ಕೂಡಿಗೆ, ಜು. 31: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಗು- ಹಾಸನ ಗಡಿ ಭಾಗದಲ್ಲಿರುವ ಸ್ವಾತಿ ಹಳ್ಳದ ಕಾಮಗಾರಿಯು ಜಿಲ್ಲೆಯ ವಿಶೇಷ ಪ್ಯಾಕೇಜ್ ಅನುದಾನ ರೂ. 82 ಲಕ್ಷ ವೆಚ್ಚದಲ್ಲಿ ನಡೆಯುತಿದ್ದು, ಕಾಮಗಾರಿಯನ್ನು ಕಾವೇರಿ ನೀರಾವರಿ ಇಲಾಖೆಯ ಹಾರಂಗಿ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಗ್ರಾಮದ ರೈತರ ಬಹುದಿನದ ಬೇಡಿಕೆಯ ಹಿನ್ನೆಲೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಪ್ರಯತ್ನದಿಂದ ಕಾಮಗಾರಿಯು ಭರದಿಂದ ನಡೆದು ಈಗಾಗಲೇ ಶೇ. 90 ಭಾಗದಷ್ಟು ಮುಗಿದಿದೆ. ಮುಂದಿನ ದಿನಗಳಲ್ಲಿ ಸ್ವಾತಿ ಹಳ್ಳ ನೀರಿನಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಕಾಮಗಾರಿಯ ಪರಿಶೀಲನೆ ಸಂದರ್ಭ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್, ಇಂಜಿನಿಯರ್ ನಾಗರಾಜ್ ಸೇರಿದಂತೆ ಗುತ್ತಿಗೆದಾರ ಅಶೋಕ ಹಾಗೂ ಗ್ರಾಮಸ್ಥರು ಇದ್ದರು.