ವೀರಾಜಪೇಟೆ, ಜು. 31: ಕೊರೊನಾ ಸಂಕಷ್ಟ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸಿ.ಐ.ಟಿ.ಯು. ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕ ವೀರಾಜಪೇಟೆಯ ಮಿನಿ ವಿಧಾನ ಸೌಧದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಈ ಸಂದರ್ಭ ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಪತ್ರಿಕೆಯೊಂದಿಗೆ ಮಾತನಾಡುತ್ತಾ-“ಕೊರೊನಾ ಸಂಕಷ್ಟದಿಂದ ದುಡಿಮೆಯಿಲ್ಲದೆ ಕಷ್ಟ ಅನುಭವಿಸುವ ಕಟ್ಟಡ ಕಾರ್ಮಿಕರಿಗೆ ಸರಕಾರ ರೂ. 5,000 ಪರಿಹಾರ ಧನವನ್ನು ನೀಡುವುದಾಗಿ ಏಪ್ರಿಲ್ ತಿಂಗಳಿನಲ್ಲಿ ಘೋಷಣೆ ಮಾಡಿದ್ದರೂ ಇಂದಿನವರೆಗೂ ನೀಡಿರುವುದಿಲ್ಲ ಎಂದರು. ಕಾರ್ಮಿಕರ ಕಾನೂನಿನಲ್ಲಿ ಬದಲಾವಣೆ ಮಾಡಬೇಕು. ಎಲ್ಲಾ ಕಟ್ಟಡ ಕಾರ್ಮಿಕರುಗಳಿಗೆ ಆಹಾರ ಕಿಟ್‍ನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.

ಮನವಿ ಪತ್ರವನ್ನು ಸ್ವೀಕರಿಸಿದ ಕಾರ್ಮಿಕ ಅಧಿಕಾರಿ ಹೆಚ್.ಪಿ.ಜಯಣ್ಣ ಮನವಿಯನ್ನು ಪುರಸ್ಕರಿಸುವುದಾಗಿ ಭರವಸೆ ನೀಡಿದರು. ಈಗಾಗಲೇ ವೀರಾಜಪೇಟೆ ತಾಲೂಕಿನ 1,042 ಅರ್ಜಿಗಳಲ್ಲಿ 750 ಅರ್ಜಿಗಳನ್ನು ಸರಕಾರಕ್ಕೆ ಕಳುಹಿಸಲಾಗಿದ್ದು, ಉಳಿದ ಅರ್ಜಿಗ¼ ಪರಿಶೀಲನೆಯ ನಂತರ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು. ಪ್ರತಿಭಟನೆಯ ನೇತೃತ್ವವನ್ನು ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಕೋಶಾಧಿಕಾರಿ ಸಿ.ಎ.ಹಮೀದ್, ಹರಿದಾಸ್, ಮಧು, ಪದ್ಮಿನಿ ಶ್ರೀಧರ್, ರೀಟಾ ಹಾಗೂ ಧನಲಕ್ಷ್ಮಿ ವಹಿಸಿದ್ದರು.