ಮಡಿಕೇರಿ, ಆ. 3: ಇಂದಿನಿಂದ ಆರಂಭಗೊಂಡಿರುವ ಆಶ್ಲೇಷಾ ಮಳೆ ಮೊದಲನೆಯ ದಿನವೇ ಆರ್ಭಟಿಸುವದರೊಂದಿಗೆ, 2018ರ ತನ್ನ ತೀವ್ರತೆಯನ್ನು ನೆನಪಿಸುವ ರೀತಿಯಲ್ಲಿ ಕೊಡಗಿನ ಜನತೆ ಬೆಚ್ಚಿ ಬೀಳುವಂತೆ ಗೋಚರಿಸತೊಡಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯೆಲ್ಲೆಡೆ ಮಳೆಯಾಗುವದರೊಂದಿಗೆ ಇಂದು ಹಗಲು ಧಾರಾಕಾರ ಮಳೆ ಸುರಿಯಿತು. ಕಕ್ಕಡ 18ರ ಈ ಶ್ರಾವಣ ಹುಣ್ಣಿಮೆ ದಿವಸದ ಮಳೆ ಕೊಡಗಿನ ಜನತೆಯಲ್ಲಿ ಆತಂಕ ಉಂಟುಮಾಡಿದೆ.ಜಿಲ್ಲಾ ಕೇಂದ್ರ ಮಡಿಕೇರಿಯ ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯುವ ದೃಶ್ಯ ಒಂದೆಡೆಯಾದರೆ, ಗ್ರಾಮೀಣ ಭಾಗಗಳಲ್ಲಿ ಗಾಳಿ ಸಹಿತ ಮಳೆಯ ತೀವ್ರತೆ ಮನುಕುಲದೊಂದಿಗೆ ಜೀವ ಸಂಕುಲಕ್ಕೆ ಭಯ ಹುಟ್ಟಿಸಿದೆ. ಮಂಗಳೂರು ರಸ್ತೆಯ ಒಂದೆಡೆ ಅಲ್ಪಕುಸಿತ ಕಂಡು ಬಂದರೂ ಯಾವದೇ ಅಡಚಣೆ ಎದುರಾಗಿಲ್ಲ. ಬದಲಾಗಿ ಇಂದು ಆಶ್ಲೇಷಾ ಮಳೆ ಪ್ರಥಮ ದಿನವೇ ತೀವ್ರ ಸ್ವರೂಪದಿಂದ ದಿಗಿಲು ಹುಟ್ಟಿಸಿದಲ್ಲದೆ, ಮುಂದೇನು ಎಂಬ ಕಳವಳ ಉಂಟು ಮಾಡಿದೆ.ಮಳೆ ವಿವರ: ಪ್ರಸಕ್ತ ವರ್ಷಾರಂಭದಿಂದ ಈ ತನಕ ಆಶಾದಾಯಕವಾಗಿದ್ದ ಮಳೆಯು, ಇದೀಗ ವೇಗ ಪಡೆದುಕೊಂಡು ಜನಮಾನಸದಲ್ಲಿ ಚಿಂತೆಮೂಡಿಸಿದೆ. ಕಳೆದ 24 ಗಂಟೆಗಳಲ್ಲಿ ಪುಷ್ಪಗಿರಿ ತಪ್ಪಲಿನ ಶಾಂತಳ್ಳಿ, ಸೂರ್ಲಬ್ಬಿ, ಮುಟ್ಲು, ಕುಂಬಾರಗಡಿಗೆ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ 4.25 ಇಂಚು ಮಳೆ ಸುರಿದಿದೆ. ಆ ಭಾಗದ ಜನತೆ ಹಾಗೂ ಜಾನುವಾರುಗಳಿಗೆ ಗಾಳಿ, ಮಳೆ, ಚಳಿಯಿಂದ ಸಮಸ್ಯೆ ಎದುರಾಗಿದೆ.
ಇತ್ತ ತಲಕಾವೇರಿ, ಭಾಗಮಂಡಲ, ದಕ್ಷಿಣ ಕೊಡಗಿನ ಬಿರುನಾಣಿ ಇತರೆಡೆಗಳಲ್ಲಿ ಸರಾಸರಿ 2 ರಿಂದ 3 ಇಂಚು ಮಳೆ ದಾಖಲಾಗಿದ್ದರೆ, ಕೊಡ್ಲಿಪೇಟೆ, ಶನಿವಾರಸಂತೆ ಸುತ್ತಮುತ್ತ ಕೂಡ ಮಳೆ ಅಧಿಕಗೊಳ್ಳುವ ಲಕ್ಷಣ ಗೋಚರಿಸಿದೆ. ಜಿಲ್ಲೆಯಲ್ಲಿ ಮಳೆ ವಿವರ: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ 1.79 ಇಂಚು ಸರಾಸರಿ ಮಳೆಯಾಗಿದೆ. ಕಳೆದ ಜನವರಿಯಿಂದ ಈ ತನಕ 34.15 ಇಂಚು ಮಳೆ ಬಿದ್ದರೆ, ಕಳೆದ ವರ್ಷ ಈ ಅವಧಿಗೆ 32.94 ಇಂಚು ದಾಖಲಾಗಿತ್ತು.
ಈ ವರ್ಷಾರಂಭದಿಂದ ಇಂದಿನ ತನಕ ಮಡಿಕೇರಿ ತಾಲೂಕಿನಲ್ಲಿ ಸರಾಸರಿ 51.88 ಇಂಚು ಹಾಗೂ ಹಿಂದಿನ ವರ್ಷ ಈ ಅವಧಿಗೆ 45.39 ಇಂಚು ಮಳೆಯಾಗಿತ್ತು. ಕಳೆದ 24 ಗಂಟೆಗಳಲ್ಲಿ ತಾಲೂಕಿನಲ್ಲಿ ಸರಾಸರಿ 2.05 ಇಂಚು ಮಳೆಯಾಗಿದೆ.
ವೀರಾಜಪೇಟೆ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 30.09 ಇಂಚು ಮಳೆಯಾದರೆ, ಕಳೆದ ವರ್ಷ ಈ ಅವಧಿಗೆ 33.47 ಇಂಚು ದಾಖಲಾಗಿತ್ತು. ಕಳೆದ 24 ಗಂಟೆಗಳಲ್ಲಿ 1.81 ಇಂಚು ಮಳೆ ಬಿದ್ದಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಈ ವರ್ಷಾರಂಭದಿಂದ ಇದುವರೆಗೆ 20.49 ಇಂಚು ಹಾಗೂ ಕಳೆದ ವರ್ಷ ಪ್ರಸಕ್ತ ಸಮಯಕ್ಕೆ 19.94 ಇಂಚು ಮಳೆಯಾಗಿತ್ತು. ಹಿಂದಿನ 24 ಗಂಟೆಗಳಲ್ಲಿ 1.49 ಇಂಚು ಸರಾಸರಿ ಮಳೆ ದಾಖಲಾಗಿದೆ.
ಹೋಬಳಿವಾರು ಮಳೆ : ಹಿಂದಿನ 24 ಗಂಟೆಗಳಲ್ಲಿ ಮಡಿಕೇರಿ 2.15 ಇಂಚು, ನಾಪೋಕ್ಲು 1.70 ಇಂಚು, ಭಾಗಮಂಡಲ 2.16 ಇಂಚು, ಸಂಪಾಜೆ 2.21 ಇಂಚು ಮಳೆಯಾಗಿದೆ.
(ಮೊದಲ ಪುಟದಿಂದ) ಅಂತೆಯೇ ವೀರಾಜಪೇಟೆ 1.72 ಇಂಚು, ಹುದಿಕೇರಿ 2.72 ಇಂಚು, ಶ್ರೀಮಂಗಲ 2.32 ಇಂಚು, ಪೊನ್ನಂಪೇಟೆ 1.57, ಅಮ್ಮತ್ತಿ 1.10 ಇಂಚು, ಬಾಳೆಲೆ 1.51 ಇಂಚು ಮಳೆ ದಾಖಲಾಗಿದೆ. ಅತ್ತ ಸೋಮವಾರಪೇಟೆ 1.61 ಇಂಚು, ಶನಿವಾರಸಂತೆ 2.12 ಇಂಚು, ಕೊಡ್ಲಿಪೇಟೆ 2.70 ಇಂಚು, ಶಾಂತಳ್ಳಿ 4.25 ಇಂಚು, ಕುಶಾಲನಗರ 0.73 ಇಂಚು, ಸುಂಟಿಕೊಪ್ಪ 1.37 ಇಂಚು ಮಳೆಯಾಗಿದೆ.
ಹಾರಂಗಿ ಜಲಾಶಯ : ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮಳೆ ತೀವ್ರಗೊಂಡಿರುವ ಪರಿಣಾಮ ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವು ಅಧಿಕಗೊಂಡು 2423 ಕ್ಯೂಸೆಕ್ಸ್ ಬರುತ್ತಿದೆ. ಕಳೆದ ವರ್ಷ ಈ ಅವಧಿಗೆ 985 ಕ್ಯೂಸೆಕ್ಸ್ ಇತ್ತು. 2859 ಅಡಿ ಗರಿಷ್ಠ ಮಟ್ಟಕ್ಕಿಂತ ಪ್ರಸ್ತುತ 2856.68 ಅಡಿ ನೀರು ಶೇಖರಣೆಗೊಂಡಿದ್ದು, 1750 ಕ್ಯೂಸೆಕ್ಸ್ ನದಿಗೆ ಮತ್ತು 1000 ಕ್ಯೂಸೆಕ್ಸ್ ನಾಲೆಗೆ ಬಿಡಲಾಗಿದೆ.
ಕೂಡಿಗೆ ವ್ಯಾಪ್ತಿಯಲ್ಲಿ ಮಳೆ
ಕೂಡಿಗೆ: ಕುಶಾಲನಗರ ಹೋಬಳಿಯ ಕೂಡಿಗೆ ಕೂಡುಮಂಗಳೂರು ಹೆಬ್ಬಾಲೆ ತೂರೆನೂರು ಶಿರಂಗಾಲ ಸಿದ್ಧಲಿಂಗಪುರ ಅಳುವಾರ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಕಳೆದ ರಾತ್ರಿಯಿಂದ ಇಂದು ಸಹ ಮಳೆ ರಭಸ ಹೆಚ್ಚಾಗಿದೆ. ಈ ವ್ಯಾಪ್ತಿಯ ರೈತರಿಗೆ ಬಹಳ ಅನುಕೂಲವಾಗಿದೆ.
ಹಾರಂಗಿ ಜಲಾಶಯ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ಹಾರಂಗಿ ನೀರಿನ ಮಟ್ಟವೂ ಹೆಚ್ಚಾದ ಹಿನ್ನೆಲೆಯಲ್ಲಿ ಎರಡೂ ನದಿಗಳು ಕೂಡಿ ಹರಿಯುವ ಕೂಡಿಗೆ ಮತ್ತು ಕಣಿವೆ ಭಾಗದಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಹೆಚ್ಚಾಗಿದೆ.
ನಾಟಿ ಕಾರ್ಯ ಪ್ರಾರಂಭ
ಹಾರಂಗಿ ಅಣೆಕಟ್ಟೆಯು ಭರ್ತಿಯಾದ ಹಿನ್ನೆಲೆಯಲ್ಲಿ ಹಾರಂಗಿ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ನಾಟಿ ಕಾರ್ಯವನ್ನು ರೈತರು ಪ್ರಾರಂಭ ಮಾಡಿರುತ್ತಾರೆ. ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ತಮ್ಮ ಜಮೀನಿನಲ್ಲಿ ಇದೀಗ ನಾಟಿ ಮಾಡಲು ಸಿದ್ದರಾಗಿದ್ದಾರೆ.
ಹಾರಂಗಿಯ ಅಚ್ಚುಕಟ್ಟು ಪ್ರದೇಶದಗಳಾದ ಹುದುಗೂರು ಮಲ್ಲೇನಹಳ್ಳಿ ಮದಲಾಪುರ, ಹೆಬ್ಬಾಲೆ, ತೊರೆನೂರು ಶಿರಂಗಾಲ, ಹಳೇಗೊಟೆ, ಕಣಿವೆ, ಕೂಡಿಗೆ ವ್ಯಾಪ್ತಿಗಳಲ್ಲಿ ನಾಟಿ ಕಾರ್ಯ ಚುರುಕುಗೊಂಡಿದೆ. ಈ ಸಾಲಿನಲ್ಲಿ ರೈತರು ಹೆಚ್ಚು ಸಾವಯವ ಗೊಬ್ಬರ ಬಳಕೆ ಮಾಡಲು ಮುಂದಾಗಿರುವುದು ಕಾಣಬಹುದಾಗಿದೆ.
ಸೋಮವಾರಪೇಟೆಯಾದ್ಯಂತ ಮಳೆ
ಸೋಮವಾರಪೇಟೆ: ಕೃಷಿ ಕಾರ್ಯಗಳು ಪ್ರಗತಿಯಲ್ಲಿರುವ ಪ್ರಸ್ತುತ ಸನ್ನಿವೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತಾಪಿ ವರ್ಗದಲ್ಲಿ ಹರ್ಷ ಮೂಡಿದೆ. ಕಳೆದೆರಡು ದಿನಗಳಿಂದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಗಾಳಿಯ ರಭಸವೂ ಅಧಿಕವಾಗುತ್ತಿದೆ. ಕಳೆದೊಂದು ವಾರದಿಂದ ಮಳೆ ಬೀಳದೇ ಇದ್ದುದರಿಂದ ರೈತರು ಚಿಂತಾಕ್ರಾಂತರಾಗಿದ್ದರು. ನಾಟಿ ಮಾಡಿದ್ದ ಗದ್ದೆಗಳಲ್ಲಿ ನೀರು ಕಡಿಮೆಯಾಗಿ ಬೋರ್ವೆಲ್, ಕೆರೆ ನೀರನ್ನು ಆಶ್ರಯಿಸಿದ್ದರು.
ಇದೀಗ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಎಲ್ಲೆಡೆ ಕೃಷಿ ಕಾರ್ಯ ಬಿರುಸು ಕಾಣುತ್ತಿದೆ. ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ಉತ್ತಮ ಮಳೆಯಾಗುತ್ತಿದ್ದು, ಗಾಳಿಯ ರಭಸವೂ ಅಧಿಕವಿದೆ ಎಂದು ಕುಡಿಗಾಣ ಗ್ರಾಮದ ಎಂ.ಟಿ. ದಿನೇಶ್ ತಿಳಿಸಿದ್ದಾರೆ. ಶಾಂತಳ್ಳಿ, ಬೆಟ್ಟದಳ್ಳಿ, ಕುಂದಳ್ಳಿ, ಕೂತಿ, ಕುಡಿಗಾಣ, ಕೊತ್ನಳ್ಳಿ, ತೋಳೂರುಶೆಟ್ಟಳ್ಳಿ, ಗರ್ವಾಲೆ, ಸೂರ್ಲಬ್ಬಿ, ಕಿರಗಂದೂರು, ಹಾನಗಲ್ಲು, ಬೇಳೂರು, ಗೌಡಳ್ಳಿ ಸೇರಿದಂತೆ ತಾಲೂಕಿನ ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.
ರಸ್ತೆಗಳಲ್ಲಿ ಸಂಚಾರಕ್ಕೆ ತೊಡಕು: ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಸಣ್ಣಪುಟ್ಟ ಗುಂಡಿಗಳಲ್ಲಿ ಮಳೆನೀರು ಶೇಖರಣೆಯಾಗಿದ್ದು, ವಾಹನ ಚಾಲನೆ ದುಸ್ತರವಾಗುತ್ತಿದೆ.
ನದಿತೊರೆಗಳಲ್ಲಿ ನೀರು ಏರಿಕೆ: ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಮಳೆಯಾಗುತ್ತಿರುವದರಿಂದ ಸಣ್ಣಪುಟ್ಟ ನದಿತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಪಟ್ಟಣದ ಕಕ್ಕೆಹೊಳೆ, ಐಗೂರು ಹೊಳೆ, ದುದ್ದುಗಲ್ಲು ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು, ಯಡೂರು, ಆನೆಕೆರೆ, ಚೌಡ್ಲು ಕೆರೆಗಳಲ್ಲೂ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಸಂತೆಯಲ್ಲಿ ಅವ್ಯವಸ್ಥೆ: ಕಳೆದ ಒಂದೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಸೋಮವಾರಪೇಟೆಯ ಸಂತೆ ಇಂದು ನಡೆದಿದ್ದು, ಭಾರೀ ಮಳೆಯಾದ್ದರಿಂದ ಹೈಟೆಕ್ ಮಾರುಕಟ್ಟೆಯ ಛಾವಣಿಯಲ್ಲಿ ನೀರು ಸೋರುತ್ತಿದೆ. ಸಂತೆ ಮಾರುಕಟ್ಟೆಯ ಹೊರಭಾಗದಿಂದಲೂ ಮಳೆ ನೀರು ಪ್ರಾಂಗಣದೊಳಗೆ ಹರಿಯುತ್ತಿರುವದರಿಂದ ಮಾರುಕಟ್ಟೆ ಕೆಸರಿನ ಕೊಂಪೆಯಾಗಿದೆ.
ಶನಿವಾರಸಂತೆಗೆ ಉತ್ತಮ ಮಳೆ
ಶನಿವಾರಸಂತೆ : ಪಟ್ಟಣ ಹಾಗೂ ಹೋಬಳಿಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಭಾನುವಾರ ಸಂಜೆಯಿಂದ ಆರಂಭವಾಗಿರುವ ಮಳೆ ಸೋಮವಾರ ಸಂಜೆಯವರೆಗೂ 10 ನಿಮಿಷಕ್ಕೊಮ್ಮೆ ಬಿಡುವು ನೀಡುತ್ತಾ ಸುರಿದರೂ ಎರಡೂವರೆ ಇಂಚು ಮಳೆಯಾಗಿದೆ.
ಶನಿವಾರಸಂತೆ ವ್ಯಾಪ್ತಿಯಲ್ಲಿ ಮುಂಗಾರು ಆರಂಭದಿಂದ ಉತ್ತಮ ಮಳೆಯಾಗಿರಲಿಲ್ಲ. ಬಹುತೇಕ ರೈತರು ಮಳೆ ನಿರೀಕ್ಷೆಯಲ್ಲಿ ದಿನ ಕಳೆದು ನಿರಾಶರಾಗಿ ಕೊಳವೆ ಬಾವಿ, ಹೊಳೆ ನೀರಿಗೆ ಮೋಟಾರ್ ಅಳವಡಿಸಿ ನೀರು ಹಾಯಿಸಿ ಭತ್ತ ನಾಟಿ ಕಾರ್ಯ ಮುಗಿಸಿದ್ದಾರೆ. ಈಗಾಗಲೇ ಗದ್ದೆಗಳಲ್ಲಿ ಶೇ. 70 ರಷ್ಟು ನಾಟಿ ಕಾರ್ಯ ಮುಗಿದಿದೆ. ಇದೀಗ ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಕೃಷಿ ಚಟುವಟಿಕೆಯಲ್ಲಿ ಚುರುಕು ಕಂಡಿದೆ. ಉಳಿದ ರೈತರು ನಾಟಿ ಕಾರ್ಯದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಭತ್ತ, ಕಾಫಿ, ಅಡಿಕೆ, ಕಾಳು ಮೆಣಸು, ಶುಂಠಿ ಬೆಳೆಗೆ ಆಗಾಗ್ಗೆ ಬಿಸಿಲಾಗಿ ಕೃಷಿ ಕೆಲಸಕ್ಕೆ ಅನುಕೂಲವಾಗಿದೆ. ರೈತರು ಬದುಕಿದರು ಎಂದು ಕೃಷಿಕ ಅಪ್ಪಶೆಟ್ಟಳ್ಳಿ ಮೋಹನ್ಕುಮಾರ್ ಹಾಗೂ ಕಾಜೂರು ಗ್ರಾಮದ ಚಂದ್ರಶೇಖರ್ ಹರ್ಷ ವ್ಯಕ್ತಪಡಿಸಿದರು. ಪಟ್ಟಣ ವ್ಯಾಪ್ತಿಯಲ್ಲಿ ಆರಂಭದಿಂದ ಈವರೆಗೆ 16 ಇಂಚು, ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಇಂಚು, ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 13 ಇಂಚು ಮಳೆಯಾಗಿದೆ.
ಕುಶಾಲನಗರ: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ ಒಟ್ಟು 14.19 ಇಂಚು ಮಳೆಯಾಗಿದೆ. ಮೇ ತಿಂಗಳಲ್ಲಿ 4.25 ಇಂಚು ಜುಲೈ ತಿಂಗಳಲ್ಲಿ 3.30 ಇಂಚು ಮಳೆಯಾಗಿದೆ.
ಸುಂಟಿಕೊಪ್ಪ: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಹಗಲಿನ ವೇಳೆ ಗಾಳಿ ಮಳೆಗೆ ಜನತೆ ಬೆಚ್ಚಿ ಬೀಳುವಂತಾಯಿತು. ಪಣ್ಯ, ಎಮ್ಮೆಗುಂಡಿ, ಗರಗಂದೂರು, ನಾಕೂರು ಕಾನ್ಬೈಲು ಕಂಬಿಬಾಣೆ ಕೊಡಗರಹಳ್ಳಿ ಅಂದಗೋವೆ ಸೇರಿದಂತೆ ಈ ಕಡೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯುತ್ತಿದ್ದು ಜಲಪ್ರಳಯದ ಬಗ್ಗೆ ಸಾರ್ವಜನಿಕರು ಅಲ್ಲಲ್ಲಿ ಮಾತನಾಡಿ ಕೊಳ್ಳುತ್ತಿರುವುದು ಕಂಡು ಬಂತು. ದೂರದ ಊರುಗಳಿಂದ ನಗರಕ್ಕೆ ಬಂದ ಜನರು ಕೊಡೆಯಿಲ್ಲದೆ ಅಂಗಡಿಗಳ ಬದಿಗಳಲ್ಲಿ ಗಾಳಿಮಳೆಗೆ ರಕ್ಷಣೆ ಪಡೆಯುವಂತಾಯಿತು. ಸುಂಟಿಕೊಪ್ಪ ನಗರದಲ್ಲಿ ದಿಢೀರ್ ಸರಿಯುತ್ತಿದ್ದ ಮಳೆಗೆ ರಸ್ತೆಯಲ್ಲಿ ನೀರು ತುಂಬಿ ಕೆಲ ಭಾಗದ ಅಂಗಡಿಗಳಿಗೆ ನೀರು ನುಗ್ಗಿದ ಪರಿಣಾಮ ಅಂಗಡಿ ಮಾಲೀಕರು ಪರದಾಡುವಂತಾಯಿತು ಭಾನುವಾರ ರಾತ್ರಿಯು ಗುಡುಗಿನಿಂದ ಕೂಡಿದ ಮಳೆ ಸುರಿಯಿತು.
ನಾಪೋಕ್ಲುವಿನಲ್ಲಿ ಧಾರಾಕಾರ ಮಳೆ
ನಾಪೆÇೀಕ್ಲು: ನಾಪೆÇೀಕ್ಲು ವ್ಯಾಪ್ತಿಯ ನಾಪೆÇೀಕ್ಲು, ಕೊಳಕೇರಿ, ನೆಲಜಿ, ಬಲ್ಲಮಾವಟಿ, ಪೇರೂರು, ಕುಂಜಿಲ, ಕಕ್ಕಬ್ಬೆ, ಯವಕಪಾಡಿ, ಮರಂದೋಡ ಗ್ರಾಮಗಳಲ್ಲಿ ತಾ. 2ರ ಸಂಜೆಯಿಂದ ಧಾರಾಕಾರ ಮಳೆ ಆರಂಭಗೊಂಡಿದೆ.
ಇಂದು ಬೆಳಿಗ್ಗೆಯಿಂದ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ಮಳೆ ಪ್ರಮಾಣ ಹೆಚ್ಚಾಗಿದೆ. ನಾಪೆÇೀಕ್ಲು ಪಟ್ಟಣಕ್ಕೆ ಈ ವರ್ಷ ಒಟ್ಟು 61 ಇಂಚು ಮಳೆ ಸುರಿದಿದೆ. ಮಳೆಯ ಪ್ರಮಾಣ ಬೆಟ್ಟಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಹೆಚ್ಚು ಕಂಡು ಬಂದಿದೆ. ಬಿರುಸಾಗಿ ಸುರಿವ ಮಳೆಯ ಹಿನ್ನೆಲೆಯಲ್ಲಿ ನದಿ, ಹೊಳೆ, ತೋಡು, ಹಳ್ಳಕೊಳ್ಳಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿರುವದು ಕಂಡು ಬಂದಿದೆ. ಯಾವದೇ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಸರಳವಾದ ಕಕ್ಕಡ ಆಚರಣೆ: ಈ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಸಂಘ, ಸಂಸ್ಥೆಗಳು, ಮಹಿಳಾ ಸಮಾಜ, ಮತ್ತಿತರ ಕಡೆಗಳಲ್ಲಿ ಕಕ್ಕಡ 18 ಅನ್ನು ಜೊತೆಗೂಡಿ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ, ಈ ವರ್ಷ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಎಲ್ಲರೂ ಅವರವರ ಮನೆಯಲ್ಲಿಯೇ ಸರಳವಾಗಿ ಆಚರಿಸಿರುವದು ಕಂಡು ಬಂತು. ರಾಖಿ ಹಬ್ಬವನ್ನೂ ಕೂಡ ಸರಳವಾಗಿ ಅವರವರ ಮನೆಗಳಲ್ಲಿ ಆಚರಿಸಿರುವ ಬಗ್ಗೆ ವರದಿಯಾಗಿದೆ.
ಸಿದ್ದಾಪುರ: ಕಳೆದೆರಡು ದಿನಗಳಿಂದ ಸಿದ್ದಾಪುರದ ಸುತ್ತಮುತ್ತಲ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ ಸೋಮವಾರದಂದು ಬೆಳಿಗ್ಗೆ ಗುಡುಗು ಸೇರಿದಂತೆ ಮಳೆ ಸುರಿದು ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ ಕೃಷಿಕರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಎಡೆಬಿಡದೆ ಮಳೆ
ಗೋಣಿಕೊಪ್ಪಲು: ಗೋಣಿಕೊಪ್ಪಲುವಿನಲ್ಲಿ ಮುಂಜಾನೆಯಿಂದಲೇ ವರುಣನ ಆರ್ಭಟ ಜೋರಾಗಿತ್ತು.ಒಂದೇ ಸಮನೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ ಜನರು ಓಡಾಡಲು ತೊಂದರೆ ಅನುಭವಿಸಿದರು. ಮಳೆಯ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿತು.
ಖಾಸಗಿ ಬಸ್ ಸಂಚಾರ ವಿರಳವಾಗಿತ್ತು. ಮಾರ್ಕೆಟ್ ಆವರಣದಲ್ಲಿ ವ್ಯಾಪಾರ ವಹಿವಾಟು ಅಷ್ಟಾಗಿ ಕಂಡುಬರಲಿಲ್ಲ. ರಾತ್ರಿಯಿಂದ ಸುರಿದ ಮಳೆಯಿಂದ ಕೀರೆಹೊಳೆಯಲ್ಲಿ ಹರಿಯುವ ನೀರಿನ ಪ್ರಮಾಣ ಹೆಚ್ಚಾಗಿತ್ತು.ಮಳೆಯಿಂದ ಆಶ್ರಯ ಪಡೆಯಲು ಕೆಲವು ಅಂಗಡಿ, ಮುಂಗಟ್ಟುಗಳ ಮುಂದೆ ಜನರು ನಿಂತಿದ್ದರು.