ವೀರಾಜಪೇಟೆ, ಆ. 1: ಕಳೆದ 7 ದಿಗಳ ಹಿಂದೆ ಇಲ್ಲಿನ ಮೊಗರಗಲ್ಲಿಯಲ್ಲಿ 44 ವರ್ಷದ ಪುರುಷನಿಗೆ ಕೊರೊನಾ ಸೋಂಕಿತ ವರದಿಯಲ್ಲಿ ಪಾಸಿಟಿವ್ ಬಂದು ಮೃತಪಟ್ಟ ಹಿನ್ನೆಲೆಯಲ್ಲಿ ಮೊಗರಗಲ್ಲಿ ಆಜುಬಾಜಿನ ಏಳು ಹಾಗೂ ಐದನೇ ವಾರ್ಡ್‍ಗಳ ಒಂದು ಭಾಗವನ್ನು ಸೀಲ್‍ಡೌನ್ ಮಾಡಿ ಜನ ಸಂಪರ್ಕದಿಂದ ನಿರ್ಬಂಧಿಸಲಾಗಿದೆ. ಕೊಳಚೆ ಪ್ರದೇಶಕ್ಕಾಗಿ ಸೀಮಿತಗೊಂಡಿ ರುವ ಈ ಪ್ರದೇಶದ ಸುಮಾರು 70 ಕುಟುಂಬಗಳಿಗೆ ಪಡಿತರವಿಲ್ಲದೆ ಉಪವಾಸ ಬೀಳುವಂತಾಗಿದೆ ಎಂದು ಇಲ್ಲಿನ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಈ ವಾರ್ಡ್‍ನ ಪ್ರಸ್ತುತ ಸದಸ್ಯರಾಗಿರುವ ಎಂ.ಕೆ. ದೇಚಮ್ಮ ಹೇಳಿದ್ದಾರೆ.

ಇದೇ ಪ್ರದೇಶದಲ್ಲಿ ನಿನ್ನೆ ದಿನ ಇನ್ನು 8ಮಂದಿಗೆ ಕೊರೊನಾ ವರದಿಯಲ್ಲಿ ಪಾಸಿಟಿವ್ ಬಂದಿದ್ದು ತಾಲೂಕು ಆಡಳಿತ ಹಾಗೂ ಆರೋಗ್ಯ ತಂಡ ಇಂದಿನಿಂದ ಮತ್ತೆ 14 ದಿನಗಳ ಕ್ವಾರಂಟೈನ್‍ನನ್ನು ವಿಸ್ತರಿಸಿದೆ. ಹಿಂದುಳಿದ ವರ್ಗದವರು, ಕಡು ಬಡವರು, ಕಾರ್ಮಿಕ ವರ್ಗ ಅಧಿಕವಾಗಿರುವ ಈ ಪ್ರದೇಶದಲ್ಲಿರುವ ಜನರು ನಿತ್ಯ ದುಡಿಮೆಯಿಂದ ಜೀವನ ನಡೆಸುವವರು.

ಈಗಿನ 7ದಿನಗಳ ಕಾಲ ದಾನಿಗಳಿಂದ ಸಂಗ್ರಹಿಸಿದ ಪಡಿತರ ಸಾಮಗ್ರಿಗಳನ್ನು ಸರಬರಾಜು ಮಾಡಲಾಗಿದೆ. ಕೊಳಚೆ ಪ್ರದೇಶದ ಈ ಸೀಲ್‍ಡೌನ್‍ನ ಸಂತ್ರಸ್ತರಿಗೆ ಸರಕಾರದಿಂದ ಯಾವುದೇ ಪಡಿತರ ಸರಬರಾಜಾಗಿಲ್ಲ. ತಾಲೂಕು ಆಡಳಿತ ಕೊಳಚೆ ಪ್ರದೇಶ, ಹಿಂದುಳಿದ ಪ್ರದೇಶಗಳನ್ನು ಸೀಲ್‍ಡೌನ್ ಮಾಡಿದರೆ ಸಾಲದು. ಅಲ್ಲಿರುವ ಜನರಿಗೆ ಪಡಿತರ ಪೊರೈಸುವ ಸೌಲಭ್ಯವನ್ನು ಕಲ್ಪಿಸಬೇಕು. ಇಲ್ಲದಿದ್ದರೆ ಸರಕಾರದ ಕೊರೊನಾ ಮಾರ್ಗ ಸೂಚಿಯನ್ನು ಬದಲಿಸಿ ಕೊರೊನಾ ಪಾಸಿಟಿವ್ ವ್ಯಕ್ತಿಯ ಕುಟುಂಬದ ಮನೆಗೆ ಸೀಮಿತಗೊಂಡಂತೆ ಸೀಲ್‍ಡೌನ್ ಮಾಡಬೇಕು. ಈಗ ಸೀಲ್‍ಡೌನ್‍ನಲ್ಲಿರುವ ಸಂತ್ರಸ್ತರ ಪರಿಸ್ಥಿತಿ ಶೋಚನೀಯವಾಗಿರುವುದನ್ನು ಅಧಿಕಾರಿಗಳು ಗಮನಿಸಬೇಕು ಈ ಸಂಬಂಧದಲ್ಲಿ ತಾಲೂಕು ಆಡಳಿತ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ದೇಚಮ್ಮ ತಿಳಿಸಿದರು.

ಐದನೇ ವಾರ್ಡ್‍ನ ಸದಸ್ಯ ಎಸ್.ಎಚ್.ಮತೀನ್ ಮಾತನಾಡಿ ಮೊಗರಗಲ್ಲಿಯ ಒಂದು ಪ್ರದೇಶ ಐದನೇ ವಾರ್ಡ್‍ಗೆ ಸೇರಿದ್ದು ಇಲ್ಲಿಯೂ ಕೊಳಚೆ ಪ್ರದೇಶದ ಒಂದು ಭಾಗ ಸೀಲ್‍ಡೌನ್ ಮಾಡಿದ್ದು ಇನ್ನು ಕೆಲವರಿಗೆ ಕೊರೊನಾ ಸೋಂಕು ತಗಲಿದ್ದರಿಂದ ಸೀಲ್‍ಡೌನ್ ವಿಸ್ತರಿಸಲಾಗಿದೆ. ಆದರೆ ಇಲ್ಲಿನ ಸೀಲ್‍ಡೌನ್ ಸಂತ್ರಸ್ತರಿಗೆ ಪಡಿತರ ಸಾಮಗ್ರಿಗಳು ವಿತರಿಸಲಾಗುತ್ತಿಲ್ಲ ಎಂದಿದ್ದಾರೆ.