ಯುದ್ಧ ವಿಮಾನ ವಿಶೇಷÀ: ಫ್ರಾನ್ಸ್ನಿಂದ ಬಂದ ಜೆಟ್ ರಫೇಲ್
ಬೆಂಗಳೂರು, ಜು. 28: ಕೊರೊನಾ ವೈರಸ್ ಭೀತಿಯಿಂದಾಗಿ ಮೊದಲ ಹಂತದ ರಫೇಲ್ ಯುದ್ಧ ವಿಮಾನಗಳ ವಿತರಣೆಯನ್ನು ಕೆಲ ದಿನಗಳ ಕಾಲ ಮುಂದೂಡ ಲಾಗಿತ್ತು. ಭಾರತೀಯ ವಾಯುಸೇನೆಗೆ ಫ್ರಾನ್ಸ್ನಿಂದ ರಫೇಲ್ ವಿಮಾನಗಳು ತಾ. 29 ರಂದು (ಇಂದು) ಆಗಮಿಸಲಿವೆ ಎಂದು ಭಾರತೀಯ ವಾಯು ಸೇನೆ (ಐಎಎಫ್) ಅಧಿಕೃತ ಹೇಳಿಕೆ ನೀಡಿದೆ. ಅಂಬಾಲಾದ ವಾಯು ನೆಲೆಯಲ್ಲಿ ತಾ. 29 ರಂದು ಪ್ರತಿಕೂಲ ಹವಾಮಾನ ಇರದಿದ್ದರೆ 5 ರಫೇಲ್ ಯುದ್ಧ ವಿಮಾನ ಹಾರಾಟ ಕಾಣಬಹುದು, ಮುಂದಿನ ಹಂತದ ಪೂರೈಕೆ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದೆ ಎಂದು ಐಎಎಫ್ ಹೇಳಿದೆ. ಫ್ರಾನ್ಸಿನ ಡಸಾಲ್ಟ್ ಏವಿಯೇಷನ್ ಸಂಸ್ಥೆ ನಿರ್ಮಿತ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಈ ಮೂಲಕ ರಷ್ಯಾ ನಿರ್ಮಿತ ಯುದ್ಧ ವಿಮಾನಗಳ ಬಳಕೆ ಕಡಿಮೆಯಾಗಲಿವೆ. ಸರ್ಕಾರ ಅತ್ಯಾಧುನಿಕ ವ್ಯವಸ್ಥೆಯುಳ್ಳ ಯುದ್ಧ ವಿಮಾನಗಳು ಮತ್ತಿತರ ಶಸ್ತ್ರಾಸ್ತ್ರಗಳ ಖರೀದಿ ಜಾರಿಯಲ್ಲಿದೆ ಎಂದು ಭಾರತೀಯ ವಾಯುಸೇನೆ ಹೇಳಿದೆ. ಮೋದಿ ನೇತೃತ್ವದ 1.0 ಸರಕಾರವು 126 ಯುದ್ಧ ವಿಮಾನ ಖರೀದಿಗೆ ಮುಂದಾಗಿತ್ತು. ಆದರೆ ದುಬಾರಿ ಆಗುತ್ತದೆ ಎಂಬ ಕಾರಣಕ್ಕೆ ಅದಕ್ಕೂ ಮುಂಚೆ ಯುಪಿಎ ಮಾಡಿಕೊಂಡಿದ್ದ 126 ರಫೇಲ್ ಖರೀದಿ ಒಪ್ಪಂದ ತೀರ್ಮಾನದಿಂದ ಹಿಂದೆ ಸರಿಯಿತು. ಹೀಗೆ ಖರೀದಿ ಮಾಡಬೇಕು ಅಂತಿದ್ದ ಜೆಟ್ನ ಸಂಖ್ಯೆಯು ಕಡಿಮೆಯಾಗಿ 36ಕ್ಕಿಳಿದಿದೆ. 36 ರಫೇಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದಕ್ಕೆ ಸೆಪ್ಟೆಂಬರ್ 23, 2016 ರಂದು ಶುಕ್ರವಾರ ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದ್ದರು. ಸುಮಾರು 7.8 ಬಿಲಿಯನ್ ಯುರೋ (ಸುಮಾರು 780 ಕೋಟಿ) ವ್ಯವಹಾರಿಕ ಮೊತ್ತ ಇದಾಗಿದೆ.
ಶಾಲೆ ತೆರೆಯುವ ಅವಸರ ಸರ್ಕಾರಕ್ಕಿಲ್ಲ
ಬೆಂಗಳೂರು, ಜು. 28: ಕೊರೊನಾ ಸೋಂಕು ತೀವ್ರವಾಗುತ್ತಿರುವ ಈ ಕಾಲಘಟ್ಟದಲ್ಲಿ ಶಾಲೆಗಳನ್ನು ತೆರೆಯುವ ಅವಸರ ಸರ್ಕಾರಕ್ಕಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಕೊರೊನಾ ಸಾಮಾಜಿಕ ಸಂದರ್ಭದಲ್ಲಿ ಆನ್ಲೈನ್ ಶಿಕ್ಷಣ ಮತ್ತು ಶಾಲಾ ಚಟುವಟಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಶೈಕ್ಷಣಿಕ ವಲಯದ ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ವೆಬಿನಾರ್ನಲ್ಲಿ ಮಾತನಾಡಿದ ಅವರು, ಈ ಪರಿಸ್ಥಿತಿಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಅವಸರದಲ್ಲಿ ಶಾಲೆ ತೆರೆಯುವುದಿಲ್ಲ. ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಎಲ್ಲ ಆಯಾಮಗಳಿಂದಲೂ ಪ್ರಯತ್ನ ಮಾಡಲಾಗುತ್ತದೆ ಎಂದರು. ಇಂತಹ ಪರಿಸ್ಥಿತಿ ಇದೇ ಮೊದಲ ಬಾರಿ ಬಂದೆರಗಿರುವುದರಿಂದ ಈ ಸಂದರ್ಭ ಮಕ್ಕಳನ್ನು ತಲುಪಲು ಸಾಧ್ಯವಾಗಬಹುದಾದ ಎಲ್ಲ ಪ್ರಯತ್ನಗಳ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ವಠಾರ ಶಾಲೆ, ಪಡಸಾಲೆ ಶಾಲೆ, ಮನೆಶಾಲೆ, ತಂತ್ರಜ್ಞಾನಾಧಾರಿತ ಶಿಕ್ಷಣ, ಆಕಾಶವಾಣಿ, ಚಂದನ ದೂರದರ್ಶನ ವಾಹಿನಿ, ಖಾಸಗಿ ವಾಹಿನಿ, ಶಿಕ್ಷಣ ಇಲಾಖೆಯ ಚಾನೆಲ್ ಸೇರಿದಂತೆ ಲಭ್ಯವಾಗಬಹುದಾದ ಎಲ್ಲ ಅವಕಾಶವನ್ನೂ ಮುಕ್ತವಾಗಿರಿಸಿಕೊಂಡು ಶಿಕ್ಷಣ ಇಲಾಖೆ ಎಲ್ಲ ಉಪಕ್ರಮಗಳತ್ತಲೂ ಮಕ್ಕಳ ಹಿತದೃಷ್ಟಿಯಿಂದ ಯೋಚಿಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ತೀವ್ರ ಆಕ್ಷೇಪ
ಬೆಂಗಳೂರು, ಜು. 28: ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆದಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೊರೊನಾ ಹಿನ್ನೆಲೆ ಶಾಲಾ ದಿನಗಳು ಕಡಿತಗೊಂಡಿರುವುದರಿಂದ ಶಿಕ್ಷಣ ಇಲಾಖೆ ಒಂದಿಷ್ಟು ಪಠ್ಯಗಳನ್ನು ಕೈಬಿಡಲು ನಿರ್ಧರಿಸಿದೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡಿರುವ ಟಿಪ್ಪು ಸುಲ್ತಾನ್ನನ್ನು ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದ್ದ ಬಿಜೆಪಿ ಸರ್ಕಾರ, ತನ್ನ ಕಾರ್ಯಸೂಚಿ ಸಾಧಿಸಲು ಟಿಪ್ಪು ಪಠ್ಯವನ್ನು ಕೈಬಿಟ್ಟಿದ್ದು, ಪಠ್ಯ ಪುಸ್ತಕವನ್ನೂ ಕೇಸರೀಕರಣ ಮಾಡಲು ಬಿಜೆಪಿ ಹೊರಟಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ. ಕರ್ನಾಟಕ ರಾಜ್ಯ ಮಾತ್ರವಲ್ಲ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿಯೂ ಬಿಜೆಪಿ ಈ ರೀತಿ ಮಾಡಿದೆ. ಪಠ್ಯ ಪುಸ್ತಕ ಕೇಸರೀಕರಣ ಮಾಡುವ ಕೆಲಸ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ, ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಭೂ ಕಾಯ್ದೆ : ದೇವೇಗೌಡ ಅಸಮಾಧಾನ
ಬೆಂಗಳೂರು, ಜು. 28: ಭೂ ಸುಧಾರಣಾ ಕಾಯಿದೆ ರದ್ದು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮತ್ತು ಕೈಗಾರಿಕಾ ನಿಯಮ ತಿದ್ದುಪಡಿ ಮತ್ತಿತರ ತಿದ್ದುಪಡಿಗಳಿಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಜೆಡಿಎಸ್ ಸದಸ್ಯ ಹೆಚ್.ಡಿ. ದೇವೇಗೌಡ ಸರ್ಕಾರ ಸುಗ್ರೀವಾಜ್ಞೆಗಳನ್ನು ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ಜಾರಿಗೆ ತಂದು ರೈತರನ್ನು ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಮೂರು ಬಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961, ಸೆಕ್ಷನ್ 79-ಎ, 79-ಬಿ, 79-ಸಿ ರದ್ದು ಮಾಡಿರುವುದು ರೈತರೋಧಿ ಕ್ರಮವಾಗಿದೆ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯೂ ರಾಜ್ಯಕ್ಕೆ ಮಾರಕವಾಗಿದೆ ಮತ್ತು ಕೈಗಾರಿಕೆ ವಿಚಾರ ಹಾಗೂ ಮತ್ತಿತರ ನಿಯಮಗಳ ತಿದ್ದುಪಡಿ ಮಾಡಿ ಸರ್ಕಾರ ರೈತ ವಿರೋಧಿ ತೀರ್ಮಾನಗಳನ್ನೂ ತೆಗೆದುಕೊಂಡಿದೆ. ಮಹಾಮಾರಿ ಕೊರೊನಾ ಕಾರಣ ಇಷ್ಟು ದಿನ ತಾವು ಈ ಬಗ್ಗೆ ಧ್ವನಿಯೆತ್ತಿರಲಿಲ್ಲ. ಸರ್ಕಾರದ ನಿಯಮ ಉಲ್ಲಂಘಿಸಬಾರದೆಂದು ಹಿಂದೆ ಸರಿದಿದ್ದೆ, ಹೀಗೆ ಮುಂದುವರಿದರೆ ನಮ್ಮ ಜನತೆಗೆ ತೊಂದರೆಯಾಗುತ್ತದೆ ಎಂದು ಈ ದಿನ ಮಾಧ್ಯಮಗಳ ಮುಖಾಂತರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿರುವುದಾಗಿ ದೇವೇಗೌಡ ಸ್ಪಷ್ಟಪಡಿಸಿದರು.
ಭರದಿಂದ ಸಾಗಿದೆ ಪ್ರತಿಮೆಗಳ ನಿರ್ಮಾಣ
ಮಂಡ್ಯ, ಜು. 28: ವಿವಾದದ ನಡುವೆಯೇ ಕನ್ನಂಬಾಡಿ ಅಣೆಕಟ್ಟೆಯ ಬಳಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಇಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಅದರಲ್ಲೂ ಪ್ರಗತಿಪರರು ಮತ್ತು ಹೋರಾಟ ಗಾರರ ತೀವ್ರ ಹೋರಾಟದ ನಡುವೆಯೂ ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಮೆಯ ನಿರ್ಮಾಣ ಕಾರ್ಯವೂ ಸಹ ಭರದಿಂದ ಸಾಗಿರುವುದು ಅಸಮಾಧಾನಕ್ಕೆ ತುಪ್ಪ ಸುರಿದಂತಾಗಿದೆ. ರಾಜ್ಯ ಸರ್ಕಾರ ಕೆಆರ್ಎಸ್ ಅಣೆಕಟ್ಟೆಯ ಮುಖ್ಯ ದ್ವಾರದಲ್ಲಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡಲು ಈಗಾಗಲೇ ಮೈಸೂರು ಮೂಲದ ಹೆಚ್ಎಸ್ಆರ್ ಕಂಪೆನಿಗೆ 9 ಕೋಟಿ ರೂಪಾಯಿಗೆ ಟೆಂಡರ್ ಕೂಡ ನೀಡಿದೆ. ಟೆಂಡರ್ ಪಡೆದಿರುವ ಕಂಪನಿ ಎರಡೂ ಪ್ರತಿಮೆಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಂಡಿದೆ.
ಟೈಗರ್ ರಿಸರ್ವ್ನಲ್ಲಿ 231 ಹುಲಿಗಳು
ನವದೆಹಲಿ, ಜು. 28: ಹುಲಿ ಗಣತಿ ನಡೆಸಿದ ಒಂದು ವರ್ಷದ ನಂತರ ಮಂಗಳವಾರ ವಿವರವಾದ ವರದಿ ಬಿಡುಗಡೆಯಾಗಿದ್ದು, ಉತ್ತರಾಖಂಡದ ಕಾರ್ಬೆಟ್ ಟೈಗರ್ ರಿಸರ್ವ್ನಲ್ಲಿ ದೇಶದಲ್ಲಿ ಅತಿ ಹೆಚ್ಚು ಅಂದರೆ 231 ಹುಲಿಗಳಿವೆÉ. ಮಿಜೋರಾಂ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ನ ಮೂರು ಹುಲಿ ರಕ್ಷಿತಾರಣ್ಯಗಳಲ್ಲಿ ಯಾವುದೇ ಹುಲಿ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ. ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ವಿಶ್ವ ಹುಲಿ ದಿನದ ಅಂಗವಾಗಿ ಇಂದು 2019ನೇ ಸಾಲಿನ ಸುಮಾರು 600 ಪುಟಗಳ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರು. ದೇಶಾದಲ್ಲಿ ಒಟ್ಟು 50 ಹುಲಿ ರಕ್ಷಿತಾರಣ್ಯಗಳಿದ್ದು, ಈ ಪೈಕಿ ಮಿಜೋರಾಂನ ದಂಪಾ ಹುಲಿ ರಕ್ಷಿತಾರಣ್ಯ, ಪಶ್ಚಿಮ ಬಂಗಾಳದ ಬುಕ್ಸಾ ಮತ್ತು ಜಾರ್ಖಂಡ್ನ ಪಲಮೌ ಹುಲಿ ರಕ್ಷಿತಾರಣ್ಯಗಳಲ್ಲಿ ಯಾವುದೇ ಹುಲಿಗಳು ಇಲ್ಲ. ಪ್ರಸ್ತುತ, ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ 1,923 ಹುಲಿಗಳಿವೆ ಎಂದು ವರದಿ ಹೇಳಿದೆ.