ಸೋಮವಾರಪೇಟೆ, ಆ. 1: ಲೋಕೋಪಯೋಗಿ ಇಲಾಖೆ ಮೂಲಕ ಮಳೆಹಾನಿ ಪರಿಹಾರ ನಿಧಿಯಡಿ ಪ್ರಗತಿಯಲ್ಲಿರುವ ಸೋಮವಾರಪೇಟೆ-ಶಾಂತಳ್ಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕಾಂಕ್ರಿಟ್ ಕಾಮಗಾರಿಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪರಿಶೀಲಿಸಿದರು.

ರೂ. 125 ಲಕ್ಷ ವೆಚ್ಚದಲ್ಲಿ ವಿವೇಕಾನಂದ ವೃತ್ತದಿಂದ ಆಲೇಕಟ್ಟೆವರೆಗೆ 530 ಮೀಟರ್ ಉದ್ದ, 7 ಮೀಟರ್ ಅಗಲದ ನೂತನ ಕಾಂಕ್ರೀಟ್ ರಸ್ತೆ ಪ್ರಗತಿಯಲ್ಲಿದ್ದು, ಕಾಮಗಾರಿ ಪ್ರಾರಂಭಕ್ಕೂ ಮುನ್ನ ಸ್ಥಳ ಪರಿಶೀಲಿಸಿದ್ದ ಶಾಸಕರು, ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು.

ಇದೀಗ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆಗೆ ಹಾಕುತ್ತಿರುವ ಕಾಂಕ್ರೀಟ್‍ನ್ನು ಪರಿಶೀಲಿಸಿ, ಗುಣಮಟ್ಟದ ಬಗ್ಗೆ ಖಾತ್ರಿಪಡಿಸಿಕೊಂಡರು. ಕಾಂಕ್ರೀಟ್ ಕಾಮಗಾರಿಗೆ ಬಳಕೆಯಾಗುವ ಪರಿಕರಗಳ ಗುಣಮಟ್ಟವನ್ನು ಪರಿಶೀಲಿಸಬೇಕು. ಕಲ್ಲು, ವೆಟ್‍ಮಿಕ್ಸ್ ಬಗ್ಗೆ ಗಮನ ಹರಿಸಬೇಕೆಂದು ಸಂಬಂಧಿಸಿದ ಅಭಿಯಂತರ ರಮಣಗೌಡ ಅವರಿಗೆ ನಿರ್ದೇಶನ ನೀಡಿದರು.