ಶನಿವಾರಸಂತೆ, ಆ. 1: ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಾರೆ ಗ್ರಾಮಸ್ಥರು ದೇವಸ್ಥಾನ ಹಾಗೂ ಕೃಷಿ ಜಮೀನಿಗೆ ತೆರಳುವ ರಸ್ತೆಗೆ ಅಡ್ಡವಾಗಿ ಹಾಕಿರುವ ಬೇಲಿಯನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬಸವನಾರೆ ಗ್ರಾಮದ 15ಕ್ಕೂ ಅಧಿಕ ಮಂದಿ ರೈತರ ಜಮೀನುಗಳಿಗೆ ಹಾಗೂ ಪುರಾತನ ಬಸವೇಶ್ವರ ದೇವಸ್ಥಾನಕ್ಕೆ ತೆರಳುವ ಸುಮಾರು 50 ವರ್ಷಗಳಿಂದ ಬಳಸುತ್ತಿದ್ದಂತಹ ರಸ್ತೆಗೆ ಸರ್ವೆ ನಂ. 21/11 ರ ಜಮೀನು ಮಾಲೀಕ ಮಲ್ಲಿಪಟ್ಟಣ ಸುಬ್ಬೇಗೌಡ ಗ್ರಾಮ ನಕಾಶೆಯಲ್ಲಿ ರಸ್ತೆ ಗುರುತಿಸಿಲ್ಲ ಎಂದು ಹೇಳಿ ಅಡ್ಡಲಾಗಿ ಬೇಲಿ ಹಾಕಿದ್ದಾರೆ. ಇದರಿಂದ ಗ್ರಾಮಸ್ಥರು ತಿರುಗಾಡಲು ಹಾಗೂ ಕೃಷಿ ಚಟುವಟಿಕೆಗಳಿಗೆ ಟ್ರ್ಯಾಕ್ಟರ್ ಮತ್ತಿತರ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವಿಲ್ಲದೆ ಅನಾನುಕೂಲವಾಗುತ್ತಿದೆ ಎಂದು ಗ್ರಾಮದ ಪ್ರಮುಖರಾದ ಮಹೇಶ್, ಗಣೇಶ್, ಮಣಿಕಂಠ, ಯೋಗೇಶ್, ಪ್ರವೀಣ್, ಕುಮಾರ್, ಮೋಹನ್ ಮೌರ್ಯ ದೂರಿದ್ದಾರೆ.
ಈ ಸಂಬಂಧ ವರ್ಷದ ಹಿಂದೆಯೇ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿಯಲಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುತ್ತಿರುವುದಾಗಿ ತಿಳಿಸಿದ ಗ್ರಾಮಸ್ಥರು ಶೀಘ್ರ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.