ಕಣಿವೆ, ಆ. 3: ಕೊಡಗು ಜಿಲ್ಲೆಯ ಪ್ರಮುಖ ವಾಣಿಜ್ಯ ಹಾಗೂ ಶೈಕ್ಷಣಿಕ ನಗರ ಕುಶಾಲನಗರದಲ್ಲಿ ಕಳೆದ ಹನ್ನೆರಡು ವರ್ಷಗಳ ಹಿಂದೆ ಆರಂಭಗೊಂಡ ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರ (ಕುಡ) ಇದೂವರೆಗೂ ಸ್ವಂತ ಕಟ್ಟಡವನ್ನೂ ಕೂಡ ಹೊಂದದಷ್ಟ್ಟು ಬಡತನದಲ್ಲಿ ಸಿಲುಕಿದ್ದು ಸೂಕ್ತ ಕಾಯಕಲ್ಪಕ್ಕೆ ಕಾಯುತ್ತಿದೆ. ಪಟ್ಟಣದ ಕಾವೇರಿ ಬಡಾವಣೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರ ವಾಸದ ಮನೆಯಲ್ಲಿ ಮಾಸಿಕ 9 ಸಾವಿರ ರೂ. ಬಾಡಿಗೆ ಕರಾರಿನೊಂದಿಗೆ ಆರಂಭವಾದ ಈ ಕಚೇರಿಗೆ ಸ್ವಂತ ಕಟ್ಟಡವಿರಲೀ, ಅಗತ್ಯವಿರುವ ಅಧಿಕಾರಿಯನ್ನೇ ಸರ್ಕಾರ ನೇಮಿಸಿಲ್ಲ. 2008ರಲ್ಲಿ ಆರಂಭವಾದ ಈ ಪ್ರಾಧಿಕಾರದಲ್ಲಿ ಆರಂಭದಿಂದ ಈತನಕವೂ ಅಂದರೆ ಬಹುತೇಕ ಒಂಭತ್ತು ವರ್ಷಗಳ ಕಾಲ ಕೊಡಗು ಉಪವಿಭಾಗಾಧಿ ಕಾರಿಗಳೇ ಸದಸ್ಯ ಕಾರ್ಯದರ್ಶಿ ಯಾಗಿದ್ದರು. ಬಳಿಕ 2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೊದಲಿಗರು ಎಂಬಂತೆ ಸ್ಥಳೀಯ ನಿವಾಸಿ ಕಾಂಗ್ರೆಸ್ ಪಕ್ಷದ ಎಸ್.ಎನ್. ನರಸಿಂಹಮೂರ್ತಿ ಅವರನ್ನು 2015-16ನೇ ಸಾಲಿಗೆ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಳಿಸಿತ್ತು. ನಂತರ ಅದೇ ಪಕ್ಷದ ಬಿ.ಜಿ. ಮಂಜುನಾಥ ಗುಂಡೂರಾವ್ ಅವರ ನೇಮಕವಾಗಿತ್ತು. ಇವರಿಬ್ಬರನ್ನು ಹೊರತುಪಡಿಸಿದರೆ ಈವರೆಗೂ ಯಾರೂ ನೇಮಕವಾಗದ ಪ್ರಾಧಿಕಾರಕ್ಕೆ ಈಗಿನ ಬಿಜೆಪಿ ಸರ್ಕಾರ ಬಿಜೆಪಿಯ ಎಂ.ಎಂ. ಚರಣ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಈಗಷ್ಟೇ ನೇಮಿಸಿದೆ.

ಆದರೆ ಈ ಪ್ರಾಧಿಕಾರಕ್ಕೆ ಅಗತ್ಯವಾಗಿ ಬೇಕಿರುವ ಆಯುಕ್ತರು, ಅಭಿಯಂತರರು ಹಾಗೂ ಕಚೇರಿ ಸಿಬ್ವಂದಿಗಳನ್ನು ಸರ್ಕಾರ ಇದೂವರೆಗೂ ನೇಮಕ ಮಾಡಿಲ್ಲ. ಈಗ ಹಾಲಿ ಇರುವ ಪ್ರಾಧಿಕಾರದ ಆಯುಕ್ತರು ಮೈಸೂರಿನ ಮೂಡಾದ ಜೊತೆಗೆ ಮಡಿಕೇರಿ ಹಾಗೂ ಕುಶಾಲನಗರ ಎರಡೂ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾರದಲ್ಲಿ ಎರಡು ದಿನ ಮಾತ್ರ ಕಚೇರಿ ಕೆಲಸಗಳಿಗೆ ಆಯುಕ್ತರು ಮತ್ತು ಅಭಿಯಂತರರು ಲಭ್ಯವಾಗುತ್ತಾರೆ. ಅಷ್ಟಕ್ಕೂ ಇಲ್ಲಿನ ಅಭಿಯಂತರರೂ ಕೂಡ ಮಡಿಕೇರಿಯ ಕಚೇರಿಯರೇ. ಹೆಚ್ಚುವರಿಯಾಗಿ ಇಲ್ಲಿಗೆ ವಾರದಲ್ಲಿ ಎರಡು ದಿನ ನೇಮಿಸಲಾಗಿದೆ. ಇನ್ನು ಕಚೆÉೀರಿ ಸಹಾಯಕಿ ಹಾಗೂ ಸ್ವಚ್ಛತಾ ಸಿಬ್ವಂದಿಗಳು ಇಬ್ಬರಿದ್ದು ಅವರನ್ನು ಹೊರಗುತ್ತಿಗೆಯಲ್ಲಿ ನೇಮಕಗೊಳಿಸಲಾಗಿದೆ.

ಸ್ವಂತ ಕಟ್ಟಡವೇ ಇಲ್ಲ : ಹನ್ನೆರಡು ವರ್ಷಗಳ ಹಿಂದೆ ಆರಂಭವಾದ ಪ್ರಾಧಿಕಾರಕ್ಕೆ ಸ್ವಂತ ಕಟ್ಟಡ ಒದಗಿಸಲು ಜಿಲ್ಲಾಡಳಿತಕ್ಕೆ ಇಷ್ಟ್ಟೊಂದು ಕಾಲಾವಧಿ ಬೇಕೆ ಎಂಬುದು ಇಲ್ಲಿ ಪ್ರಶ್ನೆ. ಈಗಾಗಲೇ ಸರ್ಕಾರದ ಮಟ್ಟದಲ್ಲಿ ತಾಲೂಕಾಗಿ ಘೋಷಿತಗೊಂಡಿರುವ ಕುಶಾಲನಗರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸ್ವಂತ ಕಟ್ಟಡ ದೊರಕಿಸಲು ಬೇಕಾದಷ್ಟ್ಟು ಸರ್ಕಾರಿ ಆಸ್ತಿಗಳಿವೆ. ಪಿಡಬ್ಲ್ಯೂಡಿ ಹಾಗೂ ನೀರಾವರಿ ಇಲಾಖೆ ಹಾಗೂ ಸ್ಥಳೀಯ ಪಂಚಾಯಿತಿಯಲ್ಲಿನ ಸುಪರ್ದಿಗೆ ಒಳಪಟ್ಟ ಆಸ್ತಿಗಳಿವೆ. ಆದರೆ ಆಡಳಿತಾರೂಢರಿಗೆ ಯಾರಿಗೂ ಅಭಿವೃದ್ಧಿ ಮಾಡಬೇಕೆಂಬ ಅಪೇಕ್ಷೆಗಳಿಲ್ಲ. ಹಾಗಾಗಿ ಇದುವರೆಗೂ ಬಾಡಿಗೆ ಮನೆಯೊಂದರಲ್ಲಿಯೇ ಈ ಕಚೇರಿ ಕಾರ್ಯ ಸಾಗಿದೆ.

ಪ್ರಾಧಿಕಾರದ ಎಲ್ಲೆ : ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 320 ಹೆಕ್ಟೇರ್ ಭೂ ಪ್ರದೇಶವಿದ್ದು, ಪಂಚಾಯಿತಿ ವ್ಯಾಪ್ತಿಯ ಹೊರಗೆ ಸರ್ಕಾರಿ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜು, ಕೂಡ್ಲೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ 250 ಹೆಕ್ಟೇರ್ ಇದೆ. ಜೊತೆಗೆ ಅಕ್ಕಪಕ್ಕದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳು ನಡೆಯುತ್ತಿರುವುದರಿಂದ ಇವುಗಳನ್ನು ಯೋಜನಾಬದ್ಧವಾಗಿ ನಿಯಂತ್ರಿಸಲು ಹಾಗೂ ನಿರ್ವಹಿಸಲು ಈ ಎಲ್ಲಾ ಪ್ರದೇಶಗಳನ್ನು ಸೇರಿಸಿಕೊಂಡು 2021ನೇ ಸಾಲಿಗೆ 26 ಸಾವಿರದಷ್ಟ್ಟು ಹೆಚ್ಚಬಹುದಾದ ಕುಶಾಲನಗರದ ಜನಸಂಖ್ಯೆಯನ್ನು ಗಮನದಲ್ಲಿರಿಸಿ ಜನಸಾಂದ್ರತೆ ಪ್ರಕಾರ ಪ್ರತಿ ಹೆಕ್ಟೇರ್‍ಗೆ 24 ಎಂದು ಪರಿಗಣಿಸಿ ಒಟ್ಟಾರೆ 1105 ಹೆಕ್ಟೇರ್ ವಿಸ್ತೀರ್ಣಕ್ಕೆ ಸ್ಥಳೀಯ ಯೋಜನಾ ಪ್ರದೇಶವೆಂದು ಸರ್ಕಾರ 2008 ರಲ್ಲಿ ನಿಗದಿಗೊಳಿಸಿದೆ. 1105 ಹೆಕ್ಟೇರ್ ಭೂ ಪ್ರದೇಶದ ಪೈಕಿ 480 ಹೆಕ್ಟೇರ್‍ನಲ್ಲಿ ವಸತಿ, 50 ಹೆಕ್ಟೇರ್‍ನಲ್ಲಿ ವಾಣಿಜ್ಯ, 99 ಹೆಕ್ಟೇರ್‍ನಲ್ಲಿ ಕೈಗಾರಿಕೆ, 108 ಹೆಕ್ಟೇರ್‍ನಲ್ಲಿ ಉದ್ಯಾನವನ, 125 ಹೆಕ್ಟೇರ್‍ನಲ್ಲಿ ರಸ್ತೆಗಳು, 3.72 ಹೆಕ್ಟೇರ್‍ನಲ್ಲಿ ಸಾರ್ವಜನಿಕರ ಉಪಯೋಗದ ಕಟ್ಟಡಗಳು, 52 ಹೆಕ್ಟೇರ್‍ನಲ್ಲಿ ಸರ್ಕಾರಿ ಹಾಗೂ ಅರೆ ಸರ್ಕಾರಿ ಇಲಾಖೆಗಳು, 178 ಹೆಕ್ಟೇರ್‍ನಲ್ಲಿ ನೀರಾವರಿ ಭೂ ಪ್ರದೇಶ, 5.48 ಹೆಕ್ಟೇರ್‍ನಲ್ಲಿ ಕೆರೆ, ನದಿ, ತೊರೆಗಳು ಸೇರಲಿವೆ. ಅಂದರೆ ಈ ಪ್ರಾಧಿಕಾರ ಕುಶಾಲನಗರ ಪಟ್ಟಣ, ಬೈಚನಹಳ್ಳಿ, ಮಾದಾಪಟ್ಟಣ, ಮುಳ್ಳುಸೋಗೆ, ಗುಮ್ಮನಕೊಲ್ಲಿ, ಕೂಡ್ಲೂರು ಗ್ರಾಮಗಳ ವ್ಯಾಪ್ತಿಯ ಒಳಪಟ್ಟಿದೆ. ಖಾಸಗಿ ವ್ಯಕ್ತಿಗಳು ಖಾಸಗಿ ಭೂಮಿಯಲ್ಲಿ ವಸತಿ, ವಾಣಿಜ್ಯ ಅಥವಾ ಕೈಗಾರಿಕಾ ಉದ್ದೇಶಗಳಿಗಾಗಿ ಬಡಾವಣೆಗಳನ್ನು ನಿರ್ಮಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಪಟ್ಟಣ ಪಂಚಾಯಿತಿಗಳಿಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುತ್ತಾರೆ. ಬಡಾವಣೆ ನಿರ್ಮಾಣದ ಸಂಬಂಧಿತ ಅರ್ಜಿಗಳನ್ನು ಆಯಾಯ ಸ್ಥಳೀಯ ಆಡಳಿತಗಳು ಕುಶಾಲನಗರ ಯೋಜನಾ ಪ್ರಾಧಿಕಾರಕ್ಕೆ ಕಡ್ಡಾಯವಾಗಿ ಸಲ್ಲಿಸುತ್ತವೆ. ಹೀಗೆ ಸಲ್ಲಿಕೆಯಾದ ಬಡಾವಣೆಯ ಸಂಬಂಧಿತ ಅರ್ಜಿಗಳು ಹಾಗೂ ಸ್ಥಳವನ್ನು ಪರಿಶೀಲನೆ ನಡೆಸುವ ಪ್ರಾಧಿಕಾರವು ಸೂಕ್ತ ನಿರ್ದೇಶನ ಹಾಗೂ ಆಡಳಿತಾತ್ಮಕ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತದೆ. ಕೇವಲ ಖಾಸಗಿ ಜಾಗಗಳಲ್ಲಿ ಬಡಾವಣೆಯ ನಿರ್ಮಾಣದ ಕೆಲಸ ಮಾಡುವ ಈ ಪ್ರಾಧಿಕಾರಕ್ಕೆ ಸ್ಥಳೀಯವಾಗಿ ಒತ್ತುವರಿಯಾಗಿರುವ ಅಥವಾ ಆಗುತ್ತಿರುವ ಯಾವುದೇ ತೆರನಾದ ಸರ್ಕಾರಿ ಭೂಮಿಯನ್ನು ಸಂರಕ್ಷಿಸುವ ಅಧಿಕಾರ ಇರುವುದಿಲ್ಲ ಎನ್ನಲಾಗಿದೆ. ಕುಶಾಲನಗರ ಪಟ್ಟಣದಲ್ಲಿ ಕಳೆದ ಎರಡೂವರೆ ದಶಕಗಳಿಂದ ಅಪಾರ ಪ್ರಮಾಣದ ಸರ್ಕಾರಿ ಭೂಮಿ ಪರಾಭಾರೆ ಹಾಗೂ ಒತ್ತುವರಿಗಳಿಂದ ಕೂಡಿದ್ದರೂ ಕೂಡ ಕಳೆದ 12 ವರ್ಷಗಳಲ್ಲಿ ಇದೂವರೆಗೂ ಒಂದೇ ಒಂದು ಪ್ರಕರಣದ ವಿರುದ್ಧ ಕ್ರಮಗಳನ್ನು ಜರುಗಿಸಿದ ಪ್ರಸಂಗಗಳಿಲ್ಲ. ಈಗ ಹೊಸದಾಗಿ ನೇಮಕವಾಗಿರುವ ಅಧ್ಯಕ್ಷ ಚರಣ್, ಸದಸ್ಯರಾದ ಪುಂಡರೀಕಾಕ್ಷ, ಮಧುಸೂದನ್ ಹಾಗೂ ವೈಶಾಕ್ ಕಾರ್ಯವೈಖರಿಯ ಬಗ್ಗೆ ಸ್ಥಳೀಯರಿಗೆ ಹೊಸ ನಿರೀಕ್ಷೆಗಳಿವೆ. ಚರಣ್ ಪಂಚಾಯಿತಿ ಅಧ್ಯಕ್ಷರಾಗಿ ಕುಶಾಲನಗರ ಪಟ್ಟಣ ಹಾಗೂ ಪ್ರಾಧಿಕಾರದ ಬಗ್ಗೆ ಒಂದಷ್ಟು ತಿಳಿದವರಾಗಿ ದ್ದಾರೆ. -ಕೆ.ಎಸ್. ಮೂರ್ತಿ