ಮಡಿಕೇರಿ, ಜು. 30 : ಜಿಲ್ಲೆಯಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೋವಿಡ್ ಪ್ರಯೋಗಾಲಯವನ್ನು ತಾಲೂಕು ಕೇಂದ್ರಗಳಲ್ಲಿಯೂ ತೆರೆದು ಪರೀಕ್ಷೆ ಆರಂಭಿಸುವಂತಾಗಬೇಕು ಎಂಬ ಒತ್ತಾಯ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಕೇಳಿಬಂತು.ನಗರದ ಜಿ.ಪಂ. ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೋವಿಡ್-19 ನಿಯಂತ್ರಣ ಮಾಡುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಸಭೆಯ ಆರಂಭದಲ್ಲಿ ಮಾತ ನಾಡಿದ ಸದಸ್ಯರಾದ ಶಿವುಮಾದಪ್ಪ ಅವರು ಜಿಲ್ಲೆಯಲ್ಲಿ ಕೋವಿಡ್-19 ಹೆಚ್ಚುತ್ತಿದ್ದು, ಈ ಸೋಂಕನ್ನು ನಿಯಂತ್ರಣ ಮಾಡಬೇಕಿದೆ ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಅವರು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲೂ ಸಹ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, ಪರೀಕ್ಷಾ ವರದಿಗೆ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡ ಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೊರೊನಾ ಪರೀಕ್ಷಾ ವರದಿಯು ಆಯಾಯ ದಿನವೇ ಲಭ್ಯವಾಗುತ್ತಿಲ್ಲ. ಆದ್ದರಿಂದ ತಾಲೂಕು ಮಟ್ಟದಲ್ಲಿ ಪ್ರಯೋಗಾಲಯ ಆರಂಭಿಸಿ ಆಯಾಯ ದಿನವೇ ವರದಿ ನೀಡುವಂತಾಗಬೇಕು ಎಂದು ಜಿ.ಪಂ. ಸದಸ್ಯರು ಒತ್ತಾಯಿಸಿದರು.

ಈ ಕುರಿತು ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಕಾರ್ಯಪ್ಪ ಅವರು ಕೋವಿಡ್ ಪ್ರಯೋಗಾಲಯ ಆರಂಭಿಸಲು ಒಂದೂವರೆ ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಿದರು. ಜಿಲ್ಲೆಯ ಗಡಿಭಾಗ ಗಳಲ್ಲಿಯೂ ಸಹ ಮದ್ಯ ಮಾರಾಟಕ್ಕೆ ಮುಕ್ತಗೊಳಿಸಲಾಗಿದೆ. ಆದರೆ ಕೇರಳ ರಾಜ್ಯದ ಗಡಿಭಾಗವನ್ನು ಬಂದ್ ಮಾಡಿರುವುದಾದರೂ ಏಕೆ ಎಂದು ಶಿವುಮಾದಪ್ಪ ಪ್ರಶ್ನಿಸಿದರು.

ಈ ಸಂದರ್ಭ ಮಾತನಾಡಿದ ಸದಸ್ಯೆ ಸುನಿತಾ ಕೋವಿಡ್ ಪರೀಕ್ಷೆ ಸಂಬಂಧಿಸಿದಂತೆ ತಾಯಿ ಮತ್ತು ಮಗು ಆಸ್ಪತ್ರೆಗೆ ತೆರಳಿದ ಸಂದರ್ಭ ಮಗುವಿಗೆ ಮಾತ್ರ ಕೋವಿಡ್ ಪರೀಕ್ಷೆ ಮಾಡುತ್ತಾರೆ. ಆದರೆ ತಾಯಿಯನ್ನು ಏಳು ದಿನದ

(ಮೊದಲ ಪುಟದಿಂದ) ನಂತರ ಕೋವಿಡ್ ಪರೀಕ್ಷೆಗೆ ಆಹ್ವಾನಿಸುತ್ತಾರೆ. ಇದು ಸರಿಯೇ ಎಂದು ಪ್ರಶ್ನಿಸಿದರು.

ಈ ಕುರಿತು ಮಾಹಿತಿ ನೀಡಿದ ಡಿಎಚ್‍ಒ ಮೋಹನ್ ಅವರು ಮಗುವನ್ನು ಪರೀಕ್ಷಿಸಿದ ನಂತರ ವರದಿ ನೋಡಿಕೊಂಡು ಪ್ರಾಥಮಿಕ ಸಂಪರ್ಕದಲ್ಲಿರುವರನ್ನು ಗಮನಿಸಿ ಪರೀಕ್ಷೆ ಮಾಡಲಾಗುತ್ತದೆ ಎಂದು ಸ್ಪಷ್ಟ ಪಡಿಸಿದರು.

ಸದಸ್ಯ ಅಪ್ಪಚಂಡ ಮಹೇಶ್ ಮಾತನಾಡಿ ಸೀಲ್‍ಡೌನ್ ಮಾಡುವ ಕಡೆಗಳಲ್ಲಿ ಆಹಾರ ಮತ್ತು ತರಕಾರಿ ಯನ್ನು ಉಚಿತವಾಗಿ ಪೂರೈಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸದಸ್ಯರಾದ ಪಂಕಜ, ಸುನಿತಾ, ಪ್ರಥ್ಯು, ಶಿವುಮಾದಪ್ಪ, ಕೆ.ಪಿ.ಚಂದ್ರಕಲಾ ಧ್ವನಿಗೂಡಿಸಿದರು.

ಸದಸ್ಯ ಬಾನಂಡ ಪ್ರಥ್ಯು ಒಬ್ಬ ಕೋವಿಡ್ ಸೋಂಕಿತರಿಗೆ ದಿನಕ್ಕೆ ಎಷ್ಟು ವೆಚ್ಚವಾಗಲಿದೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖಾ ಅಧಿಕಾರಿಗಳು ನೀಡಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಮಾಹಿತಿ ನೀಡಿದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಕಾರ್ಯಪ್ಪ ಒಬ್ಬರಿಗೆ ಇಂತಿಷ್ಟು ವೆಚ್ಚವಾಗಲಿದೆ ಎಂದು ಹೇಳಲು ಬರುವುದಿಲ್ಲ. ಕೋವಿಡ್ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ವಾರ್ಡ್, ಮಕ್ಕಳ ವಾರ್ಡ್, ಕೋವಿಡ್ ಕೇರ್ ಸೆಂಟರ್ ಹೀಗೆ ಎಲ್ಲಾ ಕಡೆಯು ಗಮನಹರಿಸಬೇಕಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಪ್ರಕೃತಿ ವಿಕೋಪದಡಿ ಹಣ ಖರ್ಚು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೋವಿಡ್-19 ನಿಯಂತ್ರಣ ಕುರಿತು ಮೂಕೊಂಡ ಪಿ.ಸುಬ್ರಮಣಿ ಹಾಗೂ ಮೂಕೊಂಡ ವಿಜು ಸುಬ್ರಮಣಿ, ಕಿರಣ್ ಕಾರ್ಯಪ್ಪ, ಶ್ರೀನಿವಾಸ್, ಅಪ್ಪಚಂಡ ಮಹೇಶ್ ಗಣಪತಿ, ಸಿ.ಪಿ.ಪುಟ್ಟರಾಜು, ಸಿ.ಕೆ. ಬೋಪಣ್ಣ ಇತರರೂ ಮಾಹಿತಿ ಪಡೆದರು.

ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹೊಸಮನೆ ಕವಿತಾ ಪ್ರಭಾಕರ್ ಕೊರೊನಾ ವೈರಸ್‍ನಿಂದಾಗಿ ಶಾಲೆಗಳು ಆರಂಭವಾಗಿಲ್ಲ. ಆ ನಿಟ್ಟಿನಲ್ಲಿ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ಆದರೆ ಕರಿಕೆ, ಪೆರಾಜೆ, ಚೆಂಬು ಮತ್ತಿತರ ಕುಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಹಾಗೂ ಅಂತರ್ಜಾಲ ಸಮಸ್ಯೆ ಇದೆ. ಆದ್ದರಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ನೀಡುತ್ತಿದ್ದೀರ ಎಂದು ವಿಷಯ ಪ್ರಸ್ತಾಪಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೂರದರ್ಶನ ಚಂದನ ವಾಹಿನಿ ಮೂಲಕ ಪಾಠ ಭೋದನೆ ಮಾಡಲಾಗುತ್ತದೆ.

ಜಿಲ್ಲೆಯ ಹಲವು ಕಡೆಗಳಲ್ಲಿ ಸಮುದಾಯ ಭವನಗಳಲ್ಲಿ ಚಂದನ ವಾಹಿನಿ ಮೂಲಕ ಪಾಠ ನಡೆಯುತ್ತಿದೆ. ಸಮುದಾಯ ಭವನ ಒದಗಿಸಿದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಥಳೀಯವಾಗಿ ಪಾಠ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಮೂಕೊಂಡ ಪಿ.ಸುಬ್ರಮಣಿ ಅವರು ಮಾತನಾಡಿ ಮೂರ್ನಾಡು ಶಾಲೆಯಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.

ಈ ಬಗ್ಗೆ ಮಾಹಿತಿ ನೀಡಿದ ಡಿಡಿಪಿಐ ಪಿ.ಎಸ್.ಮಚ್ಚಾಡೋ ಐದು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಪಂಕಜ ಮಾತನಾಡಿ ತಿತಿಮತಿ ಪ್ರೌಢಶಾಲೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂದರು.

ಸದಸ್ಯ ಬಿ.ಜೆ. ದೀಪಕ್ ಸೋಮವಾರಪೇಟೆ ತಾಲೂಕಿನಲ್ಲಿ ಹಲವು ರಸ್ತೆಗಳು ಹದಗೆಟ್ಟಿವೆ. ಇದನ್ನು ಸರಿಪಡಿಸಬೇಕು ಎಂದರು.

ಸರೋಜಮ್ಮ ಮಾತನಾಡಿ ತೋಳೂರು ಶೆಟ್ಟಳ್ಳಿ ರಸ್ತೆ ನಿರ್ಮಾಣಕ್ಕೆ ಜಲ್ಲಿಕಲ್ಲು ಸುರಿಯಲಾಗಿತ್ತು, ಆದರೆ ಕಾಮಗಾರಿ ಆರಂಭಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದ್ದ 4,334 ಕುಟುಂಬಗಳಲ್ಲಿ 3,300 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಉಳಿದಂತೆ 850 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ. ಜೊತೆಗೆ ಚೈನಿಹಡ್ಲು, ಬೊಮ್ಮಾಡು ಮತ್ತಿತರ ನಾಲ್ಕು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದೆ ಎಂದು ಅವರು ತಿಳಿಸಿದರು.

ಜಿ.ಪಂ.ಉಪಾಧ್ಯಕ್ಯೆ ಲೋಕೇಶ್ವರಿ ಗೋಪಾಲ್ ವಿದ್ಯುತ್ ಮಾರ್ಗ ಹಾದು ಹೋಗಿರುವ ಕಡೆ ವಿದ್ಯುತ್ ತಂತಿಗಳು ಮರಕ್ಕೆ ತಾಗುವ ಹಾಗೂ ನೆಲಕ್ಕೆ ಬೀಳುವ ಹಂತದಲ್ಲಿದ್ದು, ಈ ಬಗ್ಗೆ ಪರಿಶೀಲಿಸಬೇಕಿದೆ ಎಂದರು.

ಸದಸ್ಯೆ ಪಂಕಜ ಮಾತನಾಡಿ ಹಾಡಿಗಳಲ್ಲಿ ಐಟಿಡಿಪಿ ಇಲಾಖೆಯಿಂದ ಸಾಕಷ್ಟು ಕೆಲಸಗಳು ಆಗುತ್ತಿವೆ. ಅದಕ್ಕೆ ಸೆಸ್ಕ್ ಇಲಾಖೆಯವರು ಅಗತ್ಯ ಸಹಕಾರ ನೀಡಬೇಕಿದೆ ಎಂದರು.

ಲೋಕೋಪಯೋಗಿ ಇಲಾಖೆಗೆ ರಸ್ತೆ, ಸೇತುವೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರ ಮಾರ್ಚ್ ತಿಂಗಳಲ್ಲಿ ರೂ. 14 ಕೋಟಿ ಬಿಡುಗಡೆ ಮಾಡಿತ್ತು, ಆದರೆ ಈ ಅನುದಾನ ಬಳಕೆಯಾಗದ ಬಗ್ಗೆ ಜಿ.ಪಂ. ಸದಸ್ಯ ಮುರಳಿ ಕರುಂಬಮ್ಮಯ್ಯ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎ. ಭವ್ಯ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಆರ್.ಮಂಜುಳ, ಸದಸ್ಯರಾದ ಎಚ್.ಆರ್. ಶ್ರೀನಿವಾಸ್, ಲೀಲಾವತಿ, ಯಾಲದಾಳು ಪದ್ಮಾವತಿ, ಕುಮುದ ಧರ್ಮಪ್ಪ, ಬಿ.ಜೆ. ದೀಪಕ್, ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್ ಹಲವು ವಿಷಯಗಳ ಕುರಿತು ಪ್ರಸ್ತಾಪಿಸಿದರು.