“ಅವರು ಮಲಗಿದ್ದಾರೆ. ಅವರಿಗೆ ವಯಸ್ಸು 87. ಸ್ವಲ್ಪ ಕಿವಿ ದೂರ. ನೀವು ಮಾತನಾಡಿಸಿದರೆ ಅವರಿಗೆ ಕೇಳದಿರಬಹುದು. ಅವರ ಆರೋಗ್ಯ ಚೆನ್ನಾಗಿದೆ. ಯಾವುದೇ ಸಮಸ್ಯೆಯಿಲ್ಲ. ಅವರ ಪರ ನಾನೇ ಮಾತನಾಡುತ್ತೇನೆ”. ಜಿಲ್ಲೆಯ 87ರ ವಯಸ್ಸಿನ ವೃದ್ಧೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದನ್ನು ಅರಿತು ಅವರನ್ನು ಸಂಪರ್ಕಿಸಲು ‘ಶಕ್ತಿ’ ಪ್ರಯತ್ನಿಸಿತು. ಅವರ ಮಗ ಕರೆಯನ್ನು ಸ್ವೀಕರಿಸಿ ಮೇಲ್ಕಂಡಂತೆ ಉತ್ತರಿಸಿದರು. ವೃದ್ಧೆ ಬೀವಿ ಪರವಾಗಿ ಆಕೆಯ ಮಗ ಮಾತನಾಡಿದರು. ಸಂಬಂಧಿಕರೋರ್ವರು ಬೆಂಗಳೂರಿನಿಂದ ಜಿಲ್ಲೆಯ ತಮ್ಮ ಮನೆಗೆ ಆಗಮಿಸಿದ್ದು, ಅವರಿಂದ ಸೋಂಕು - ವೃದ್ಧೆ, ಕರೆ ಸ್ವೀಕರಿಸಿದ ಆಕೆಯ ಮಗ ಸೇರಿದಂತೆ ಕುಟುಂಬದ 9 ಸದಸ್ಯರಿಗೂ ತಗುಲಿದ್ದು, ಎಲ್ಲರೂ ಈಗ ಚೇತರಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ ಬೀವಿ ಜಿಲ್ಲೆಯಲ್ಲಿ, ಕೊರೊನಾದಿಂದ ಗುಣಮುಖರಾದವರಲ್ಲಿ ಅತೀ ಹಿರಿಯರು ಹಾಗೂ ಆಕೆಯ 3 ತಿಂಗಳ ಮರಿಮಗ ಅತೀ ಕಿರಿಯನಾಗಿದ್ದಾನೆ. ಪುಟ್ಟ ಮಕ್ಕಳು ಹಾಗೂ ಹಿರಿಯರಿಗೆ ಕೊರೊನಾ ಬಂದರೆ ಅಪಾಯ ಎಂಬ ಭಯವನ್ನು ಹೋಗಿಸಲು ಇವರಿಬ್ಬರ ಅತೀ ಶೀಘ್ರ ಚೇತರಿಕೆಯೆ ಮಾದರಿಯಾಗಿದೆ. ಬೀವಿ ಅವರಿಗೆ ಸಕ್ಕರೆ ಕಾಯಿಲೆ ಇದ್ದು, ಕೊರೊನಾ ಸೋಂಕು ಇದ್ದಾಗ, ಸಕ್ಕರೆ ಕಾಯಿಲೆ ನಿಯಂತ್ರಣಾ ಮಾತ್ರೆ ಸೇವಿಸುತ್ತಿದ್ದರು ಹೊರತು ಇನ್ನು ಯಾವ ಮಾತ್ರೆಯ ಅವಶ್ಯಕತೆಯು ಇವರಿಗಿರಲಿಲ್ಲ. ವೈದ್ಯರ ಹಾರೈಕೆ, ಅಲ್ಲಿನ ಊಟೋಪಚಾರವೆ ಇವರ ಅತೀ ಶೀಘ್ರ ಬಿಡುಗಡೆಗೆ ಕಾರಣವಾಯಿತು. ಇನ್ನು 3 ತಿಂಗಳ ಪುಟ್ಟ ಮಗು ಕೂಡ ಯಾವುದೇ ತೊಂದರೆಯಿಲ್ಲದೆ ಗುಣಮುಖರಾಗಿದ್ದಾನೆ.

ಕೊರೊನಾ ಬಂದರೆ ಭಯಪಡುವುದು ಬೇಕಾಗಿಲ್ಲ. ವೈದ್ಯರ ಸಲಹೆಯನ್ನು ಪಾಲಿಸಿದರೆ ಸಾಕು. ಯಾವುದೇ ಔಷಧಿಯ ಅವಶ್ಯಕತೆಯೂ ಇಲ್ಲ. ಹೆದರದೆ ಇದ್ದರೆ ಸಾಕು ಅಷ್ಟೆ. ವಿಶೇಷವಾದ ಆಹಾರ ಸೇವನೆಯ ಅವಕಾಶವೂ ಇಲ್ಲಿ ಅಗತ್ಯವಿಲ್ಲ. ಸಾಧಾರಣಾ ಉಪಹಾರ, ಸಮಯಕ್ಕೆ ಸರಿಯಾಗಿ ಸೇವಿಸಿದರಾಯಿತು. ಇದರೊಂದಿಗೆ ರೋಗದ ಬಗ್ಗೆ ಹೆಚ್ಚು ಯೋಚಿಸದೆ ವಿಶ್ರಾಂತಿ ಪಡೆದರೆ ಕೇವಲ 10 ದಿನಗಳಲ್ಲಿಯೇ ರೋಗದಿಂದ ಗುಣಮುಖರಾಗಬಹುದು. ನಮ್ಮ ಕುಟುಂಬದವರೆಲ್ಲರು ಸೋಂಕು ತಗುಲಿದ ಕೇವಲ 10 ದಿನಗಳಲ್ಲಿ ಗುಣಮುಖರಾಗಿದ್ದು, ಇದರಲ್ಲಿ 87 ರ ವೃದ್ಧೆ ಹಾಗೂ 3 ತಿಂಗಳ ಮಗು ಸೇರಿದ್ದು ಜಿಲ್ಲೆಯ ಜನತೆ ಕೊರೊನಾ ಬಂದರೆ ಹೆದರುವ ಅವಶ್ಯಕತೆ ಇಲ್ಲ ಎನ್ನುವುದಕ್ಕೆ ಮಾದರಿಯಾಗಿದ್ದಾರೆ. ಈಗ ತÀಮ್ಮ ಕುಟುಂಬದ 9 ಮಂದಿ ಕೂಡ ಆರೋಗ್ಯವಾಗಿ ಇರುವುದಾಗಿ ಬೀವಿಯ ಮಗ ‘ಶಕ್ತಿ’ಯೊಂದಿಗೆ ತಮ್ಮ ಧೈರ್ಯದ ಮಾತುಗಳನ್ನಾಡಿದರು.