ಮುಳ್ಳೂರು, ಆ. 3: ಬಗರ್ ಹುಕುಂ ಸಾಗುವಳಿದಾರರು, ಬುಡಕಟ್ಟು ಆದಿವಾಸಿಗಳು ಸೇರಿದಂತೆ ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೂ ಸರಕಾರ ಭೂಮಿ ಹಕ್ಕುಪತ್ರ ನೀಡಬೇಕೆಂದು ಕರ್ನಾಟಕ ಭೂ ಹಕ್ಕುದಾರರ ಕೊಡಗು ಜಿಲ್ಲಾ ವೇದಿಕೆಯ ಕ್ಷೇತ್ರ ಸಂಚಾಲಕ ಬಿ.ಕೆ. ಧರ್ಮಪ್ಪ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, 1991 ರಿಂದ 98 ಅವಧಿವರೆಗೆ ನಮೂನೆ 50 ಮತ್ತು 53ರಲ್ಲಿ ಬಗೂರ್ ಹುಕುಂ ಕುರಿತಾದ ಅರ್ಜಿ ಸಲ್ಲಿಸಿದ್ದರೂ ಸರಕಾರ ಇಲ್ಲಿಯವರೆಗೆ ಕೇವಲ ಬೆರಳೆಣಿಕೆಯಷ್ಟು ರೈತರಿಗೆ ಭೂ ಹಕ್ಕುಪತ್ರ ನೀಡಿದೆ.

ನಮೂನೆ 57ರಲ್ಲಿ ಭೂ ಸಕ್ರಮೀಕರಣಕ್ಕಾಗಿ ರೈತರು ಅರ್ಜಿ ಸಲ್ಲಿಸಿದರೂ ಭೂ ಹಕ್ಕುಪತ್ರ ಸರಕಾರ ನೀಡಿಲ್ಲ. ಒಟ್ಟಾರೆ ಬಗರ್ ಹುಕುಂ ಸಾಗುವಳಿದಾರರು, ಬುಡಕಟ್ಟು ಆದಿವಾಸಿಗಳು ಹಾಗೂ ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಭೂ ಹಕ್ಕುಪತ್ರ ನೀಡುವ ಪ್ರಸ್ತಾವನೆ ದಶಕಗಳಿಂದ ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ 1878 ಅರ್ಜಿಗಳು, ಮಡಿಕೇರಿ ತಾಲೂಕಿನಲ್ಲಿ 988, ಸೋಮವಾರಪೇಟೆ ತಾಲೂಕಿನಲ್ಲಿ 8466 ಅರ್ಜಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 11,332 ಅರ್ಜಿಗಳು ಸಕ್ರಮೀಕರಣಕ್ಕೆ ಬಾಕಿ ಇದೆ. ಈಗಿನ ಸರಕಾರ 2006ರ ಅನುಸೂಚಿತ ಬುಡಕÀಟ್ಟು ಆದಿವಾಸಿಗಳು ಮತ್ತು ಪಾರಂಪರಿಕ ಅರಣ್ಯ ವಾಸಿಗಳಿಗೆ ವೈಯುಕ್ತಿಕ ಭೂ ಹಕ್ಕುಪತ್ರ ನೀಡುತ್ತಿರುವುದು ಶ್ಲಾಘನಿಯ ಕ್ರಮವಾಗಿದ್ದು; ಈ ದಿಸೆಯಲ್ಲಿ ಸರಕಾರ ಬಾಕಿಯಾಗಿರುವ ಇತರೆ ಅರ್ಜಿದಾರರಿಗೂ ತ್ವರಿತವಾಗಿ ಭೂ ಹಕ್ಕುಪತ್ರ ನೀಡುವಂತೆ ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.