2856.62 ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಯ ನಾಲ್ಕು ಕ್ರೇಸ್ಟ್ ಗೇಟ್‍ನ ಮೂಲಕ 11 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಲ್ಲಿ ವಿದ್ಯುತ್ ಘಟಕದ ಮೂಲಕ 1 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ.

ಅಣೆಕಟ್ಟೆಯಿಂದ ನಾಲೆಗೆ 1,500 ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ. ಹೆಚ್ಚು ನೀರು ಬರುತ್ತಿರುವ ಹಿನ್ನೆಲೆಯಲ್ಲಿ ದಿನದ 24 ಗಂಟೆ ಕಾವೇರಿ ನೀರಾವರಿ ನಿಗಮದ ಅಭಿಯಂತರ ಚೆನ್ನಕೇಶವ, ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ಇಂಜಿನಿಯರ್ ನಾಗರಾಜ್, ಕಿರಣ್ ಸೇರಿದಂತೆ ಸಿಬ್ಬಂದಿ ವರ್ಗ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಮನೆಗೆ ಮರ

ಸಿದ್ದಾಪುರ: ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕರಡಿಗೋಡುವಿನ ಕಾವೇರಿ ನದಿ ತೀರದಲ್ಲಿ ನೀರಿನ ಮಟ್ಟ ಅಪಾಯದಲ್ಲಿ ಹರಿಯುತ್ತಿರುವ ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಹರೀಶ್, ಗ್ರಾಮಲೆಕ್ಕಿಗ ಓಮಪ್ಪ ಬಣಕರ್ ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಶಿವಕುಮಾರ್ ಹಾಗೂ ಪಿಡಿಓ ವಿಶ್ವನಾಥ್ ಭೇಟಿ ನೀಡಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಸುರಿಯುತ್ತಿರುವ ಗಾಳಿ ಮಳೆಗೆ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಸಿದ್ದಾಪುರದ ಗುಹ್ಯ ಗ್ರಾಮದ ಕೂಡು ಗದ್ದೆ ನಿವಾಸಿ ಪಚ್ಚಿಅಪ್ಪ ಎಂಬವರ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಪರಿಶೀಲಿಸಿದರು.

ನದಿ ಹರಿವು ಹೆಚ್ಚಳ

ನದಿ ತೀರದ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳಿಗೆ ಆತಂಕ ಸೃಷ್ಠಿಸಿದೆ. ಕಳೆದ ಬಾರಿಯ ಮಹಾ ಮಳೆಗೆ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಭಾಗದಲ್ಲಿ ಪ್ರವಾಹಕ್ಕೆ ಸಿಲುಕಿ ನೂರಾರು ಮನೆಗಳು ನೆಲಸಮಗೊಂಡಿತ್ತು.

ಇದೀಗ ಮತ್ತೊಮ್ಮೆ ಆಗಸ್ಟ್ ತಿಂಗಳಿನಲ್ಲಿ ಮಳೆಯ ರಭಸವು ಹೆಚ್ಚಾಗಿದ್ದು, ನದಿ ತೀರದ ಬಳಿ ಶೆಡ್ಡುಗಳಲ್ಲಿ ವಾಸ ಮಾಡಿಕೊಂಡಿರುವ ನಿವಾಸಿಗಳು ಭಯಭೀತರಾಗಿದ್ದಾರೆ. ಈಗಾಗಲೇ ಕಂದಾಯ ಇಲಾಖೆಯ ವತಿಯಿಂದ ನದಿ ತೀರದಲ್ಲಿ ವಾಸ ಮಾಡಿಕೊಂಡಿರುವ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪ್ರಕಟಣೆ ಮೂಲಕ ಸೂಚಿಸಲಾಗಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಇಲಾಖಾ ಸಿಬ್ಬಂದಿಗಳು ಪ್ರವಾಹ ಪೀಡಿತ ಸ್ಥಳಗಳಾದ ಹಾಲುಗುಂದ ಕೊಂಡಂಗೇರಿ, ಕರಡಿಗೋಡು, ಗುಹ್ಯ ಗ್ರಾಮಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಂಡಿದ್ದಾರೆ.

ಕುಶಾಲನಗರ: ಕುಶಾಲನಗರ ವ್ಯಾಪ್ತಿಯಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ಕಾವೇರಿ ದೃಶ್ಯದೊಂದಿಗೆ ಪಟ್ಟಣ ಸೇರಿದಂತೆ ಸುತ್ತ ಮುತ್ತ ಪ್ರದೇಶದಲ್ಲಿ ಮಳೆ ಕಂಡು ಬಂದಿದೆ. ಕಾವೇರಿ ನದಿ ಪಾತ್ರದಲ್ಲಿ ಹೆಚ್ಚಿನ ಮಳೆ ಹಿನ್ನೆಲೆಯಲ್ಲಿ ಕುಶಾಲನಗರ ಭಾಗದಲ್ಲಿ ನದಿ ತುಂಬಿ ಹರಿಯುವ ಚಿತ್ರಣವನ್ನು ಕಾಣಬಹುದು.

ಗದ್ದೆಗಳಿಗೆ ನುಗ್ಗಿದ ನದಿ ನೀರು

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬೆಟ್ಟಗೇರಿ ಬಳಿ ಕಾವೇರಿ ನೀರು ಗದ್ದೆಗಳಿಗೆ ನುಗ್ಗಿದೆ. ಈ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದರೂ ಭಾಗಮಂಡಲ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಕಾವೇರಿ ನದಿಯ ಹರಿವು ಹೆಚ್ಚಾಗಿದೆ. ಕಳೆದ ಎರಡು ವರ್ಷ ಅಂದರೆ 2018-19ರಲ್ಲಿ ಕೊಡಗಿನಲ್ಲಿ ನಡೆದ ದುರಂತ, ಜನರು ಪಟ್ಟಪಾಡು, ಆ ಕಷ್ಟದ ದಿನಗಳು ಇನ್ನೂ ಮಾಸುವ ಮುನ್ನ ಮತ್ತೆ ಆ ದಿನಗಳು ನೆನಪಿಗೆ ಬರತೊಡಗಿದೆ. ಕಳೆದ ಎರಡು ವರ್ಷಗಳು ಕೂಡ ದುರಂತ ನಡೆದಿದ್ದು ಈ ತಿಂಗಳಿನಲ್ಲಿಯೆ.

ಅಲ್ಲದೆ 2019ರಲ್ಲಿ ಕಾವೇರಿ ನದಿ ತಟದ ಹಲವು ಮನೆಗಳು ಮುಳುಗಿದ್ದವು, ಮಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ಏನಾಗುತ್ತೋ ಎಂಬ ಆತಂಕದಲ್ಲಿ ಜನರು ದಿನ ತಳ್ಳುತ್ತಿದ್ದಾರೆ. ಒಂದು ಕಡೆಯಿಂದ ಜನರಲ್ಲಿ ಕಾವೇರಿ ಪ್ರವಾಹ ಭಯ; ಮತ್ತೊಂದು ಕಡೆ ಕೊರೊನಾ ಭಯ ಮೂಡಿದೆ.

ಸೋಮವಾರಪೇಟೆಯಾದ್ಯಂತ ಗಾಳಿ ಮಳೆ

ಕಳೆದ 24 ಗಂಟೆಗಳಲ್ಲಿ ವಾಯು ವರುಣನ ಆರ್ಭಟ ಜೋರಾಗಿದ್ದು, ಭಾರೀ ಗಾಳಿ-ಮಳೆಗೆ ಜನಜೀವನ ತತ್ತರಿಸಿದೆ. ದಿಢೀರ್ ಬಿರುಸುಗೊಂಡ ಮಳೆಯೊಂದಿಗೆ ಗಾಳಿಯೂ ಜೋರಾಗಿ ಬೀಸುತ್ತಿರುವದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಭಾರೀ ಗಾಳಿಗೆ ಅಲ್ಲಲ್ಲಿ ಮರಗಳು ಧರಾಶಾಹಿಯಾಗುತ್ತಿದ್ದು, ಸದ್ಯಕ್ಕೆ ಯಾವದೇ ಗಂಭೀರ ಪ್ರಮಾಣದ ಹಾನಿ ಸಂಭವಿಸಿಲ್ಲ ಎಂದು ತಾಲೂಕು ಕಚೇರಿ ವರದಿ ತಿಳಿಸಿದೆ. ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಕೊತ್ನಳ್ಳಿ, ಹೆಗ್ಗಡಮನೆ, ಮಲ್ಲಳ್ಳಿ, ಕುಮಾರಳ್ಳಿ, ಬಾಚಳ್ಳಿ, ಕುಂದಳ್ಳಿ, ಶಾಂತಳ್ಳಿ, ಹರಗ, ಗರ್ವಾಲೆ, ಸೂರ್ಲಬ್ಬಿ, ಮಂಕ್ಯ, ತೋಳೂರುಶೆಟ್ಟಳ್ಳಿ ಸೇರಿದಂತೆ ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ ತೋಳೂರುಶೆಟ್ಟಳ್ಳಿಗೆ ದಾಖಲೆಯ 8 ಇಂಚು ಮಳೆ ಸುರಿದಿದೆ. ಈವರೆಗೆ ಒಂದೇ ದಿನ ಸುರಿದ ಅತೀ ಹೆಚ್ಚು ಮಳೆ ಇದೆಂದು ತೋಳೂರುಶೆಟ್ಟಳ್ಳಿಯ ಕೃಷಿಕ ಕೆ.ಕೆ. ಸುಧಾಕರ್ ತಿಳಿಸಿದ್ದಾರೆ.

ದಿನದ 24 ಗಂಟೆಯೂ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಕಟ್ಟೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಸಣ್ಣಪುಟ್ಟ ನದಿತೊರೆಗಳು ತುಂಬುತ್ತಿವೆ. ಭಾರೀ ಗಾಳಿ ಮಳೆಯಿಂದಾಗಿ ಬಹುತೇಕ ಕಾಫಿ ತೋಟಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ.

ಕಾಫಿ ತೋಟದೊಳಗೆ ಮರಗಳು ಉರುಳುತ್ತಿವೆ. ಸೋಮವಾರಪೇಟೆ-ಕುಶಾಲನಗರದ ರಾಜ್ಯ ಹೆದ್ದಾರಿಯ ನಾಲ್ಕು ಕಡೆಗಳಲ್ಲಿ ಮರಗಳು ರಸ್ತೆಗಡ್ಡಲಾಗಿ ಉರುಳಿದ್ದು, ವಾಹನ ಸಂಚಾರಕ್ಕೆ ಕೆಲಕಾಲ ತೊಡಕಾಗಿತ್ತು. ಸ್ಥಳೀಯರು ಮರಗಳನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರ ಸುಗಮವಾಯಿತು.

ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ರಸ್ತೆಗಳು ಇನ್ನಷ್ಟು ದುಸ್ಥಿತಿಗೆ ತಲುಪುತ್ತಿವೆ. ಈಗಾಗಲೇ ನಿರ್ಮಾಣವಾಗಿರುವ ಗುಂಡಿಗಳಲ್ಲಿ ಕೆಸರು ನೀರು ಸಂಗ್ರಹವಾಗಿದ್ದು, ವಾಹನ-ಜನ ಸಂಚಾರಕ್ಕೆ ತೊಡಕಾಗುತ್ತಿದೆ.

ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು, ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಹಿರಿಕರ ಗ್ರಾಮದ ಎಚ್.ಪಿ.ಸುರೇಶ್ ಎಂಬವರ ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರ, 11 ಕೆ.ವಿ.ವಿದ್ಯುತ್ ಮಾರ್ಗದ ತಂತಿ ಮೇಲೆ ಬಿದ್ದ ಪರಿಣಾಮ ಎರಡು ಕಂಬಗಳು ಮುರಿದುಬಿದ್ದಿವೆ. ವಿದ್ಯುತ್ ಇಲ್ಲದ ಪರಿಣಾಮ ಅನಾಹುತ ತಪ್ಪಿದೆ.

ಕಿರಗಂದೂರು ಗ್ರಾಮದಿಂದ ಬಿಳಿಗೇರಿ ಮಾರ್ಗದ ಕುಂಬೂರಿನವರೆಗೆ ಆರು ಮರಗಳು ರಸ್ತೆಗೆ ಬಿದ್ದಿವೆ. ವಿದ್ಯುತ್ ಮಾರ್ಗ ಹಾನಿಯಾಗಿದೆ. ಯಡವನಾಡು ಗ್ರಾಮದ ಗಣಪತಿಯವರ ಜೋಳ ಬೆಳೆ ಬಿರುಗಾಳಿಗೆ ತುತ್ತಾಗಿ ನೆಲಕಚ್ಚಿದೆ. ಪ್ರತಿ ವರ್ಷ ಕಾಡಾನೆಗಳು ಜೋಳ ಫಸಲನ್ನು ತಿಂದು ನಷ್ಟಪಡಿಸುತ್ತಿದ್ದವು. ಈ ವರ್ಷ ಮಳೆ ದೊಡ್ಡಮಟ್ಟದ ಹಾನಿ ಮಾಡಿದೆ ಎಂದು ಕೃಷಿಕ ಗಣಪತಿ ತಿಳಿಸಿದ್ದಾರೆ.

ನಿನ್ನೆ ಸಂಜೆಯಿಂದ ರಾತ್ರಿಯಿಡೀ ಭಾರೀ ಗಾಳಿ ಮಳೆಯಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ನಿನ್ನೆ ರಾತ್ರಿಯಿಂದಲೇ ಪಟ್ಟಣ ಸೇರಿದಂತೆ ಸುತ್ತಮುತ�