ಮಡಿಕೇರಿ, ಜು. 31: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ವಿಭಾಗದಲ್ಲಿ ಕರ್ತವ್ಯದಲ್ಲಿರುವ ಮೂಲತಃ ಕೊಡಗು ಜಿಲ್ಲೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಇದೀಗ ಮುಂಬಡ್ತಿ ಹೊಂದಿದ್ದು, ಎಸ್ಪಿಗಳಾಗಿ ನಿಯೋಜಿಸಲ್ಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋದಲ್ಲಿ ಡಿವೈಎಸ್ಪಿಯಾಗಿದ್ದ ಚೋಳಂಡ ಪೂವಯ್ಯ ಹಾಗೂ ಬೆಂಗಳೂರಿನಲ್ಲೇ ಸಿಐಡಿಯಲ್ಲಿ ಡಿವೈಎಸ್ಪಿಯಾಗಿದ್ದ ಚೋಕಿರ ಬೋಪಯ್ಯ ಅವರುಗಳು ಇದೀಗ ಪೊಲೀಸ್ ಅಧೀಕ್ಷಕರು (ಎಸ್ಪಿ)ಗಳಾಗಿ ಮುಂಬಡ್ತಿ ಹೊಂದಿದ್ದಾರೆ.
ಮೂಲತಃ ಜಿಲ್ಲೆಯ ಕಡಂಗಮುರೂರಿನವರಾದ ಚೋಳಂಡ ಪೂವಯ್ಯ ಅವರು 30 ವರ್ಷ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, 11 ವರ್ಷ ಎಸ್.ಐ, 12 ವರ್ಷ ಸಿ.ಐ. ಹಾಗೂ ಏಳು ವರ್ಷ ಡಿವೈಎಸ್ಪಿಯಾಗಿದ್ದರು. ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಅವರು ಈ ಹಿಂದೆ ಒಮ್ಮೆ ರಾಷ್ಟ್ರಪತಿ ಪದಕ ಸೇರಿದಂತೆ ಎರಡು ಬಾರಿ ಮುಖ್ಯಮಂತ್ರಿಗಳ ಪದಕವನ್ನು ಗಳಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಇವರು ಕೊಡಗಿನ ಕುಶಾಲನಗರದಲ್ಲಿ ಡಿವೈಎಸ್ಪಿಯಾಗಿದ್ದು, ನಂತರ ಬೆಂಗಳೂರಿಗೆ ವರ್ಗವಾಗಿದ್ದರು. ಮತ್ತೋರ್ವ ಅಧಿಕಾರಿ ಚೋಕಿರ ಬೋಪಯ್ಯ ಅವರು ಮೂಲತಃ ಜಿಲ್ಲೆಯ ನಾಪೋಕ್ಲು ಬೇತು ಗ್ರಾಮದವರಾಗಿದ್ದು, ಇವರು 1991ರಲ್ಲಿ ಪೊಲೀಸ್ ಠಾಣಾಧಿಕಾರಿಯಾಗಿ ನಂತರ ಬೆಂಗಳೂರಿನ ಗ್ರಾಮೀಣ ಮತ್ತು ನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ಇಲಾಖೆಯಲ್ಲಿ ಉತ್ತಮ ಹೆಸರು ಮಾಡಿದ್ದಾರೆ.