ಮಡಿಕೇರಿ, ಜು. 28: ಕೊರೊನಾ ಹಿನ್ನೆಲೆ ಗ್ರಾಮಮಟ್ಟದಲ್ಲಿ ರಚಿಸಲಾಗಿರುವ ಟಾಸ್ಕ್‍ಫೋರ್ಸ್ ಸಮಿತಿ ಮತ್ತಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕೆಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸಲಹೆಯಿತ್ತರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಮಡಿಕೇರಿ ತಾ.ಪಂ. ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಆಡಳಿತಾಧಿ ಕಾರಿಗಳು, ಪಿಡಿಒಗಳು ಹಾಗೂ ಗ್ರಾಮಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ಸದಸ್ಯರ ಸಭೆಯನ್ನು ಜೂಮ್ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಕೆ.ಜಿ.ಬಿ. ಮಾತನಾಡಿದರು.
ಮಾಸ್ಕ್ ಧರಿಸದೆ ಮನೆಯಿಂದ ಹೊರಬರುವ ಯಾವುದೇ ನಾಗರಿಕರಾಗಲಿ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಬೇಕು. ಹೊರ ಜಿಲ್ಲೆಗಳಿಂದ ಬರುವಂತಹ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಿ 14 ದಿನಗಳವರೆಗೆ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ನಲ್ಲಿರುವಂತೆ ಅವರಿಗೆ ಮನವೊಲಿಸುವಂತೆ ಸೂಚಿಸಿದರು. ಜ್ವರ, ಶೀತ ಇತ್ಯಾದಿ ಲಕ್ಷಣಗಳಿರುವ ನಾಗರಿಕರು ಕೂಡಲೇ ರ್ಯಾಪಿಡ್ ಆಂಟಿಜೆನ್ ಕಿಟ್‍ಗಳ ಮುಖಾಂತರ ಗಂಟಲು ದ್ರವ ಪರೀಕ್ಷೆ ಮಾಡಿಸಿ ಕೊಳ್ಳಬೇಕು. ಇದರ ಬಗ್ಗೆ ವ್ಯಾಪಕವಾಗಿ ಪಂಚಾಯಿತಿ ಮಟ್ಟದಲ್ಲಿ ಮೈಕ್ ಮುಖಾಂತರ ಪ್ರಚಾರಪಡಿಸ ಬೇಕೆಂದರು. ವಾರದ ಸಂತೆ ತಾತ್ಕಾಲಿಕವಾಗಿ ನಿಲ್ಲಿಸಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಯಾರೇ ಗಾಡಿಗಳ ಮುಖಾಂತರ ತರಕಾರಿ, ಹಣ್ಣು ಇತ್ಯಾದಿಗಳ ವ್ಯಾಪಾರಕ್ಕೆ ಬಂದರೆ ಅವರ ಪೂರ್ವಾಪರ ವಿಚಾರಿಸಿ, ಪಂಚಾಯಿತಿ ಅನುಮತಿ ಪಡೆಯುವಂತೆಯೂ ಹಾಗೂ ತರಕಾರಿಗಳ ದರಗಳನ್ನು ಎಪಿಎಂಸಿ ದರಕ್ಕೆ ಅನುಗುಣವಾಗಿ ನಿಗದಿಪಡಿಸು ವಂತೆ ಸೂಚಿಸಿದರು. ಕಂಟೈನ್‍ಮೆಂಟ್ ವಲಯಗಳಲ್ಲಿ ಗ್ರಾಮಸ್ಥರು / ಸ್ವಯಂ ಸೇವಾ ಸಂಸ್ಥೆಗಳು ಉಚಿತವಾಗಿ ಆಹಾರ ಕಿಟ್‍ಗಳನ್ನು ವಿತರಿಸುತ್ತಿ ರುವುದು ಸ್ವಾಗತಾರ್ಹವಾಗಿದ್ದು, ಆ ವಲಯಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಹರಡದಂತೆ ಸೀಲ್‍ಡೌನ್ ಮಾಡಿರುವುದರಿಂದ ಸಂಬಂಧಿತ ಪಂಚಾಯಿತಿ, ಕಂದಾಯ ಇಲಾಖೆಯ ಒಪ್ಪಿಗೆ ಪಡೆದು ಪಂಚಾಯಿತಿ ಮುಖಾಂತರ ವಿತರಿಸಲು ಅಗತ್ಯ ಕ್ರಮವಹಿಸಲು ಸೂಚಿಸಿದರು. ಅಂತಹ ವಲಯಗಳಲ್ಲಿ ಸೋಂಕು ಸಾಂಕ್ರಾಮಿಕವಾಗಿ ಹಬ್ಬುವ ಸಾಧ್ಯತೆ ಇರುವುದರಿಂದ, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಉಚಿತ ಆಹಾರ ಕಿಟ್‍ಗಳನ್ನು ವಿತರಿಸಲು ದಾನಿಗಳು ಸಹಕರಿಸುವಂತೆ ಕೋರಿದರು. ಜಿ.ಪಂ. ಅಧ್ಯಕ್ಷ ಹರೀಶ್ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮಡಿಕೇರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಏನೇ ಸಮಸ್ಯೆಗಳಾದರೂ ಕೂಡಲೇ ತಮ್ಮ ಗಮನಕ್ಕೆ ತಂದು ಪರಿಹಾರ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ತಿಳಿಸಿದರು. ಗ್ರಾಮ ಮಟ್ಟದಲ್ಲಿರುವ ಹಿರಿಯ ನಾಗರಿಕರು, ಗರ್ಭಿಣಿ, ಬಾಣಂತಿಯರು, ಚಿಕ್ಕಮಕ್ಕಳ ಆರೋಗ್ಯದ ಬಗ್ಗೆ ಪ್ರತಿದಿನ ಪಂಚಾಯಿತಿ ಹೆಲ್ಪ್‍ಡೆಸ್ಕ್ ಮೂಲಕ ವಿಚಾರಿಸುವಂತೆ ತಿಳಿಸಿದರು. ಸಭೆಯಲ್ಲಿ ತಹಶೀಲ್ದಾರ್ ಮಹೇಶ್ ಉಪಸ್ಥಿತರಿದ್ದರು.