ಸೋಮವಾರಪೇಟೆ, ಆ.3: ಮರೆಯಾಗುತ್ತಿರುವ ಭತ್ತ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ನಾಟಿ ಕಾರ್ಯಕ್ರಮದಲ್ಲಿ, ಯುವಕರು ಗದ್ದೆಯಲ್ಲಿ ನಾಟಿ ಮಾಡಿದರು.
ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಶಾಂತಳ್ಳಿ ವ್ಯಾಪ್ತಿಯ ಗುಡ್ಡಳ್ಳಿ ಗ್ರಾಮದ ಸಂತೋಷ್ ಅವರಿಗೆ ಸೇರಿದ ಗದ್ದೆಯಲ್ಲಿ 2ನೇ ವರ್ಷದ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಇಂದಿನ ಯುವ ಜನಾಂಗ ಕೃಷಿ ಕಾರ್ಯಗಳತ್ತ ಮುಖಮಾಡದೇ ಇರುವದರಿಂದ ಕೃಷಿ ಕ್ಷೇತ್ರ ಅಳಿವಿನತ್ತ ಸಾಗುತ್ತಿದೆ. ಈ ಹಿನ್ನೆಲೆ ಸಂಸ್ಥೆಯ ವತಿಯಿಂದ ಯುವ ಜನಾಂಗವನ್ನು ಒಟ್ಟುಗೂಡಿಸಿ ನಾಟಿ ಮಾಡುವ ಮೂಲಕ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಸಂಸ್ಥೆಯ ವತಿಯಿಂದ ಈಗಾಗಲೇ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿಗರು ಅನುಸರಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಫಲಕ ಅಳವಡಿಸಿ ಜಾಗೃತಿ ಮೂಡಿಸಿದ್ದು, ಕಕ್ಕೆಹೊಳೆ ಸಮೀಪ ದುಸ್ಥಿತಿಯಲ್ಲಿದ್ದ ಬಸ್ ನಿಲ್ದಾಣಕ್ಕೆ ಸುಣ್ಣಬಣ್ಣ ಬಳಿದು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಅಸೋಸಿಯೇಷನ್ ಕಾರ್ಯದರ್ಶಿ ಸಜನ್ ಮಂದಣ್ಣ, ಪದಾಧಿಕಾರಿಗಳಾದ ವಿನಯ್, ಆದರ್ಶ್, ವಿಕಾಸ್, ಸ್ವಾಗತ್, ಕಿರಣ್, ಭರತ್, ಜೀವನ್, ಸಮರ್ಥ್, ಪ್ರದೀಪ್, ರಾಜೇಶ್, ಮಧುಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.