ಮಡಿಕೇರಿ, ಆ. 2: ಕೊಡಗಿನ ವಿಶೇಷತೆಗಳಲ್ಲಿ ಒಂದಾದ ಕಕ್ಕಡ -18ರ ಸಂಭ್ರಮ ಈ ಬಾರಿ ವಿಭಿನ್ನವಾಗಿ ಆಚರಿಸಲ್ಪಡುತ್ತಿದೆ. ಆ. 3 ರಂದು (ಇಂದು) ಕಕ್ಕಡ -18ರ ಆಚರಣೆಯಾಗಿದ್ದು, ಪ್ರಸಕ್ತ ವರ್ಷ ಕೊರೊನಾ ಕಾರಣದಿಂದಾಗಿ ಇದರ ಸಾರ್ವತ್ರಿಕ ಆಚರಣೆ ಇಲ್ಲದಂತಾಗಿದೆ. ಬದಲಿಗೆ ಜನತೆ ತಮ್ಮ ತಮ್ಮ ಮನೆ ಮನೆಗಳಲ್ಲಿಯೇ ಮದ್ದು ಪಾಯಸ, ಮದ್ದುಪುಟ್ಟ್, ಕಕ್ಕಡ ಕೋಳಿಯ ವಿಶಿಷ್ಟ ಖಾದ್ಯಗಳೊಂದಿಗೆ ಈ ದಿನವನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಳ್ಳಬೇಕಾಗಿದೆ.

ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಕಕ್ಕಡ -18ರ ಸಂಭ್ರಮ ಈ ಹಿಂದಿನ ವರ್ಷಗಳಿಗಿಂತ ವಿಜ್ರಂಭಣೆಯಿಂದ ಕೂಡಿರುತ್ತಿತ್ತು. ವಿವಿಧ ಸಂಘ - ಸಂಸ್ಥೆ, ಸಮಾಜಗಳು, ಶಾಲಾ - ಕಾಲೇಜುಗಳಲ್ಲಿ ಇದನ್ನು ಸಾರ್ವತ್ರಿಕವಾಗಿ ಆಚರಿಸಲಾಗುತ್ತಿತ್ತು. ವಿಶೇಷವಾಗಿ ಮದ್ದುಪಾಯಸ, ಮದ್ದ್‍ಪುಟ್ಟ್, ಕಕ್ಕಡಕೋಳಿಯ ಖಾದ್ಯಗಳಲ್ಲದೆ, ಈ ಮಾಸದಲ್ಲಿ ಬಳಸುವ ವಿವಿಧ ಬಗೆಯ ಆಹಾರ ಪದಾರ್ಥಗಳ ಪ್ರದರ್ಶನ, ಮಾರಾಟ, ಸಾರ್ವತ್ರಿಕವಾಗಿ ಊಟೋಪಚಾರ ಮತ್ತಿತರ ಕಾರ್ಯಕ್ರಮಗಳು ಇತ್ತೀಚಿನ ವರ್ಷಗಳಲ್ಲಿ ಕಂಡಬರುತ್ತಿತ್ತು.

ನಿರ್ದಿಷ್ಟ ದಿನದಂದು ಮಾತ್ರವಲ್ಲದೆ, ನಂತರದ ದಿನಗಳಲ್ಲೂ ಈ ಕಾರ್ಯಕ್ರಮಗಳು ಮುಂದುವರಿಯುತ್ತಿದ್ದವು. ಕೊಡಗು ಮಾತ್ರವಲ್ಲದೆ, ಜಿಲ್ಲೆಯಿಂದ ಹೊರಭಾಗದಲ್ಲಿ ನೆಲೆಸಿರುವವರೂ, ಅಲ್ಲಲ್ಲಿನ ಸಂಘ - ಸಂಸ್ಥೆ, ಸಮಾಜಗಳಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಕೋವಿಡ್‍ನ ಕಾರಣದಿಂದಾಗಿ ಸಾರ್ವತ್ರಿಕ ಆಚರಣೆಗಳಿಗೆ, ಅವಕಾಶವಿಲ್ಲವಾಗಿದೆ. ಆದರೂ ಜನತೆ ತಮ್ಮ ತಮ್ಮ ಮನೆಗಳಲ್ಲೇ ಕಕ್ಕಡ ಮಾಸದ ವಿಶಿಷ್ಟತೆಯನ್ನು ಆಚರಿಸಿಕೊಳ್ಳುವ ಉತ್ಸುಕತೆಯಿಂದ ಹಿಂದೆ ಸರಿದಿಲ್ಲ.

ಪ್ರಮುಖವಾಗಿ ಪೊನ್ನಂಪೇಟೆಯ ಕೊಡವ ಸಮಾಜದಲ್ಲಿ ಕಿಗ್ಗಟ್ಟ್‍ನಾಡ್ ಹಿತರಕ್ಷಣಾ ಬಳಗದ ವತಿಯಿಂದ ಪಂಜಿನ ಮೆರವಣಿಗೆ ಸಹಿತವಾಗಿ ನಡೆಯುತ್ತಿದ್ದ ಸಭಾ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮ, ಸಹಭೋಜನ ಈ ಬಾರಿ ಇಲ್ಲವಾಗಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಹಿಂದಿನ ವರ್ಷಗಳಂತೆ ಮದ್ದುಸೊಪ್ಪಿನ ಮಾರಾಟ ಭರಾಟೆ ಹೆಚ್ಚಾಗಿ ಕಾಣದಿದ್ದರೂ, ಔಷಧಿ ಎಂದೇ ಪರಿಗಣಿಸಿ ಆಚರಿಸಲ್ಪಡುವ ಈ ದಿನದ ವಿಶಿಷ್ಟತೆಗೆ ಜನರು ತಮ್ಮಷ್ಟಕ್ಕೇ ತಾವೇ ತಯಾರಿ ಮಾಡಿಕೊಂಡಿದ್ದಾರೆ.

ಈ ಬಾರಿ ಕೊಡವ ಕ್ಯಾಲೆಂಡರ್‍ನ ವಿಚಾರದಲ್ಲಿ ಈ ದಿನದ ಬಗ್ಗೆ ಕೆಲವರು ಒಂದಷ್ಟು ಗೊಂದಲಕ್ಕೊಳಗಾಗಿದ್ದಾರೆ. ಪಂಚಾಗವನ್ನು ಉಲ್ಲೇಖಿಸಿ ಕೆಲವೆಡೆಗಳಲ್ಲಿ ತಾ. 2 ರಂದು ಕಕ್ಕಡ ಪದಿನೆಟ್ಟ್ ಆಚರಿಸಲ್ಪಟ್ಟಿದ್ದರೆ, ಬಹುತೇಕ ಕಡೆಗಳಲ್ಲಿ ತಾ. 3 ರಂದು (ಇಂದು) ಆಚರಿಸಲ್ಪಡುತ್ತಿದೆ.