ಸಿ.ಎಂ.ಗೆ ಕೊರೊನಾ: ರಾಜ್ಯಪಾಲರಿಗೂ ಕ್ವಾರಂಟೈನ್
ಬೆಂಗಳೂರು, ಆ.3: ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಆಪ್ತ ಕಾರ್ಯದರ್ಶಿ, ಸಹಾಯಕರು, ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಸಂಪರ್ಕಕ್ಕೆ ಬಂದಿದ್ದವರಿಗೆ ಕೊರೊನಾ ತಪಾಸಣೆ ನಡೆಸಲಾಗುತ್ತಿದೆ. ರಾಜ್ಯಪಾಲ ವಜೂಬಾಯಿ ವಾಲಾ ಹಾಗೂ ಅವರ ಆಪ್ತ ಕಾರ್ಯದರ್ಶಿ ಕೊರೊನಾ ಟೆಸ್ಟಿಂಗ್‍ಗೆ ಒಳಗಾಗಿದ್ದು ಅವರಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ. ಆದರೂ ಒಂದು ವಾರ ಕಾಲ ಕ್ವಾರಂಟೈನ್‍ಗೆ ಒಳಗಾಗುತ್ತಿರುವುದಾಗಿ ರಾಜಭವನದ ಪತ್ರಿಕಾ ಪ್ರಕಟಣೆ ಮಾಹಿತಿ ನೀಡಿದೆ. ಇನ್ನು ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿ ಅವರ ನೇರ ಸಂಪರ್ಕಕ್ಕೆ ಒಳಗಾಗಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಟೆಸ್ಟಿಂಗ್‍ಗೆ ಒಳಗಾಗಿದ್ದು ಕೊರೊನಾ ನೆಗೆಟಿವ್ ವರದಿ ಬಂದಿದ್ದರೂ ನಾಲ್ಕು ದಿನ ಕ್ವಾರಂಟೈನ್‍ಗೆ ಒಳಗಾಗುವುದಾಗಿ ತಿಳಿಸಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್ ಅವರು ಸೆಲ್ಫ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಆದರೆ ಡಿಸಿಎಂಗಳಾದ ಡಾ.ಅಶ್ವಥ್ ನಾರಾಯಣ್, ಲಕ್ಷ್ಮಣ್ ಸವದಿ ಹಾಗೂ ಗೋವಿಂದ ಕಾರಜೋಳ ಕ್ವಾರಂಟೈನ್‍ಗೆ ಒಳಗಾಗಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿ ಅವರ ನೇರ ಸಂಪರ್ಕಕ್ಕೆ ಒಳಗಾಗಿರುವ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯಕಾರ್ಯದರ್ಶಿ, ಡಿಜಿಪಿ ಪ್ರವೀಣ್ ಸೂದ್, ಗುಪ್ತಚರ ಎಡಿಜಿಪಿ ಹಾಗೂ ಇತರ ಅಧಿಕಾರಿಗಳು ಕ್ವಾರಂಟೈನ್‍ಗೆ ಒಳಗಾಗದೆ ಕರ್ತವ್ಯ ನಿರ್ವಹಿಸುತ್ತಿರುವುದರ ಬಗ್ಗೆ ಮಾಹಿತಿಯಿದೆ. ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿ ಮುಖ್ಯಮಂತ್ರಿ ಭೇಟಿ ಮಾಡಿದ್ದ ಕಮಲ್‍ಪಂತ್ ಸೆಲ್ಫ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಅಮಿತ್‍ಶಾರ ಅವಹೇಳನಗೈದವನ ಬಂಧನ
ಬೆಂಗಳೂರು, ಆ.3: ಕೊರೊನಾ ಸೋಂಕಿಗೆ ಒಳಗಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕಾರ್ಯದರ್ಶಿ, ಕೆ.ಆರ್. ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆನಂದ್ ಪ್ರಸಾದ್ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆನಂದ್ ಅವರು ಅಮಿತ್ ಶಾ ವಿರುದ್ಧ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂದು ಆರೋಪಿಸಲಾಗಿತ್ತು. ತಕ್ಷಣ ನಿನ್ನೆ ರಾತ್ರಿಯೇ ಪೊಲೀಸರು ಅವರ ಮನೆಗೆ ತೆರಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153(ಎ) ಕಲಂನಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಅಯೋಧ್ಯೆಗೆ ರಾಜ್ಯದ ಐವರಿಗೆ ಆಹ್ವಾನ
ಉಡುಪಿ, ಆ. 3: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಆಗಸ್ಟ್ 5 ರಂದು ನಡೆಯುವ ಭೂಮಿ ಪೂಜೆ ಸಮಾರಂಭಕ್ಕೆ ರಾಜ್ಯದ ಐವರು ಆಹ್ವಾನಿತರಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಸೇರಿದ್ದಾರೆ. ಇವರುಗಳಲ್ಲದೆ, ಶೃಂಗೇರಿ ಮಠ, ಆದಿಚುಂಚನಗಿರಿ ಮಠ ಮತ್ತು ಸುತ್ತೂರು ಮಠಗಳ ಸ್ವಾಮೀಜಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ರಾಮಮಂದಿರಕ್ಕೆ 15 ಕೆ.ಜಿ. ಬೆಳ್ಳಿ ಇಟ್ಟಿಗೆ
ದಾವಣಗೆರೆ, ಆ.3 : ಅಯೋಧ್ಯೆಯಲ್ಲಿ ಇದೇ 5ರಂದು ರಾಮಮಂದಿರ ಶಿಲಾನ್ಯಾಸ ನೆರವೇರುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ಆರರಂದು ದಾವಣಗೆರೆ ಜಿಲ್ಲೆಯಿಂದ 15 ಕೆ.ಜಿ. ಬೆಳ್ಳಿ ಇಟ್ಟಿಗೆಯನ್ನು ಕೊಂಡೊಯ್ಯಲು ಹಿಂದೂ ಪರ ಸಂಘಟನೆಗಳು ಮುಂದಾಗಿವೆ. 1990ರಲ್ಲಿ ದಾವಣಗೆರೆಯಲ್ಲಿ ನಡೆದ ಗೋಲಿಬಾರ್‍ನಲ್ಲಿ ಮೃತಪಟ್ಟವರ ಸವಿನೆನಪಿಗಾಗಿ 10 ಲಕ್ಷದ ಮೌಲ್ಯದ 15 ಕೆ.ಜಿ.ತೂಕದ ಬೆಳ್ಳಿಯ ಇಟ್ಟಿಗೆಯನ್ನು ಅಯೋಧ್ಯೆಗೆ ನೀಡಲು ಶರೀರಾಮ ಭಕ್ತರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ತೀರ್ಮಾನಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಇಂದಿಲ್ಲಿ ತಿಳಿಸಿದ್ದಾರೆ. 1990ರ ಅಕ್ಟೋಬರ್ 6ರಂದು ಬೇತೂರು ರಸ್ತೆಯಲ್ಲಿರುವ ವೆಂಕಟೇಶ್ವರ ವೃತ್ತದಲ್ಲಿ ನಡೆದ ಗೋಲಿಬಾರ್‍ನಲ್ಲಿ 8 ಜನರು ಮೃತಪಟ್ಟಿದ್ದು, 72ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿತ್ತು. ಈ ಪೈಕಿ 40ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಅಂದು ಹುತಾತ್ಮರಾದ 8 ಮಂದಿಯ ಹೆಸರನ್ನು ಇಟ್ಟಿಗೆಯಲ್ಲಿ ಕೆತ್ತಿಸಲಾಗುತ್ತದೆ ಎಂದು ಹೇಳಿದರು.
ಸಹೋದರಿಗಾಗಿ ನಕ್ಸಲ್ ಪೊಲೀಸರಿಗೆ ಶರಣು
ದಾಂತೇವಾಡ, ಆ.3 : ರಕ್ಷಾ ಬಂಧನ್ ಶುಭ ಸಂದರ್ಭದಲ್ಲಿ ಮತ್ತೆ ಕಾಡಿಗೆ ವಾಪಸ್ ಹೋಗದಂತೆ ಸಹೋದರಿ ಮಾಡಿದ ಮನವಿಗೆ ತಲೆಬಾಗಿದ ನಕ್ಸಲ್ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ. ಈತನ ತಲೆಗೆ 8 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು. ದಂತವಾಡ ಜಿಲ್ಲೆಯ ಪಾಲ್ನಾರ್ ಹಳ್ಳಿಯ ಮಲ್ಲ ಪೊಲೀಸರಿಗೆ ಶರಣಾದ ನಕ್ಸಲ್. 12ನೇ ವಯಸ್ಸಿನಲ್ಲಿ ಮನೆಯಿಂದ ಓಡಿ ಹೋಗಿ ನಕ್ಸಲ್ ಗುಂಪು ಸೇರಿದ್ದ ಈತ 14 ವರ್ಷದ ನಂತರ ಮನೆಗೆ ವಾಪಸ್ಸಾಗಿದ್ದಾನೆ. ಈ ಎಲ್ಲಾ ವರ್ಷಗಳಲ್ಲಿ ತನ್ನ ಸಹೋದರಿ ಲಿಂಗೇಯನ್ನು ನೋಡದ ಮಲ್ಲ, ಇಂದು ತಂಗಿ ನೋಡಲು ಮನೆಗೆ ಬಂದಿದ್ದಾನೆ. ಈ ಸಂದರ್ಭ ಲಿಂಗೇ ಭದ್ರತಾ ಪಡೆಗಳ ನಕ್ಸಲ್ ನಿಗ್ರಹ ಕಾರ್ಯದಲ್ಲಿ ಹಲವು ನಕ್ಸಲರು ಪ್ರಾಣ ಕಳೆದುಕೊಂಡಿದ್ದು, ತನ್ನ ಸಹೋದರನ ಪ್ರಾಣದ ಬಗ್ಗೆ ಆತಂಕ ವ್ಯಕ್ತಪಡಿಸಿ ಮತ್ತೆ ಕಾಡಿಗೆ ಹೋಗದೆ ಪೊಲೀಸರಿಗೆ ಶರಣಾಗುವಂತೆ ಮನವಿ ಮಾಡಿಕೊಂಡಿದ್ದಳು.
ವಾಹನ ಕರಕಲು : ಯೋಧ ನಾಪತ್ತೆ
ಶ್ರೀನಗರ, ಆ.3 : ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಯೋಧನೋರ್ವ ನಾಪತ್ತೆಯಾಗಿದ್ದು, ಆತನ ವಾಹನ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಶ್ಮೀರದ ಕುಲ್ಗಾಮ್ ನಲ್ಲಿ ಈ ಘಟನೆ ನಡೆದಿದ್ದು, ಟೆರಿಟೋರಿಯಲ್ ಆರ್ಮಿ (ಟಿಎ-ಪ್ರಾದೇಶಿಕ ಸೈನ್ಯ) ಸೈನಿಕ ನಾಪತ್ತೆಯಾಗಿದ್ದು, ಉಗ್ರರು ಸೈನಿಕನನ್ನು ಅಪಹರಣ ಮಾಡಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ. ಪ್ರಸ್ತುತ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ವಾಹನ ಶೋಪಿಯಾನ್ ಜಿಲ್ಲೆಯ ನಿವಾಸಿ ಮುಜಾಫರ್ ಮನ್ಸೂರ್ ಎಂಬ ಹೆಸರಿನಲ್ಲಿ ನೋಂದಾವಣಿಯಾಗಿದೆ. ನಾಪತ್ತೆಯಾದ ಯೋಧ ಮನ್ಸೂರ್ ನನ್ನು ಅಧಿಕಾರಿಗಳು ಈ ವರೆಗೂ ಸಂಪರ್ಕಿಸಲು ಸಾಧ್ಯವಾಗಿಲ್ಲ. ಮೊಬೈಲ್ ಸ್ವಿಚ್ ಆಫ್ ಅಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಅಂತೆಯೇ ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆಯಲಾಗುತ್ತಿದ್ದು, ಶೀಘ್ರ ಯೋಧನ ಪತ್ತೆ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ಗುಣಮುಖ ಪ್ರಮಾಣ ಶೇ.5.67 ರಷ್ಟು ಏರಿಕೆ
ಬೆಂಗಳೂರು, ಆ.3 : ರಾಜ್ಯದಲ್ಲಿ ಕೊರೊನಾ ಸೋಂಕಿಗೊಳಗಾಗಿ ಗುಣಮುಖರಾಗುವವರ ಪ್ರಮಾಣವು ಕಳೆದೊಂದು ವಾರದಲ್ಲಿ ಶೇ.5.67 ರಷ್ಟು ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಪ್ರತಿ ದಿನ ಗುಣಮುಖರಾಗುವವರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಬೆಂಗಳೂರು ನಗರದಲ್ಲಿ ಈ ಪ್ರಮಾಣ ಶೇ.9.17 ರಷ್ಟು ಏರಿಕೆ ಕಂಡಿದೆ. ಭಾನುವಾರ (ಆ.2) ಸಂಜೆಯ ವೇಳೆಗೆ ರಾಜ್ಯದ ಚೇತರಿಕೆ ಪ್ರಮಾಣ ಶೇ.42.81 ಮತ್ತು ಬೆಂಗಳೂರಿನಲ್ಲಿ ಶೇ.35.14 ರಷ್ಟು ಇತ್ತು, ಎಂದು ಅವರು ತಿಳಿಸಿದ್ದಾರೆ.