ಮುಳ್ಳೂರು, ಜು. 30: ರೋಟರಿ ಸಂಸ್ಥೆಯ ಸದಸ್ಯರಲ್ಲಿ ಸಾಮಾಜಿಕ ಚಿಂತನೆ, ಚೈತನ್ಯ ಹುಮ್ಮಸ್ಸು ಇದ್ದಲ್ಲಿ ಸಂಸ್ಥೆ ಮತ್ತು ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ರೋಟರಿ ಕ್ಲಬ್‍ನ 2020-21ನೇ ಸಾಲಿನ ಜಿಲ್ಲಾ ಗವರ್‍ನರ್ ಮಹೇಶ್‍ಕುಮಾರ್ ನಲ್ವಾಡಿ ಅಭಿಪ್ರಾಯಪಟ್ಟರು.

ಸ್ಥಳೀಯ ರೋಟರಿ ಕ್ಲಬ್ ಸಭಾಂಗಣದಲ್ಲಿ ಶನಿವಾರಸಂತೆ ರೋಟರಿ ಕ್ಲಬ್‍ನ 2020-21ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು. ರೋಟರಿ ಸಂಸ್ಥೆಯು ವಿಶ್ವಮಟ್ಟದಲ್ಲಿ ಸಮಾಜ ಸೇವೆ ನೀಡುತ್ತಿರುವ ಸಂಸ್ಥೆಯಾಗಿದ್ದು, ಸಂಸ್ಥೆಯ ಸದಸ್ಯರುಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದರು.

ರೋಟರಿ ಕ್ಲಬ್ ಜಿಲ್ಲಾ ಸಹಾಯಕ ಗವರ್‍ನರ್ ಪಿ.ಕೆ. ರವಿ ಮಾತನಾಡಿ, ಮುಂದಿನ ಸಾಲಿನಲ್ಲಿ ರೋಟರಿ ಕ್ಲಬ್ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಆರೋಗ್ಯ ಶಿಬಿರ, ಪೋಲಿಯೋ ಲಸಿಕೆ ಕಾರ್ಯಕ್ರಮ, ಪರಿಸರಕ್ಕೆ ಉತ್ತೇಜನ ನೀಡುವ ಸಲುವಾಗಿ ಜಿಲ್ಲೆಯಲ್ಲಿ 5 ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.

ರೋಟರಿ ಕ್ಲಬ್‍ನ 2020-21ನೇ ಸಾಲಿನ ನೂತನ ಅಧ್ಯಕ್ಷ ಹೆಚ್.ವಿ. ದಿವಾಕರ್ ಅಧಿಕಾರ ಸ್ವೀಕರಿಸಿ ಮಾತನಾಡಿ, ಶನಿವಾರಸಂತೆ ವ್ಯಾಪ್ತಿಯನ್ನು ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸುವ ಮೂಲಕ ರೋಟರಿ ಕ್ಲಬ್ ಅಭಿವೃದ್ಧಿಪಡಿಸಲಾಗುವುದು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಜಿಲ್ಲಾ ಪ್ರಮುಖ ಜೇಕಬ್, ನಿಕಟಪೂರ್ವ ಅಧ್ಯಕ್ಷ ಎಸ್.ವಿ. ಶುಭು, ನಿಕಟಪೂರ್ವ ಕಾರ್ಯದರ್ಶಿ ಹೆಚ್.ಪಿ. ಚಂದನ್, ನೂತನ ಕಾರ್ಯದರ್ಶಿ ಎ.ಡಿ. ಮೋಹನ್‍ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ರೋಟೇರಿಯನ್ ಶ್ವೇತ ವಸಂತ್, ನಿಕಟಪೂರ್ವ ಮತ್ತು ನೂತನ ಸಾಲಿನ ಪದಾಧಿಕಾರಿಗಳು ಹಾಜರಿದ್ದರು. - ಭಾಸ್ಕರ್, ಮುಳ್ಳೂರು.