ಸುಂಟಿಕೊಪ್ಪ, ಜು. 31: ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ಗುಂಡುಕುಟ್ಟಿಯಲ್ಲಿ 35 ವರ್ಷದ ಪುರುಷರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಈ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ.

ಕಳೆದೆರಡು ದಿನಗಳಿಂದ ಜ್ವರ ಗೋಚರಿಸಿದ್ದು, ಆ ನಿಟ್ಟಿನಲ್ಲಿ ಗಂಟಲು ದ್ರವ ಪರೀಕ್ಷೆಯನ್ನು ಮಾಡಿಸಲಾಗಿದ್ದು, ಶುಕ್ರವಾರ ಮಧ್ಯಾಹ್ನ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲಾಡಳಿತದ ಆದೇಶದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಸೋಂಕು ಆ ಪ್ರದೇಶವನ್ನು ಕಂಟೈನ್‍ಮೆಂಟ್ ವಲಯ ಎಂದು ಘೋಷಿಸಿ 14 ದಿನಗಳ ಅವಧಿಗೆ ಸೀಲ್‍ಡೌನ್ ಮಾಡಿದರು.

ಕಂದಾಯ ಪರಿವೀಕ್ಷಕ ಶಿವಪ್ಪ, ಪಿಡಿಒ ವಿ.ಜಿ.ಲೋಕೇಶ್, ಎಎಸ್‍ಐ ಶಿವಪ್ಪ, ಆರೋಗ್ಯ ಇಲಾಖೆಯ ಯೋಗಿಣಿ, ಆಶಾ ಕಾರ್ಯಕರ್ತೆ ರೂಪ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಅವರು ಸೋಂಕಿತರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಸೀಲ್‍ಡೌನ್ ಮಾಡಿ ನಂತರ ಆ ಪ್ರದೇಶಕ್ಕೆ ಔಷಧಿ ಸಿಂಪಡಿಸಿದರು.