ಸೋಮವಾರಪೇಟೆ, ಜು.30 : ಅವಿವಾಹಿತ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ನಡೆದಿದೆ.

ಬಜೆಗುಂಡಿ ಗ್ರಾಮ ನಿವಾಸಿ ಮಣಿ ಎಂಬವರ ಪುತ್ರ ರದೀಶ್(26) ಎಂಬಾತನೇ ಆತ್ಮಹತ್ಯೆಗೆ ಶರಣಾದವನು. ನಿನ್ನೆ ದಿನ ಸಂಜೆ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ರದೀಶ್, ನಂತರ ಮನೆಯಿಂದ ವಾಪಸ್ ಹೋದವನು ಇಂದು ಬೆಳಗ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಕೇರಳದಲ್ಲಿ ಮೆಕ್ಯಾನಿಕ್ ಕೆಲಸ ನಿರ್ವಹಿಸುತ್ತಿದ್ದ ಯುವಕ, ಕಳೆದ 6 ತಿಂಗಳ ಹಿಂದೆ ಬಜೆಗುಂಡಿಯ ಮನೆಗೆ ವಾಪಸ್ ಆಗಿದ್ದು, ಸ್ಥಳೀಯವಾಗಿ ಗಾರೆ ಕೆಲಸ ಮಾಡಿಕೊಂಡಿದ್ದ. ನಿನ್ನೆ ಸಂಜೆ ಮನೆಯಿಂದ ತೆರಳಿದವನು ರಾತ್ರಿ ಸಹೋದರ ಪ್ರಮೋದ್ ಅವರ ಮೊಬೈಲ್‍ಗೆ ‘ವಾಯ್ಸ್ ಮೆಸೇಜ್’ ಕಳುಹಿಸಿ ತಾನು ಆತ್ಮಹತ್ಯೆಗೆ ಶರಣಾಗುತ್ತಿರುವದಾಗಿ ತಿಳಿಸಿದ್ದಾನೆ.

ಇದಾದ ನಂತರ ಕಾಫಿ ತೋಟದೊಳಗೆ ಮರದ ಕೊಂಬೆಗೆ ಕೇಬಲ್ ಬಿಗಿದು ಇದೇ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವದಾಗಿ ಫೋಟೋ ಕಳಿಸಿದ್ದಾನೆ. ಇದರಿಂದ ಆತಂಕಕ್ಕೆ ಒಳಗಾದ ಮನೆಮಂದಿ ರಾತ್ರಿಯಿಡೀ ಸುತ್ತಮುತ್ತಲ ಕಾಫಿ ತೋಟದಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಇಂದು ಬೆಳಿಗ್ಗೆ ಬಳಗುಂದ ಗ್ರಾಮದ ರವಿ ಎಂಬವರು ದನಗಳನ್ನು ಮೇಯಿಸಲೆಂದು ತೆರಳಿದ ಸಂದರ್ಭ, ಬಜೆಗುಂಡಿ ಸರ್ಕಾರಿ ಪ್ರಾಥಮಿಕ ಶಾಲಾ ಹಿಂಭಾಗದಲ್ಲಿರುವ ಮೋಹನ್‍ದಾಸ್ ಎಂಬವರ ಕಾಫಿ ತೋಟದೊಳಗೆ ರದೀಶ್‍ನ ಮೃತದೇಹ ಪತ್ತೆಯಾಗಿದೆ.

ಬೋರ್‍ವೆಲ್‍ಗೆ ಉಪಯೋಗಿಸುವ ಕೇಬಲ್‍ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದ್ದು., ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.