ಮಡಿಕೇರಿ, ಜು. 28: ಪ್ರಸಕ್ತ ಸನ್ನಿವೇಶದಲ್ಲಿ ಕೃಷಿ ಕೆಲಸಗಳಿಗೆ ಚಾಲನೆ ದೊರೆತಿದೆಯಾದರೂ ಬಾಳೆಲೆ ವಿಭಾಗದಲ್ಲಿ ಮಳೆಯ ಕೊರತೆಯಿರುವುದು ರೈತರಿಗೆ ಸಂಕಷ್ಟವಾಗುತ್ತಿದೆ. ಮಳೆಯ ಕೊರತೆಯ ನಡುವೆಯೂ ಅಲ್ಲಲ್ಲಿ ನಾಟಿ ಕೆಲಸ ನಡೆಯುತ್ತಿದೆ. ಆದರೆ ಮಳೆ ಆಶ್ರಿತ ಪ್ರದೇಶಗಳಲ್ಲಿ ನಾಟಿ ಕೆಲಸಕ್ಕೆ ಹಾಗೂ ನಾಟಿ ಬಳಿಕದ ನೀರಿನ ಅಗತ್ಯತೆಗೆ ಸಮಸ್ಯೆಯಾಗಲಿದೆ. ಕೆಲವರು ಕೊಳವೆ ಬಾವಿ ಮತ್ತು ಕೆರೆಯಿಂದ ನೀರು ಬಳಸಿಕೊಂಡು ನಾಟಿ ಮಾಡುತ್ತಿರುವುದು ಕಂಡುಬರುತ್ತಿದೆ.ಬಹುತೇಕ ಮಂದಿ ಸೂಕ್ತ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಹಲವು ವರ್ಷಗಳಿಂದ ಪಾಳುಬಿಟ್ಟಿದ್ದ ಗದ್ದೆಗಳನ್ನು ಈ ಬಾರಿ ಹಲವರು ರೂಪಿತಗೊಳಿಸಲು ಮುಂದಾಗಿರುವ ಬೆಳವಣಿಗೆಯೂ ಕಂಡು ಬಂದಿದೆಯಾದರೂ ಮುಂಗಾರು ಕ್ಷೀಣವಾಗಿರುವುದು ಇದಕ್ಕೆ ಅಡ್ಡಿಯಾಗುತ್ತಿದೆ. ಕೊರೊನಾ ಕಾರಣದಿಂದಾಗಿ ಹಲವೆಡೆ ಉದ್ಯೋಗದಲ್ಲಿದ್ದವರು ಈ ಬಾರಿ ಗ್ರಾಮಗಳಿಗೆ ಹಿಂತಿರುಗಿದ್ದು, ಕುಟುಂಬ ಸಹಿತವಾಗಿ ಕೃಷಿ, ತೋಟಗಳ ಕೆಲಸದತ್ತ ಆಸಕ್ತಿ ತೋರುತ್ತಿ ದ್ದಾರೆ. ಇವರ ಈ ಉತ್ಸುಕತೆಗೆ ಮುಂಗಾರು ಕ್ಷೀಣವಾಗಿರುವುದು ನಿರಾಸೆ ಮೂಡಿಸುತ್ತಿದೆ. ಜತೆಯಲ್ಲಿ ಶಾಲಾ-ಕಾಲೇಜುಗಳಿಗೂ ಸುದೀರ್ಘ ರಜೆಯಿದ್ದು, ಮಕ್ಕಳು ಕೂಡ ಕೃಷಿ ಕೆಲಸಗಳತ್ತ ಪೋಷಕರೊಂದಿಗೆ ಮುಂದಾಗುತ್ತಿದ್ದಾರೆ. ಹೊರ ಜಿಲ್ಲೆಗಳಿಂದ ಆಗಮಿಸುತ್ತಿದ್ದ ಕಾರ್ಮಿಕರು ಕೊರೊನಾ ಕಾರಣದಿಂದಾಗಿ ಸಿಗುತ್ತಿಲ್ಲ. ಇದೂ ಕೂಡ ಮತ್ತೊಂದು ಸಮಸ್ಯೆಯಾಗಿದೆ. ಪ್ರಸ್ತುತ ಆಟಿ (ಕಕ್ಕಡ) ತಿಂಗಳು ನಡುಭಾಗದಲ್ಲಿದ್ದರೂ ಮಳೆ ಇಳಿಮುಖವಾಗಿರುವುದರಿಂದ ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಮುಂದೇನು ಎಂಬ ಪ್ರಶ್ನೆ ಕಾಡಲಿದೆ.