ಮಡಿಕೇರಿ, ಆ. 3: ಕೊಡಗು ಜಿಲ್ಲೆಯಾದ್ಯಂತ ಇಂದು ಕೊರೊನಾ ಸೋಂಕಿನ ಆತಂಕ ನಡುವೆಯೂ ಮನೆ ಮನೆಗಳಲ್ಲಿ ಕಕ್ಕಡ 18ರ ಆಚರಣೆಯೊಂದಿಗೆ ಔಷಧಿಯುಕ್ತ ರೋಗ ನಿರೋಧಕ ಶಕ್ತಿಯ ಆಟಿ ಸೊಪ್ಪಿನ ಪಾಯಸ ಸವಿದು ಜನತೆ ಪುರಾತನ ಸಂಪ್ರದಾಯ ಮುಂದುವರೆಸಿದರು.
ಒಂದೆಡೆ ಶ್ರಾವಣ ಮಾಸದ ನೂಲು ಹುಣ್ಣಿಮೆಯ ಪರ್ವವಾದರೆ, ಇನ್ನೊಂದೆಡೆ ರಾಷ್ಟ್ರೀಯ ಭಾವೈಕ್ಯತೆಯ ರಕ್ಷಾ ಬಂಧನ ದಿನವೇ ಈ ಬಾರಿ ಕಕ್ಕಡ-18ರ ವಿಶೇಷವಾಗಿತ್ತು. ಅನೇಕ ಹಿರಿಯರ ಆಶಯದಂತೆ ಕೊರೊನಾ ಸೋಂಕು ತಡೆಗೆ ಆಟಿ ಸೊಪ್ಪಿನ ತಿನಿಸು ದಿವ್ಯೌಷಧಿ ಎಂಬ ರೀತಿಯಲ್ಲಿ ಆಟಿ ಪಾಯಸ ಸವಿದರು. ಕಣಿಲೆ, ಏಡಿ ಇತ್ಯಾದಿ ಖಾದ್ಯಗಳನ್ನು ಭಕ್ಷಿಸಿದರು.
ನಾಪೋಕ್ಲುವಿನಲ್ಲಿ ಸರಳವಾದ ಕಕ್ಕಡ ಆಚರಣೆ
ಈ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಸಂಘ, ಸಂಸ್ಥೆಗಳು, ಮಹಿಳಾ ಸಮಾಜ, ಮತ್ತಿತರ ಕಡೆಗಳಲ್ಲಿ ಕಕ್ಕಡ 18 ಅನ್ನು ಜೊತೆಗೂಡಿ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ, ಈ ವರ್ಷ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಎಲ್ಲರೂ ಅವರವರ ಮನೆಯಲ್ಲಿಯೇ ಸರಳವಾಗಿ ಆಚರಿಸಿದ್ದು ಕಂಡು ಬಂತು. ರಾಖಿ ಹಬ್ಬವನ್ನೂ ಕೂಡ ಸರಳವಾಗಿ ಅವರವರ ಮನೆಗಳಲ್ಲಿ ಆಚರಿಸಿರುವ ಬಗ್ಗೆ ವರದಿಯಾಗಿದೆ.
ಕುಶಾಲನಗರ: ಕೊಡಗಿನ ಜನರ ಕೃಷಿ ಚಟುವಟಿಕೆಯ ಕಕ್ಕಡ ಪದಿನೆಟ್ ಆಚರಣೆ ಈ ಬಾರಿ ಕೆಲವೆಡೆ ಆಗಸ್ಟ್ 2 ರಂದು ನಡೆದಿದ್ದು ಇನ್ನುಳಿದಂತೆ ಹಲವೆಡೆ ಸೋಮವಾರ ನಡೆದಿದೆ. ಈ ಬಾರಿ ಫೆಬ್ರವರಿ ತಿಂಗಳಲ್ಲಿ ಅಧಿಕ ಮಾಸ ಇದ್ದ ಹಿನ್ನಲೆಯಲ್ಲಿ ಹಲವರು ಭಾನುವಾರ ಆಟಿ 18 ಅನ್ನು ಆಚರಿಸಿದ್ದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಎಲ್ಲೆಡೆ ಮನೆಗಳಲ್ಲಿ ಮದ್ದುಸೊಪ್ಪಿನ ಪಾಯಸ, ಖಾದ್ಯಗಳೊಂದಿಗೆ ಹಬ್ಬವನ್ನು ಆಚರಿಸಿದರು.