ಸೋಮವಾರಪೇಟೆ, ಜು. 29: ಕಳೆದ ತಾ. 19ರಂದು ಬೆಳಕಿಗೆ ಬಂದಿದ್ದ ಗೋವುಗಳ ಮಾರಣ ಹೋಮ ಘಟನೆಗೆ ಸಂಬಂಧಿಸಿದಂತೆ ಐಗೂರು ವ್ಯಾಪ್ತಿಯ ಸಾರ್ವಜನಿಕರು ಹಾಗೂ ಟಾಟಾ ಕಾಫಿ ತೋಟದ ಸಿಬ್ಬಂದಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇದರ ಮುಂದುವರೆದ ಭಾಗವಾಗಿ ನಿನ್ನೆ ದಿನ ವ್ಯಕ್ತಿಯೋರ್ವರು ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಐಗೂರು ವಿಜಯನಗರದ ನಿವಾಸಿ, ಟಿಂಬರ್ ಕೆಲಸ ನಿರ್ವಹಿಸುತ್ತಿದ್ದ ರಾಮದಾಸ್ (46) ಎಂಬವರೇ ಆತ್ಮಹತ್ಯೆಗೆ ಶರಣಾದವ ರಾಗಿದ್ದು, ಇವರ ಆತ್ಮಹತ್ಯೆಗೆ ತೋಟದ ಅಧಿಕಾರಿಗಳು ಹಾಗೂ ಸ್ಥಳೀಯ ಕೆಲವರ ಕಿರುಕುಳವೇ ಕಾರಣ ಎಂದು ಪತ್ನಿ ಜಯ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಐಗೂರಿನ ವಿಜಯನಗರದಲ್ಲಿ ವಾಸವಿರುವ ರಾಮದಾಸ್ ಅವರು ನಿನ್ನೆ ರಾತ್ರಿ ತಮ್ಮ ಮನೆಯ ಶೌಚಾಲಯದಲ್ಲಿ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೇ ಘಟನೆಗೆ ಸಂಬಂಧಿಸಿದಂತೆ ಒಟ್ಟು 12 ಮಂದಿಯ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಘಟನೆಯ ವಿವರ : ಕಳೆದ ತಾ. 19ರಂದು ಐಗೂರಿನ ಡಿಬಿಡಿ ಟಾಟಾ ಕಾಫಿ ತೋಟದ ಒಳಗೆ ಸುಮಾರು 9 ಗೋವುಗಳ ಕಳೇಬರ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಗೋವುಗಳಿಗೆ ತೋಟದ ಅಧಿಕಾರಿಗಳ ಸೂಚನೆಯಂತೆ ಸಿಬ್ಬಂದಿಗಳು ಹಲಸಿನ ಹಣ್ಣಿನಲ್ಲಿ ಟಿಮೆಟ್ ಕ್ರಿಮಿನಾಶಕ ಹಾಕಿ ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದರು.

ಇದೇ ಘಟನೆಗೆ ಸಂಬಂಧಿಸಿದಂತೆ ತೋಟದ ನಾಲ್ವರು ಸಿಬ್ಬಂದಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ರ್ಯಾಕ್ಟರ್‍ನ್ನು ವಶಕ್ಕೆ ಪಡೆಯಲಾಗಿತ್ತು.

ಇದಾದ ನಂತರ ಸ್ಥಳೀಯ ಕಾರ್ಮಿಕರಿಗೆ ಟಾಟಾ ಕಾಫಿ ಸಂಸ್ಥೆಯ ಸಿಬ್ಬಂದಿಗಳು ಕೂಲಿ ಕೆಲಸ ನೀಡದೇ ಸತಾಯಿಸುತ್ತಿದ್ದರು ಎನ್ನಲಾಗಿದ್ದು, ಸಂಸ್ಥೆಯ ಸಿಬ್ಬಂದಿಗಳು ಹಾಗೂ ಸ್ಥಳೀಯರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು.

ಈ ಮಧ್ಯೆ ರಾಮದಾಸ್ ಅವರು ತೋಟದಲ್ಲಿರುವ

(ಮೊದಲ ಪುಟದಿಂದ) ತನ್ನ ಸಹೋದರಿಯ ಮನೆಗೆ ತೆರಳಿದ ಸಂದರ್ಭ, ಸಂಸ್ಥೆಯ ಸಿಬ್ಬಂದಿಯೊಂದಿಗೆ ಗೋವುಗಳಿಗೆ ವಿಷವಿಕ್ಕಿದ ಬಗ್ಗೆ ಪ್ರಶ್ನಿಸಿ, ಇನ್ನೂ ಹಲವು ಗೋವುಗಳಿಗೆ ವಿಷವುಣಿಸಿ ಸಾಯಿಸಿದ್ದು, ಅವುಗಳ ಕಳೇಬರ ಎಲ್ಲಿ? ಎಂದು ಕೇಳಿದ್ದರು ಎಂದು ಸ್ಥಳೀಯ ಕೆಲವರು ಮಾಹಿತಿ ನೀಡಿದ್ದಾರೆ.

ಈ ಘಟನೆ ನಡೆದು ವಾರ ಕಳೆದ ನಂತರ, ರಾಮದಾಸ್‍ನಿಂದಾಗಿ ನಿಮಗೆ ಕೆಲಸ ನೀಡುತ್ತಿಲ್ಲ. ಅವರು ಬಂದು ಸಂಸ್ಥೆಯ ಸಿಬ್ಬಂದಿಯಲ್ಲಿ ಕ್ಷಮೆ ಕೇಳಬೇಕು ಎಂದು ತಿಳಿಸಿದ ಮೇರೆಗೆ, ನಿನ್ನೆ ದಿನ ಸ್ಥಳೀಯ ಕೆಲವರು ರಾಮದಾಸ್‍ನನ್ನು ಗುಳಿಗಪ್ಪ ದೇವಾಲಯದ ಬಳಿಯಿರುವ ತೋಟದ ಕಚೇರಿಗೆ ಕರೆದೊಯ್ದು ಕ್ಷಮೆ ಕೇಳಿಸಿದ್ದಾರೆ.

ಇದಾಗಿ ವಾಪಸ್ ಬರುವ ಸಂದರ್ಭ ನಿನ್ನಿಂದಾಗಿ ನಮಗೆ ಕೆಲಸ ಸಿಗುತ್ತಿಲ್ಲ ಎಂದು ರಾಮದಾಸ್ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವಿಷಯವನ್ನು ಮನೆಯಲ್ಲಿ ಹೇಳಿಕೊಂಡು ನೊಂದುಕೊಂಡಿದ್ದ ರಾಮದಾಸ್, ನಂತರ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ.

ಈ ಬಗ್ಗೆ ಮೃತ ರಾಮದಾಸ್ ಅವರ ಪತ್ನಿ ಜಯ, ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಪತಿಗೆ ಟಾಟಾ ಕಾಫಿ ಕೋವರ್‍ಕೊಲ್ಲಿ ವಿಭಾಗದ ವ್ಯವಸ್ಥಾಪಕ ಅಪ್ಪಯ್ಯ, ಫೀಲ್ಡ್ ಆಫೀಸರ್ ಸತೀಶ್, ಅಸಿಸ್ಟೆಂಟ್ ಮ್ಯಾನೇಜರ್ ದರ್ಶನ್ ಅವರುಗಳು ಅವಮಾನಿಸಿ, ಹಿಂಸೆ ನೀಡಿದ್ದಾರೆ. ನಿಮ್ಮ ಊರಿನ ಜನರಿಗೆ ತೋಟದಲ್ಲಿ ಕೆಲಸ ಕೊಡುವದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಇದರೊಂದಿಗೆ ಸ್ಥಳೀಯ ನಿವಾಸಿಗಳಾದ ವೆಂಕಪ್ಪ, ಮಂಜುನಾಥ, ಸಂತೋಷ್, ಪದ್ಮ, ನೇತ್ರ, ಕವಿತ, ಸವಿತ, ಪುಷ್ಪ, ಶುಭ ಅವರುಗಳೂ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದು, ಇದರಿಂದಾಗಿಯೇ ಪತಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇವರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಒಟ್ಟು 12 ಮಂದಿಯ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಶವವಿಟ್ಟು ಪ್ರತಿಭಟನೆ : ಮೃತ ರಾಮದಾಸ್ ಅವರ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದು, ಪರಿಹಾರಕ್ಕಾಗಿ ಆಗ್ರಹಿಸಿ ಮೃತನ ಕುಟುಂಬಸ್ಥರು ಹಾಗೂ ಸ್ಥಳೀಯರು ಮೃತದೇಹವನ್ನು ಸಂಸ್ಕಾರ ಮಾಡದೇ ಐಗೂರಿನ ರಸ್ತೆ ಬದಿ ಪ್ರತಿಭಟನೆ ನಡೆಸಿದರು.

ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಸ್ಥಳದಲ್ಲಿದ್ದ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಠಾಣಾಧಿಕಾರಿ ಶಿವಶಂಕರ್ ಅವರು, ಘಟನೆಗೆ ಸಂಬಂಧಿಸಿ ದಂತೆ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ನಂತರ ಮೃತದೇಹದ ಅಂತ್ಯಕ್ರಿಯೆ ನಡೆಸಲಾಯಿತು. ಮೃತ ರಾಮದಾಸ್ ಅವರು ಪತ್ನಿ ಸೇರಿದಂತೆ ಈರ್ವರು ಮಕ್ಕಳನ್ನು ಅಗಲಿದ್ದಾರೆ.