ಬೆಂಗಳೂರು, ಜು. 28: ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ (ಕೆಟಿಬಿಎಸ್) ಮೈಸೂರು ಇತಿಹಾಸದ ಪ್ರಮುಖ ಭಾಗವಾದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆದು ಹಾಕಿದೆ, ಕೋವಿಡ್ ಕಾರಣದಿಂದಾಗಿ ಸಮಯದ ಕೊರತೆ ನೆಪವೊಡ್ಡಿ ಏಳನೇ ತರಗತಿ ಸಮಾಜ ವಿಜ್ಞಾನ ಪಠ್ಯದ ಐತಿಹಾಸಿಕ ಚರಿತ್ರೆ ಭಾಗದಿಂದ ಟಿಪ್ಪು ಸುಲ್ತಾನ್ ಪಾಠವನ್ನು ಕಿತ್ತು ಹಾಕಲಾಗಿದೆ. ಏತನ್ಮಧ್ಯೆ ಮೈಸೂರು ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಈ ವಿಷಯಗಳ ಬಗ್ಗೆ ಪವರ್ಪಾಯಿಂಟ್ ಪ್ರಸ್ತುತಿಗಳನ್ನು ತಯಾರಿಸಿ ತೋರಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೆಟಿಬಿಎಸ್ ಹೇಳಿದೆ. 2020-21ರ ಶೈಕ್ಷಣಿಕ ವರ್ಷದ ಕೆಲಸದ ದಿನಗಳನ್ನು ಅಂದಾಜು ಮಾಡಿ, ಭಾಗಗಳನ್ನು ಪರಿಷ್ಕರಣೆ ಅಥವಾ ಮೊಟಕು ಮಾಡಲಾಗಿದೆ. ಸೆಪ್ಟೆಂಬರ್ 1 ರಿಂದ 120 ದಿನಗಳಲ್ಲಿ ಅಗತ್ಯವಾದ ಪಠ್ಯದ ಭಾಗಗಳನ್ನು ಕಲಿಸಲು ಕೆಟಿಬಿಎಸ್ 6 ರಿಂದ 10ನೇ ತರಗತಿಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ಒಂದು ಕೈಪಿಡಿಯನ್ನು ಬಿಡುಗಡೆ ಮಾಡಿದೆ.ಸೋಮವಾರಪೇಟೆ : ಪಠ್ಯ ಪುಸ್ತಕದಲ್ಲಿರುವ ಟಿಪ್ಪು ಸುಲ್ತಾನ್ ಚರಿತ್ರೆಯನ್ನು ಕೈಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆದಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಪ್ರಯತ್ನದ ಫಲವಾಗಿ, ಸರ್ಕಾರ ಈ ಬಾರಿಯ 7 ನೇ ತರಗತಿಯ ಪಠ್ಯದಲ್ಲಿ ಟಿಪ್ಪು ವಿಚಾರವನ್ನು ತೆಗೆದುಹಾಕಿರುವ ಮಾಹಿತಿ ಲಭ್ಯವಾಗಿದ್ದು, ಇದಕ್ಕೆ ಶಾಸಕ ರಂಜನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಶಾಸಕರು, 7ನೇ ತರಗತಿ ಪಠ್ಯದಿಂದ ಟಿಪ್ಪು ಸುಲ್ತಾನ್ ಚರಿತ್ರೆಯನ್ನು ಕೈಬಿಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 7ನೇ ತರಗತಿಯ ಪಠ್ಯದಲ್ಲಿ ಟಿಪ್ಪುವಿನ ವಿಚಾರ ಇಲ್ಲದಿರುವನ್ನು ಗಮನಿಸಿದ್ದೇವೆ. ಆದರೆ ಪಠ್ಯದಿಂದ ಟಿಪ್ಪು ಚರಿತ್ರೆಯನ್ನು ಕೈಬಿಟ್ಟಿರುವ ಬಗ್ಗೆ ಅಧಿಕೃತ ಪತ್ರ ಬಂದಿಲ್ಲ ಎಂದರು.
ಟಿಪ್ಪು ಓರ್ವ ಮತಾಂಧ ಹಾಗೂ ಕನ್ನಡ ಭಾಷಾ ದ್ವೇಷಿಯಾಗಿದ್ದ ಎಂಬದನ್ನು ಪುಷ್ಠೀಕರಿಸುವ ಸಂಬಂಧ ಹಲವಷ್ಟು ದಾಖಲೆಗಳನ್ನು ಸರ್ಕಾರ ಹಾಗೂ ತಜ್ಞರ ಸಮಿತಿಗೆ ಸಲ್ಲಿಸಲಾಗಿತ್ತು. ಲಂಡನ್‍ನಿಂದಲೂ ದಾಖಲೆಯ ಪುಸ್ತಕವನ್ನು ತರಿಸಿ, ಸಮಿತಿಗೆ ನೀಡಲಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವರ ಗಮನ ಸೆಳೆಯಲಾಗಿತ್ತು. ಇದೀಗ ಪಠ್ಯದಿಂದ ತೆಗೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.
ಪಠ್ಯದಲ್ಲಿ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಲಾಗಿದೆ. ಆದರೆ ನೈಜ ಸಂಗತಿಗಳನ್ನು ತಿಳಿಸಿಲ್ಲ. ಈ ಹಿನ್ನೆಲೆ ಟಿಪ್ಪುವಿನ ವೈಭವೀಕರಣ ಬಿಟ್ಟು, ಆತನ ನಿಜ ಚರಿತ್ರೆಯನ್ನು ಪಠ್ಯದಲ್ಲಿ ಸೇರಿಸಬೇಕೆಂಬ ಒತ್ತಾಯವನ್ನೂ ಸರ್ಕಾರಕ್ಕೆ ಮಾಡುತ್ತೇನೆ.
ಉಳಿದ ತರಗತಿಗಳ ಪಠ್ಯದಲ್ಲಿ ಟಿಪ್ಪುವಿನ ವೈಭವೀಕರಣದ ಚರಿತ್ರೆ ಇದ್ದರೆ, ಅದನ್ನೂ ತೆಗೆಸುವ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಶಾಸಕ ರಂಜನ್ ಅಭಿಪ್ರಾಯಿಸಿದರು.