ಡಾ|| “ಅಬ್ದುಲ್ ಅಜೀಜ್” ಮಡಿಕೇರಿ.

ಕೊರೊನಾ ಸೋಂಕು ಯಾವದೇ ಮುನ್ಸೂಚನೆ ನೀಡದೆ ಬರಬಹುದು, ಸಾಮಾನ್ಯವಾಗಿ ಶೀತ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಯಂತಹ ಸಮಸ್ಯೆಯೊಂದಿಗೆ ಜ್ವರ ಬರಬಹುದು. ಈ ವೇಳೆ ಯಾರೂ ನಿರ್ಲಕ್ಷ್ಯ ಮಾಡದೆ, ತಕ್ಷಣ ವೈದ್ಯರ ಸಲಹೆ ಪಡೆಯುವದು ಅವಶ್ಯಕ. ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಸಂದರ್ಶಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಯೋಗಾಲಯ ವರದಿ ಏನೇ ಬಂದರೂ 14 ದಿವಸ ಕಡ್ಡಾಯ ಕ್ವಾರಂಟೈನ್ ನಿಯಮ ಪಾಲಿಸುವದು ಅವಶ್ಯಕ. ಸಕಾಲದಲ್ಲಿ ವೈದ್ಯಕೀಯ ನೆರವು ಪಡೆದುಕೊಂಡರೆ ಕೊರೊನಾ ಒಂದು ಸಮಸ್ಯೆಯೇ ಅಲ್ಲ. ಸದಾ ಬಿಸಿ ನೀರು ಸೇವನೆ ಮಾಡಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನಿತ್ಯವೂ ಪೌಷ್ಠಿಕ ಆಹಾರ ಸೇವನೆಯೊಂದಿಗೆ ಹಣ್ಣುಗಳನ್ನು ತಿನ್ನಬೇಕು. ಕೋವಿಡ್-19 ಆಸ್ಪತ್ರೆಗೆ ದಾಖಲಾಗಲು ಹಿಂಜರಿಕೆ ಬೇಡ. ಆಸ್ಪತ್ರೆಯಲ್ಲಿ ನಮ್ಮ ಜೀವ ರಕ್ಷಣೆಗೆ ಸರಿಯಾಗಿ ಔಷದೋಪಚಾರ ನೀಡುತ್ತಾರೆ. ನಮ್ಮ ಮನೆಗಳಲ್ಲಿ ಅಗತ್ಯ ಸೌಕರ್ಯ ಇದ್ದರೆ ಮನೆಯಲ್ಲೇ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹೋಂ ಕ್ವಾರೆಂಟೈನ್ ವ್ಯವಸ್ಥೆ ಕಲ್ಪಿಸುತ್ತಾರೆ. ಇತರೆ ಬೇರೆ ಕಾಯಿಲೆಯಿಂದ ಮೊದಲೇ ಬಳಲುತ್ತಿದ್ದು, ಅಂತಹವರು ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳಲು ಸಮಸ್ಯೆ ಎದುರಿಸುತ್ತಿದ್ದರೂ, ಎಷ್ಟೋ ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ. ನಾನು ಸಾರ್ವಜನಿಕ ಜೀವನದಲ್ಲಿ ಓರ್ವ ವೈದ್ಯನಾಗಿ ಈ ಸಮಸ್ಯೆ ಎದುರಾದಾಗ, ಯಾವದೇ ಧೈರ್ಯ ಕಳೆದು ಕೊಳ್ಳದೆ ವೈದ್ಯಕೀಯ ಚಿಕಿತ್ಸೆ ಬಳಿಕ ಎಂದಿನಂತೆ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವೆ. ಹಾಗೆಯೇ ಪ್ರತಿಯೊಬ್ಬರು ಕೊರೊನಾ ಸೋಂಕು ಪತ್ತೆಯಾದಾಗ ಎದೆಗುಂದದೆ ಸಕಾಲದಲ್ಲಿ ವೈದ್ಯರ ನೆರವು ಪಡೆದುಕೊಂಡು ಗುಣಮುಖರಾಗಬಹುದು, ಆತಂಕಕ್ಕೆ ಒಳಗಾಗಬೇಡಿ.