ಕಣಿವೆ, ಜು. 28: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿನ ಅರೆ ನೀರಾವರಿ ಪ್ರದೇಶದಲ್ಲಿ ರೈತರು ಬೆಳೆದ ಜೋಳದ ಫಸಲು ನೀರಿಲ್ಲದೇ ಒಣಗಲಾರಂಭಿಸಿದ್ದು ರೈತರು, ಕೈಗೆ ಬಂದ ಫಸಲು ಬಾಯಿಗೆ ಬಾರದ ಮುನ್ನ ಎಲ್ಲಿ ಒಣಗಿ ಹೋಗಿ ಬಿಡುತ್ತದೋ ಎಂದು ಆಕಾಶದತ್ತ ನೋಡುತ್ತಿದ್ದಾರೆ. ಆದರೆ ಆಗಸದಲ್ಲಿ ಮಳೆ ಸುರಿಸುವ ಮೋಡಗಳೇ ಗೋಚರಿಸುತ್ತಿಲ್ಲ. ಬೇಸಗೆಯ ಬಿಸಿಲಿನಂತಹ ಉಷ್ಣಾಂಶದ ವಾತಾವರಣ ಕಂಡುಬರುತ್ತಿದೆ. ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ 2300 ಹೆಕ್ಟೇರ್ ಭೂಪ್ರದೇಶದಲ್ಲಿ ಜೋಳದ ಬೆಳೆ ಬೆಳೆದಿದ್ದಾರೆ. ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಜೋಳದ ಫಸಲಿಗೆ ಹಾರಂಗಿ ಕಾಲುವೆಯಲ್ಲಿ ಹರಿಬಿಟ್ಟಿರುವ ನೀರನ್ನು ಹಾಯಿಸುತ್ತಾರೆ. ಆದರೆ ಅತ್ಯಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆದಿರುವ ಅರೆ ನೀರಾವರಿ ಭೂಮಿಯಲ್ಲಿ ಬೆಳೆದ ಫಸಲು ನೀರಿಲ್ಲದೇ ಒಣಗುತ್ತಿದೆ. ಬಹುತೇಕ ರೈತರು ಬೆಳೆದ ಜೋಳದ ಬೆಳೆ ತೆನೆಕಟ್ಟುವ ಹಂತದಲ್ಲಿದೆ.

ಇನ್ನೆರಡು ದಿನಗಳಲ್ಲಿ ಮಳೆ ಬಂದು ಭೂಮಿ ಹದವಾದರೆ ಈ ಜೋಳದ ತೆನೆ ರಸಭರಿತವಾಗಿ ತೆನೆಗಟ್ಟುತ್ತದೆ. ಒಂದು ವೇಳೆ ಮಳೆಯೇ ಬಾರದಿದ್ದರೆ ತೆನೆಯಲ್ಲಿ ಕಾಳುಗಟ್ಟ ಬೇಕಿದ್ದ ಫಸಲು ಒಣಗುತ್ತದೆ. ಇದರಿಂದಾಗಿ ರೈತರಿಗೆ ಅಪಾರ ನಷ್ಟವಾಗಲಿದೆ. ಇನ್ನೊಂದೆಡೆ ಈ ಅರೆ ನೀರಾವರಿ ಪ್ರದೇಶದಲ್ಲಿ ರೈತರು ಅಳವಡಿಸಿಕೊಂಡಿರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಸಂಪೂರ್ಣ ಬತ್ತಿಹೋಗಿದ್ದು, ಹಲವು ಕೊಳವೆ ಬಾವಿಗಳಲ್ಲಿ ನೀರೇ ಇಲ್ಲವಾಗಿದೆ. ಮಳೆಗಾಲದ ಈ ದಿನಗಳಲ್ಲಿಯೇ ಇಂತಹ ಸ್ಥಿತಿ ಉಂಟಾದರೆ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಮಳೆಯೇ ಬಾರದಿದ್ದರೆ ಉಂಟಾಗುವ ಹಾನಿಯ ಸಾಧ್ಯತೆಯನ್ನು ಊಹಿಸುವುದು ಅಸಾಧ್ಯವಾದೀತು. ಒಂದು ಎಕರೆ ಭೂಮಿಯಲ್ಲಿ ಜೋಳ ಬೆಳೆಯಲು ಕನಿಷ್ಟ 15 ರಿಂದ 17 ಸಾವಿರ ಖರ್ಚಾಗುತ್ತದೆ.

ಒಂದು ವೇಳೆ ಸಕಾಲದಲ್ಲಿ ಮಳೆ ಬಂದು ಬೆಳೆ ಕೈಗೆ ಬಂದರೆ ಖರ್ಚಾದ ಹಣವಾದರೂ ದೊರಕುತ್ತದೆ. ಅರೆ ನೀರಾವರಿ ಭೂಪ್ರದೇಶದಲ್ಲಿನ ಜನರ ಪ್ರಮುಖ ಆದಾಯದ ಬೆಳೆಯೇ ಈ ಜೋಳದ ಬೆಳೆಯಾಗಿದೆ. ಈಗ ಮಳೆ ಕೈಕೊಟ್ಟು ಜೋಳವೂ ಒಣಗಿದರೆ ಮೊದಲೇ ಕೊರೊನಾದಿಂದ ಸಂಕಷ್ಟ ದಲ್ಲಿರುವ ಈ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಕಳೆದ 17 ರಂದು ಆರಂಭವಾದ ಪುಷ್ಯ ಮಳೆ ಆಗಸ್ಟ್ 1 ರವರೆಗೂ ಇದೆ. ಇನ್ನು ಆಶ್ಲೇಷಾ ಎಂಬ ಮತ್ತೊಂದು ಹೊಸದಾದ ಮಳೆ ಆಗಸ್ಟ್ 2 ರಿಂದ ಆರಂಭ ವಾಗಲಿದೆ. ಆ ಮಳೆ ಸುರಿಸುವಷ್ಟರಲ್ಲಿ ಈ ಜೋಳದ ಬೆಳೆಯ ಕಥೆ ಸಂಪೂರ್ಣ ಮುಗಿದ ಅಧ್ಯಾಯ ವಾಗಿರುತ್ತದೆ. ಅತ್ತ ಕಾವೇರಿ ನದಿಯಲ್ಲಿಯೂ ಕೂಡ ನೀರಿನ ಹರಿವು ಸಂಪೂರ್ಣ ಕುಸಿತ ಗೊಂಡಿದ್ದು ಮಳೆಗಾಲದ ಈ ದಿನಗಳನ್ನೇ ಅಣಕಿಸುವಂತಿದೆ.

-ಮೂರ್ತಿ