ಮಡಿಕೇರಿ, ಜು. 31: ಸಿಇಟಿ ಪರೀಕ್ಷೆ ಬರೆದು ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳ ದ್ವಿಚಕ್ರ ವಾಹನ ಕಾರಿಗೆ ಡಿಕ್ಕಿಯಾಗಿದ್ದು, ವಿದ್ಯಾರ್ಥಿಯೋರ್ವ ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ನಂಜರಾಯಪಟ್ಟಣದ ವಿದ್ಯಾರ್ಥಿಗಳಾದ ಶ್ರೇಯಸ್ (19) ಹಾಗೂ ಶಿಬಿನ್ (19) ಎಂಬವರುಗಳು ಇಂದು ಇಲ್ಲಿನ ಸಂತ ಜೋಸೆಫರ ಶಾಲೆಯಲ್ಲಿ ಸಿಇಟಿ ಪರೀಕ್ಷೆ ಬರೆದು ದ್ವಿಚಕ್ರ ವಾಹನದಲ್ಲಿ (ಕೆ.ಎ. 12 ಓ. 4379) ಮೈಸೂರು ರಸ್ತೆಯಲ್ಲಿ ತೆರಳುತ್ತಿದ್ದಾಗ ಸಂಪಿಗೆಕಟ್ಟೆ ಬಳಿಯ ಸ್ವಾಗತ ಕಮಾನು ಬಳಿ ತಿರುವಿನಲ್ಲಿ ಎದುರುಗಡೆಯಿಂದ ಆಗಮಿಸಿದ ಕಾರಿಗೆ ಸ್ಕೂಟಿ ಅಪ್ಪಳಿಸಿದೆ.
ವಿದ್ಯಾರ್ಥಿಗಳಿಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದ ಶ್ರೇಯಸ್‍ನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಶಿಬಿನ್‍ನ ಮುಖ ಭಾಗಕ್ಕೆ ಗಂಭೀರಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಗರ ಸಂಚಾರಿ ಠಾಣಾಧಿಕಾರಿ ಬೆಳ್ಯಪ್ಪ ಅವರು ಭೇಟಿ ನೀಡಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.