ಕುಶಾಲನಗರ, ಆ. 3: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಘಟಕ ವತಿಯಿಂದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಕೋ ಕ್ಲಬ್ ಆಶ್ರಯದಲ್ಲಿ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ಆಚರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪಾಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿ ಶಾಲೆಯಲ್ಲಿ ಶಿಕ್ಷಕರು ಇಕೋ ಕ್ಲಬ್ ಮೂಲಕ ಶಾಲಾ ಪರಿಸರವನ್ನು ಸ್ವಚ್ಛ, ಸುಂದರವಾಗಿ ರೂಪಿಸುವ ಮೂಲಕ ಸ್ವಚ್ಛತೆ, ನೈರ್ಮಲ್ಯೀಕರಣ ಹಾಗೂ ಸ್ವಚ್ಛ ಪರಿಸರದಲ್ಲಿ ತೊಡಗುವಂತೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು.

ವಿಶ್ವ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ. ಪ್ರೇಮಕುಮಾರ್, ಶಾಲೆಗಳಲ್ಲಿ ಇಕೋ ಕ್ಲಬ್ ಮೂಲಕ ಕೈಗೊಳ್ಳಬೇಕಾದ ಪರಿಸರ ಕಾರ್ಯ ಕ್ರಮಗಳು, ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ, ಪರಿಸರ ಪ್ರತಿಜ್ಞೆ ಬೋಧಿಸಿದರು. ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಪಿ.ಧರ್ಮಪ್ಪ, ಕಾಲೇಜಿನ ಉಪ ಪ್ರಾಂಶುಪಾಲರಾದ ಬಿ.ಬಿ. ಸಾವಿತ್ರಿ, ಬಿ.ಆರ್.ಸಿ. ಶಶಿಧರ್, ಇಸಿಓ ಕೆ.ಬಿ. ರಾಧಾಕೃಷ್ಣ, ಸಂಪನ್ಮೂಲ ಶಿಕ್ಷಕರಾದ ಎಸ್.ಎನ್. ಲೋಕೇಶ್, ಸಂತೋಷ್ ಕುಮಾರ್, ಉ.ರಾ. ನಾಗೇಶ್ ಹಾಗೂ ತಾಲೂಕಿನ ಪ್ರೌಢಶಾಲಾ ಶಿಕ್ಷಕರು, ಸಿ.ಆರ್.ಪಿ.ಗಳು ಇದ್ದರು.