ಕುಶಾಲನಗರ, ಜು 31: ಪಟ್ಟಣ ಪಂಚಾಯ್ತಿಯ ನಿಯಮಾನುಸಾರ ಅನುಮೋದನೆ ಪಡೆಯದೆ ನಿರ್ಮಾಣವಾಗುತ್ತಿರುವ ನೂತನ ಬಡಾವಣೆಗೆ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಸ್ಥಳೀಯ ಕೆಲವು ಜನಪ್ರತಿನಿಧಿಗಳು ಪ್ರಮುಖರೊಂದಿಗೆ ಪಟ್ಟಣ ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಪಟ್ಟಣದ ಬೈಚನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಬಡಾವಣೆಯಲ್ಲಿ ಸಾರ್ವಜನಿಕ ಬಳಕೆಗೆ ಜಾಗ ಮೀಸಲಿಡದೆ ಬಡಾವಣೆ ಅಭಿವೃದ್ಧಿಪಡಿಸುತ್ತಿರುವ ಪ್ರಕರಣದ ಬಗ್ಗೆ ಹಲವು ಬಾರಿ ಪ್ರತಿಭಟಿಸಿ ಕಾಮಗಾರಿಗೆ ತಡೆಯೊಡ್ಡಲು ಒತ್ತಾಯಿಸಿದ್ದರೂ ಕೂಡ ಅಧಿಕಾರಿ ವರ್ಗ ಯಾವುದೇ ಕ್ರಮಕೈಗೊಂಡಿಲ್ಲ. ಉದ್ಯಾನವನ ಮತ್ತಿತರ ಸ್ಥಳಗಳಿಗೆ ಅವಕಾಶ ಕಲ್ಪಿಸಿಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪಂಚಾಯ್ತಿಯಿಂದ ಖಾತೆ ಮಾಡಿಕೊಟ್ಟಿರುವ ಪಂಚಾಯ್ತಿ ಕ್ರಮದ ಬಗ್ಗೆ ಜಿ.ಪಂ. ಮಾಜಿ ಸದಸ್ಯ ವಿ.ಪಿ.ಶಶಿಧರ್ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ಪಂಚಾಯ್ತಿ ಮುಖ್ಯಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ಕೂಡಲೆ ಪಂಚಾಯ್ತಿ ಆಸ್ತಿಯನ್ನು ನೊಂದಾಯಿಸಿಕೊಳ್ಳಲು ಕ್ರಮಕೈಗೊಳ್ಳು ವಂತೆ ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯ್ತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಮುಂದಿನ ಒಂದು ವಾರದ ಒಳಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ, ಪಟ್ಟಣ ಪಂಚಾಯ್ತಿ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಸುಂದರೇಶ್, ಎಂ.ಬಿ.ಸುರೇಶ್, ವಿವಿಧ ಸಂಘಟನೆಗಳ ಪ್ರಮುಖರಾದ ವೆಂಕಟೇಶ್ ಪೂಜಾರಿ, ಶಬ್ಬೀರ್, ಚಂದ್ರು, ನವೀನ್, ಸುಖೇಶ್ ಮತ್ತಿತರರು ಇದ್ದರು.