ಮಡಿಕೇರಿ, ಜು. 28: ಕೋವಿಡ್-19ರ ನಿಯಂತ್ರಣ ಸಂಬಂಧ ಜಿಲ್ಲೆಯ ಗಡಿ ಭಾಗಗಳಲ್ಲಿ ಎಲ್ಲಾ ರೀತಿಯ ಮದ್ಯ ಸನ್ನದುಗಳಿಗೆ ವಿಧಿಸಲಾಗಿದ್ದ ನಿರ್ಬಂಧದಲ್ಲಿ ಬದಲಾವಣೆ ಮಾಡಲಾಗಿದ್ದು, ಇದೀಗ ಹೊಸ ಮಾರ್ಗ ಸೂಚಿಯಂತೆ ಅಂತಹ ಸನ್ನುದುಗಳಿಗೆ ನಿಯಮಾನುಸಾರ ಕಾರ್ಯಾಚರಿಸಲು ಅನುಮತಿಸಲಾಗಿದೆ. ಈ ಹಿಂದೆ ಗಡಿ ಭಾಗದಲ್ಲಿನ ಎಲ್ಲಾ ಸನ್ನದುಗಳನ್ನು ಮುಚ್ಚಿಸಲಾಗಿತ್ತು. ಈ ಅವಧಿಯಲ್ಲಿ ಸಿಎಲ್ 2 ಮತ್ತು ಸಿಎಲ್ 11 (ಸಿ) ಹೊರತುಪಡಿಸಿ ಎಲ್ಲಾ ಸನ್ನದುಗಳನ್ನು ಮುಂದಿನ ಆದೇಶದ ತನಕ ಬಂದ್ ಮಾಡಲಾಗಿತ್ತು. ಇದೀಗ ತಾ. 28 ರಿಂದ ಜಾರಿಗೆ ಬರುವಂತೆ ರಾಜ್ಯ ಅಬಕಾರಿ ಇಲಾಖೆಯ ಮಾರ್ಗಸೂಚಿಯಂತೆ ನಿಯಮಾನುಸಾರ ಕಾರ್ಯಾಚರಿಸಲು ಅನುಮತಿಸುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಹೊಸದಾಗಿ ಆದೇಶಿಸಿದ್ದಾರೆ.

ಇದರಂತೆ ಹಿಂದಿನ ಆದೇಶ ಹಿಂಪಡೆಯಲಾಗಿದ್ದು, ಈಗಿನ ನಿಯಮ ಇಂತಿದೆ

ಕಂಟೈನ್‍ಮೆಂಟ್ ವಲಯದಲ್ಲಿ ಯಾವುದೇ ಚಟುವಟಿಕೆ ಇರುವುದಿಲ್ಲ. ಕಂಟೈನ್‍ಮೆಂಟ್ ಹೊರ ಭಾಗದ ವಲಯದಲ್ಲಿ ಸರಕಾರ, ರಾಜ್ಯ ಅಬಕಾರಿ ಇಲಾಖೆಯ ಮಾರ್ಗ ಸೂಚಿ, ಕಾರ್ಯವಿಧಾನ, ಆದೇಶದಂತೆ ನಿಯಮಾನುಸಾರ ಕಾರ್ಯಾಚರಿಸುವುದು ಹಾಗೂ ತೆರೆಯಲು ಅನುಮತಿಸಲಾಗಿರುವ ಸನ್ನದುಗಳಲ್ಲಿ ನಿಯಮಾನುಸಾರ ಕೇವಲ ಟೇಕ್ ಅವೇ ಮಾತ್ರ ಮಾರಾಟ ಮಾಡುವುದು ಎಂದು ಸೂಚಿಸಲಾಗಿದೆ.