ಸುಂಟಿಕೊಪ್ಪ, ಜು. 29: ಜುಲೈ ತಿಂಗಳಿನಲ್ಲಿ ಧಾರಕಾರ ಮಳೆ ಸುರಿಯುತ್ತಿದೆ. ಅನ್ನದಾತ ರೈತರು ಗಾಳಿ ಮಳೆಗೆ ಮೈಯೊಡ್ಡಿ ಗದ್ದೆ ನಾಟಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಹವಾಮಾನ ವೈಫರಿತ್ಯದಿಂದ ಮಳೆ ಬಾರದೆ ಬಿಸಿಲಿನ ಹೊಡೆತದಿಂದ ರೈತರು ಆಕಾಶದತ್ತ ಮುಖ ಮಾಡಿದ್ದಾರೆ.
ಗದ್ದೆ ಕೆಲಸಕ್ಕೆ ಕಾಫಿಗೆ ಕರಿಮೆಣಸು ಏಲಕ್ಕಿ ಫಸಲಿಗೆ ಮುಂಗಾರು ಅತ್ಯಗತ್ಯ; ಜುಲೈ 20 ರಿಂದ ಆರಂಭವಾದ ಪುಷ್ಯಾ ಮಳೆ ಮರೆಯಾಗಿದ್ದು ಸೂರ್ಯ ಕಿರಣದ ಬಿಸಿಲಿನ ಜಳಕ ಬೇಸಿಗೆ ಕಾಲದ ನೆನಪನ್ನು ತಂದೊಡ್ಡುತ್ತಿದೆ. ರೈತರು ಗದ್ದೆ ಹದ ಮಾಡಿದ್ದು ಸಸಿ ಮಡಿಯನ್ನು ತೆಗೆದು ನಾಟಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಗದ್ದೆಯಲ್ಲಿ ನೀರಿಲ್ಲದೆ ವರುಣನ ಕೃಪೆಗೆ ಪ್ರಾರ್ಥಿಸುತ್ತಿದ್ದಾರೆ. ನಾಲೆ ತೋಡಿನ ಜರಿಯ ನೀರಿನ ಮೂಲ ಇರುವ ರೈತರು ಹೇಗೂ ಗದ್ದೆ ಕೆಲಸ ಅಲ್ಪ ನೀರಿನ ಸಹಾಯದಿಂದ ನಾಟಿ ಕಾಯಕ ಮಾಡುತ್ತಿದ್ದಾರೆ. ಹರದೂರು ಗರಗಂದೂರು ಗದ್ದೆಹಳ್ಳ, ಮುಕ್ಕೋಡ್ಲು, ಹಟ್ಟಿಹೊಳೆ, ಶಿರಂಗಳ್ಳಿ ಮೂವತ್ತೋಕ್ಲು ವಿಭಾಗದಲ್ಲಿ ನೀರಿನ ಸೌಕರ್ಯವಿರುವ ಗದ್ದೆ ನಾಟಿ ಕೈಗೊಂಡಿದ್ದಾರೆ
ಕೇವಲ ಮಳೆ ನೀರನ್ನೇ ಅವಲಂಬಿಸಿರುವ ಗೋಣಿಮರೂರು, ಆಲೂರು ಸಿದ್ದಾಪುರ, ವಾಲ್ನೂರು, ಆಭ್ಯಂತ್‍ಮಂಗಲ, ಎಮ್ಮೆಗುಂಡಿ, ಮಾದಾಪುರ, ಕಿರಗಂದೂರು ವಿಭಾಗದ ರೈತರು ಗದ್ದೆನಾಟಿ ಮಾಡಲು ಮಳೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.