ಸೋಮವಾರಪೇಟೆ, ಜು, 29: ತಾಲೂಕಿನ ಕೊಡ್ಲಿಪೇಟೆ ಹೋಬಳಿಗೊಳಪಡುವ ಕೆಳಕೊಡ್ಲಿ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಸ್ಮಶಾನ ಜಾಗವನ್ನು ವ್ಯಕ್ತಿಯೋರ್ವರು ಒತ್ತುವರಿ ಮಾಡಿಕೊಂಡಿದ್ದು, ಶವ ಸಂಸ್ಕಾರಕ್ಕೆ ತಡೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಜೆ.ಆರ್. ಪಾಲಾಕ್ಷ, ಮುಂದಿನ 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಳಕೊಡ್ಲಿ ಗ್ರಾಮದ ಸ.ನಂ. 28/5ರಲ್ಲಿ 1 ಏಕರೆ ಜಾಗವನ್ನು ಕಳೆದ ಅನೇಕ ದಶಕಗಳಿಂದ ಪರಿಶಿಷ್ಟ ಜಾತಿಗೆ ಸೇರಿದ ಸ್ಮಶಾನವನ್ನಾಗಿ ಬಳಕೆ ಮಾಡಲಾಗುತ್ತಿದ್ದು, ಇದೀಗ ನಿವೃತ್ತ ಸೈನಿಕರೋರ್ವರು ಈ ಜಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನಿವೃತ್ತ ಸೈನಿಕರೋರ್ವರಿಗೆ 5 ಏಕರೆ ಜಾಗ ಸರ್ಕಾರದಿಂದಲೇ ಮಂಜೂರಾಗಿದ್ದು, ಇದೀಗ ಸ್ಮಶಾನದ ಜಾಗಕ್ಕೆ ಬೇಲಿ ಹಾಕುತ್ತಿದ್ದಾರೆ. ಶವಸಂಸ್ಕಾರಕ್ಕೆ ತೆರಳಿದರೆ ತಡೆಯೊಡ್ಡುತ್ತಿದ್ದಾರೆ. ಪೊಲೀಸರಿಗೆ ಸುಳ್ಳು ದೂರು ನೀಡಿ ಮೊಕದ್ದಮೆ ಹೂಡುತ್ತಿದ್ದಾರೆ ಎಂದು ಅವರು ದೂರಿದರು.
ಸ್ಮಶಾನ ಜಾಗವನ್ನು ಪರಿಶಿಷ್ಟ ಜಾತಿಗೆ ಮೀಸಲಿರಿಸುವಂತೆ ಕಳೆದ 2016ರಲ್ಲಿಯೇ ತಹಶೀಲ್ದಾರ್, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರೂ ಈವರೆಗೆ ಯಾವದೇ ಕ್ರಮ ಕೈಗೊಂಡಿಲ್ಲ. ಸ್ಮಶಾನಕ್ಕೆ ಜಾಗವನ್ನು ಕಾಯ್ದಿರಿಸುವಂತೆ ಸರ್ಕಾರದ ಆದೇಶವಿದ್ದರೂ ಸಹ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿದ್ದ ಒಕ್ಕೂಟದ ತಾಲೂಕು ಕಾರ್ಯದರ್ಶಿ ಜೆ.ಎಲ್. ಜನಾರ್ಧನ್ ಮಾತನಾಡಿ, ಜಿಲ್ಲಾಡಳಿತದಿಂದ ಜಿಲ್ಲೆಯಾದ್ಯಂತ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸ್ಮಶಾನ ಜಾಗ ಗುರುತಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.