ಸುಂಟಿಕೊಪ್ಪ, ಜು. 31: ಕೋವಿಡ್-19 ನಿಯಂತ್ರಣ ಸಂಬಂಧಿಸಿದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಮೊಬೈಲ್ ಕರೆಯ ಮೂಲಕ ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್ ಇಬ್ಬರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗುರುವಾರ ಬೆಳಿಗ್ಗೆ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿದ್ದ ಪಿಡಿಒ ಅವರು ಮಾಸ್ಕ್ ಧರಿಸದ ಜನರಿಗೆ ಮಾಸ್ಕ್ ಧರಿಸುವಂತೆ ಮತ್ತು ರಸ್ತೆಯಲ್ಲಿ ಉಗುಳದಂತೆ ಮಾಹಿತಿ ನೀಡಿ ಅಂತವರಿಗೆ ದಂಡ ವಿಧಿಸುತ್ತಿದ್ದರು. ಇದೇ ವೇಳೆ ಪಟ್ಟಣದ ಮಧ್ಯ ಭಾಗದ ಹೊಟೇಲ್ ಮುಂಭಾಗದಲ್ಲಿ ಕಮರುನ್ನೀಸಾ ಎಂಬವರು ರಸ್ತೆಯಲ್ಲಿ ಉಗುಳುತ್ತಿರುವುದನ್ನು ಗಮನಿಸಿ ಅವರಿಗೆ ದಂಡ ವಿಧಿಸಲು ಮುಂದಾದಾಗ ದಂಡ ಪಾವತಿಸಲು ನಿರಾಕರಿಸಿದ ಆಕೆ ಪಿಡಿಒ ಅವರೊಂದಿಗೆ ವಾಗ್ವಾದಕ್ಕಿಳಿದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಸಂಜೆ ವೇಳೆಗೆ ಮಹಿಳೆಯ ಸಂಬಂಧಿಕರಾದ ಜಾಹೀರ್ ಎಂಬವರು ಮೊಬೈಲ್ಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೇ ಕೊಲೆ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಇಬ್ಬರು ವ್ಯಕ್ತಿಗಳ ಮೇಲೆ ಪಿಡಿಒ ವೇಣುಗೋಪಾಲ್ ಅವರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.