ಮಡಿಕೇರಿ, ಜು. 29: ಹೌದು ತಾ. 27ರಂದು ಕರ್ನಾಟಕ ಸರಕಾರದ ವರ್ಷದ ಸಾಧನಾ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ರಾಜ್ಯ ವಸತಿ ಖಾತೆ ಮಂತ್ರಿ ವಿ. ಸೋಮಣ್ಣ ಅವರು, ತಮಗೆ ಅನುಭವವಾದ ಕೊರೊನಾ ಸೋಂಕಿನ ಸಾವಿಗೆ ಸಂಬಂಧಿಸಿದಂತೆ ದುಃಖದ ಮಾಹಿತಿಯೊಂದನ್ನು ಹಂಚಿಕೊಂಡರು.

ಬೆಂಗಳೂರಿನ ಮಾಗಡಿ ತಾಲೂಕಿನಲ್ಲಿ ತಮಗೆ ತುಂಬಾ ಆಪ್ತರು ಆ ಮಾಗಡಿ ಗ್ರಾಮದ ದೇವಾಲಯದ ಪುರೋಹಿತರೂ ಆಗಿದ್ದ ವ್ಯಕ್ತಿ ಕೊರೊನಾ ಸೋಂಕಿನ ನಡುವೆ ನಿತ್ಯ ಎಲ್ಲೆಡೆ ಪೂಜೆಗಳಿಗೆ ತೆರಳುತ್ತಾ ಜನಮನ್ನಣೆಯೊಂದಿಗೆ ಪ್ರೀತಿ ಪಾತ್ರರಾಗಿದ್ದರಂತೆ. ಆ ಸ್ನೇಹಿತ ಸಚಿವರ ಮನೆಗೂ ಆಗಿಂದ್ದಾಗ್ಗೆ ಭೇಟಿ ನೀಡುತ್ತಿದ್ದರು. ಎಂದಿನಂತೆ ಈ ಪುರೋಹಿತ ಈಚೆಗೆ ತಮ್ಮ ಮನೆಗೆ ಬಂದಾಗ ಒಳಗೆ ಸೇರಿಸದ ಸಚಿವರು, ‘ಎಲ್ಲೆಡೆ ಸುತ್ತಾಡಿಕೊಂಡು ಕೊರೊನಾ ನಡುವೆ ನಮ್ಮಲ್ಲಿಗೆ ಬಂದಿದ್ದೀಯ... ಇನ್ನು ನಮ್ಮನೆಯೊಳಗೆ ಬರಬೇಡ ಎಂದು ಸಹಜಭಾವದಿಂದ ಗದರಿದ್ದರು.

ಅದಾದ ಎರಡು ದಿನಗಳಲ್ಲಿ ಈ ಪುರೋಹಿತ ಸ್ನೇಹಿತನಿಗೆ ಆರೋಗ್ಯ ತಪಾಸಣೆ ವೇಳೆ ಕೊರೊನಾ ಸೋಂಕು ಖಾತರಿಗೊಂಡು ಚಿಕಿತ್ಸೆ ಫಲಕಾರಿಯಾಗದೆ 54 ವರ್ಷದ ದುರ್ದೈವಿ ಸಾವಿಗೀಡಾದರು.

ಬಳಿಕ ಆಸ್ಪತ್ರೆಯಿಂದ ಶವವನ್ನು ಊರಿಗೆ ಕೊಂಡೊಯ್ದಾಗ ಇಡೀ ಗ್ರಾಮಸ್ಥರ ನಡುವೆ ಎಲ್ಲರಿಗೂ ಬೇಕಾಗಿದ್ದ ಪುರೋಹಿತನ ಶವವನ್ನು ಊರೊಳಗೆ ಜನ ಸೇರಿಸಲೇ ಇಲ್ಲ ‘ಇಂಥ ಪರಿಸ್ಥಿತಿ ಯಾರಿಗೂ ಬರಬಾರದು.. ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಿ... ಇದು ತನಗೆ ಎದುರಾದ ಅನುಭವ ಎಂದು ಸಚಿವ ಸೋಮಣ್ಣ ಗದ್ಗದಿತವಾಗಿ ನುಡಿದಾಗ ಇಡೀ ಸಭೆ ಮೌನಕ್ಕೆ ಜಾರಿತ್ತು.