ವೀರಾಜಪೇಟೆ, ಆ. 1: ಸರಕಾರವು ಒದಗಿಸುವ ಸೌಲಭ್ಯಗಳನ್ನು ಹೊಂದಿಕೊಂಡು ಫಲಾನುಭವಿಗಳು ಪ್ರಗತಿಯತ್ತ ಸಾಗಬೇಕು. ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ವೀರಾಜಪೇಟೆ ಪುರಭವನದಲ್ಲಿ ತಾಲೂಕು ಕಂದಾಯ ಇಲಾಖೆಯಿಂದ ಆಯೋಜಿಸಿದ್ದ ಸುಮಾರು 70 ಫಲಾನುಭವಿಗಳಿಗೆ ಹಕ್ಕುಪತ್ರ, ಸಂಧ್ಯಾ, ವಿಧವಾ, ವೃದ್ಧಾಪ್ಯ ವೇತನದ ದೃಢೀಕರಣ ಪತ್ರಗಳನ್ನು ವಿತರಿಸಿ ಶಾಸಕ ಬೋಪಯ್ಯ ಅವರು ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್, ವೀರಾಜಪೇಟೆ ವಿಭಾಗದ ಕಂದಾಯ ನಿರೀಕ್ಷಕ ಪಳಂಗಪ್ಪ ಪ್ರಕಾಶ್ ಸಿಬ್ಬಂದಿಗಳು ಹಾಜರಿದ್ದರು.