ಮಡಿಕೇರಿ, ಜು. 30: ಜಿಲ್ಲೆಯಲ್ಲಿ ಮೀನು ಕೃಷಿ ಅಭಿವೃದ್ಧಿ ಪಡಿಸಲು ಇರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಆತ್ಮ ನಿರ್ಭರ ಭಾರತ’ ಕಾರ್ಯಕ್ರಮದಡಿ ‘ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ’ ಪ್ರಸಕ್ತ ಸಾಲಿನ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಕಾಫಿ ತೋಟ ಮತ್ತು ಕೃಷಿ ಹೊಂಡಗಳಲ್ಲಿ ಮೀನು ಕೃಷಿ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು. ಜೊತೆಗೆ ಮತ್ಸ್ಯ ಕೃಷಿ ಸಂಬಂಧ ರೈತರಿಗೆ ತರಬೇತಿ ನೀಡಬೇಕು. ಹಾಗೆಯೇ ಮೀನುಗಳ ಸಾಕಾಣಿಕೆಗೆ ಬೇಕಾದ ಆಹಾರ ಪದಾರ್ಥಗಳಿಗೂ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಅವರು ಸೂಚಿಸಿದರು.
ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ಮಾಹಿತಿ ನೀಡಿ, ಆತ್ಮ ನಿರ್ಭರ್ ಭಾರತ ಅಡಿಯಲ್ಲಿ ಈ ಯೋಜನೆ ತರಲಾಗಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒಂದು ಜಿಲ್ಲಾ ಸಮಿತಿ ಇರುತ್ತದೆ ಎಂದು ತಿಳಿಸಿದರು. ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿ ದಂತೆ 66 ಕಾರ್ಯಕ್ರಮ ನೀಡಲಾಗಿದೆ. ಈ ಮೂಲಕ ಜಿಲ್ಲೆಯ ಮತ್ಸ್ಯ ಕೃಷಿಗೆ ಅನುಕೂಲವಾಗುವಂತೆ ರೂ. 4.81 ಕೋಟಿಗಳ ಕ್ರಿಯಾಯೋಜನೆ ಸಿದ್ಧಪಡಿ ಸಲಾಗಿದೆ ಎಂದು ಅವರು ತಿಳಿಸಿದರು.
ಸ್ತ್ರೀ ಶಕ್ತಿ ಸ್ವ ಸಹಾಯ ಹಾಗೂ ಹಾಲು ಉತ್ಪಾದಕರ ಸಂಘದ ಸದಸ್ಯರಿಗೆ ಅಲಂಕಾರಿಕಾ ಮೀನು ಸಾಕಾಣಿಕೆ ಬಗ್ಗೆ ಪ್ರೋತ್ಸಾಹ ನೀಡಬೇಕು. ಇದರೊಂದಿಗೆ ಕ್ರಿಯಾ ಯೋಜನೆಯ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿ ಮತ್ಸ್ಯ ಕೃಷಿ ಅಭಿವೃದ್ಧಿಗೆ ಬೇಕಾದ ಕಾರ್ಯಕ್ರಮಗಳನ್ನು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಸೇರಿಸುವಂತೆ ತೀರ್ಮಾನಿಸಲಾಯಿತು.
ಜಂಟಿ ಕೃಷಿ ನಿರ್ದೇಶಕ ಕೆ. ರಾಜು, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ. ಪ್ರಭಾಕರ್, ನಗರದ ಕೃಷಿ ಸಂಶೋಧನಾ ಕೇಂದ್ರದ ಡಾ. ಬಸವಲಿಂಗಯ್ಯ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಸಚಿನ್ (ಹಾರಂಗಿ), ಮಂಜುನಾಥ್ (ಸೋಮವಾರಪೇಟೆ), ಸಚಿನ್ (ಪೊನ್ನಂಪೇಟೆ) ಮೀನುಗಾರಿಕೆ ಇಲಾಖೆಯ ಹಾರಂಗಿ ವಿಭಾಗದ ಮೇಲ್ವಿಚಾರಕ ಮಹದೇವು, ಜಿ.ಪಂ.ನ ವಸಂತ್ ಇತರರು ಇದ್ದರು.