ಮಡಿಕೇರಿ, ಜು. 27: ಪ್ರತಿ ಮನೆ - ಮನೆಗಳಲ್ಲೂ ಬೆಳಕು ಚೆಲ್ಲಬೇಕೆಂಬ ಮಹದುದ್ದೇಶ ದೊಂದಿಗೆ ಸರಕಾರ ಹಲವಷ್ಟು ಯೋಜನೆಗಳನ್ನು ಜಾರಿಗೊಳಿ ಸುತ್ತಿದೆ. ಬಡವರ ಮನೆಗಳೂ ಬೆಳಗಲೆಂದು ಸೂರಿಗೊಂದು ದೀಪದಂತೆ ಉಚಿತವಾಗಿ ವಿದ್ಯುತ್ ಒದಗಿಸುವ ಸೌಭಾಗ್ಯ ವಿದ್ಯುತ್ ಯೋಜನೆ ಜಾರಿಗೊಳಿಸಿದೆ. ಕೇಂದ್ರ ಸರಕಾರದ ಈ ಯೋಜನೆಯಡಿ ಬಡ ಹಾಗೂ ಅರ್ಹ ಫಲಾನು ಭವಿಗಳ ಮನೆಗಳಿಗೆ ಒಂದೊಂದು ವಿದ್ಯುತ್ ದೀಪದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಬೇಕಾಗಿದೆ. ಆದರೆ ಅದರಲ್ಲೂ ತಮ್ಮ ಜೇಬು ತುಂಬಿಸಿಕೊಳ್ಳುವವರಿ ದ್ದಾರೆ ಎಂದರೆ ಅಚ್ಚರಿಯೇ ಸರಿ..! ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬ ನಾಣ್ಣುಡಿಯಂತೆ ಉಚಿತ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಫಲಾನುಭವಿ ಗಳಿಂದ ಅಭಿಯಂತರ ರಾಗಿ ಕಾರ್ಯನಿರ್ವಹಿಸುತ್ತಿರುವ ಸೆಸ್ಕ್ ಮೇಲ್ವಿಚಾರಕನೋರ್ವ ಹಣ ವಸೂಲಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ ವಿದ್ಯುತ್ ವಿಚಾರಕ್ಕೆ ಸಂಬಂಧಿಸಿದಂತೆ ಇತರ ಕೆಲಸಗಳಿಗೂ ಗ್ರಾಹಕರಿಂದ ಹಣ ವಸೂಲಿ ಮಾಡಿದ್ದಲ್ಲದೆ, ಕೆಲಸಗಳನ್ನು ‘ಸೌಭಾಗ್ಯ’ ಯೋಜನೆಯಡಿ ಪೂರೈಸಿ ಅವ್ಯವಹಾರ ಎಸಗಿರುವದೂ ಕಂಡು ಬಂದಿದೆ. ಕಾಲೋನಿ ನಿವಾಸಿಗಳಿಗೆ ಚಿಪ್ಪು..! ಕಾಂತೂರು - ಮೂರ್ನಾಡು ಗ್ರಾ.ಪಂ. ವ್ಯಾಪ್ತಿಗೊಳಪಡುವ ಮುತ್ತಾರ್ಮುಡಿಯ ಕುಂದು ಪೈಸಾರಿ ಎಂಬಲ್ಲಿ ಬಡವರ್ಗದ ಜನತೆ ಸುಮಾರು 70 ವರ್ಷಗಳಿಂದ ವಾಸವಾಗಿದ್ದಾರೆ. ಇಲ್ಲಿಗೆ ಇದುವರೆಗೂ ವಿದ್ಯುತ್ ಬೆಳಕು ಹರಿದಿಲ್ಲ. ಇದೀಗ ಈ ಕಾಲೋನಿಗೆ ಸೌಭಾಗ್ಯ ವಿದ್ಯುತ್ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮಂಜೂರಾತಿಯಾಗಿದ್ದು, ಮಾರ್ಗ ಅಳವಡಿಸಲಾಗಿದೆ. ಆದರೆ ಸಂಪರ್ಕ ಕಲ್ಪಿಸಿಲ್ಲ. ಪೈಸಾರಿ ನಿವಾಸಿಗಳು ಸೆಸ್ಕ್ ಮೂರ್ನಾಡು ಉಪವಿಭಾಗದ ಪ್ರಬಾರ ಕಿರಿಯ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಎಂ. ಚೇತನ್‍ಕುಮಾರ್ ಅವರಲ್ಲಿ ಸಂಪರ್ಕ ಕಲ್ಪಿಸಲು ಮನವಿ ಸಲ್ಲಿಸಿದ್ದಾರೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಈ ಅಧಿಕಾರಿ ಒಟ್ಟು 7 ಮಂದಿಯಿಂದ ತಲಾ ರೂ. 5,500 ರಂತೆ ಒಟ್ಟು ರೂ. 38,500 ಹಣ ವಸೂಲಿ ಮಾಡಿದ್ದಾರೆ. ಆದರೆ ಇದುವರೆಗೂ ಸಂಪರ್ಕ ಕಲ್ಪಿಸಿಲ್ಲವೆಂದು ಏಳು ಮಂದಿ ಫಲಾನುಭವಿಗಳು ಸೆಸ್ಕ್ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಗುತ್ತಿಗೆ ಕೆಲಸ..!
ಮತ್ತೊಂದು ಪ್ರಕರಣದಲ್ಲಿ ಈ ಅಧಿಕಾರಿಯೇ ಗುತ್ತಿಗೆದಾರನಾಗಿ ಕೆಲಸ ಮಾಡಿದ್ದಾರೆ..! ಮೂರ್ನಾಡು ವ್ಯಾಪ್ತಿಯ ಐಕೊಳ ಗ್ರಾಮದ ಕೊಂಪುಳಿರ ಕುಟುಂಬಸ್ಥರ 20 ಮನೆಗಳಿಗೆ ವಿದ್ಯುತ್ ಸಂಪರ್ಕದಲ್ಲಿ ವೋಲ್ಟೇಜ್‍ನಲ್ಲಿ ವ್ಯತ್ಯಾಸ ಇದ್ದುದರಿಂದ ಬದಲಿ ಪರಿವರ್ತಕ ಅಳವಡಿಸುವಂತೆ ಹಲವು ಬಾರಿ ದೂರು ಸಲ್ಲಿಸಿದ ಬಳಿಕ ಪರಿವರ್ತಕ ಮಂಜೂರಾಗಿದೆ.
ಈ ಕಾಮಗಾರಿಯನ್ನು ಯಾರಿಗೂ ನಿಯಮಾನುಸಾರ ಟೆಂಡರ್ ಮೂಲಕ ಗುತ್ತಿಗೆ ನೀಡದೆ ಅಧಿಕಾರಿಯೇ ಗುತ್ತಿಗೆ ವಹಿಸಿಕೊಂಡಿದ್ದಲ್ಲದೆ, ಕಾಮಗಾರಿ ನಿರ್ವಹಿಸಲು ರೂ. 40 ಸಾವಿರ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿದರೆ ಮಾತ್ರ ಕೆಲಸ ಮಾಡುವದಾಗಿ ಬೆದರಿಕೆ ಒಡ್ಡಿದ ನಂತರ ವಿಧಿಯಿಲ್ಲದೆ ಗ್ರಾಹಕರು ರೂ. 40 ಸಾವಿರವನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಆದರೂ ಕಾಮಗಾರಿಯನ್ನು ಸೌಭಾಗ್ಯ ಯೋಜನೆಯಡಿ ಕೆಲಸ ಮಾಡುತ್ತಿರುವ ಗುತ್ತಿಗೆದಾರರಿಂದ ನಿರ್ವಹಿಸಿದ್ದಾನೆ. ಅಲ್ಲದೆ ಕಾಮಗಾರಿಯನ್ನು ಕಳಪೆ ಮಟ್ಟದಲ್ಲಿ ನಿರ್ವಹಿಸಿದ್ದರಿಂದ ಕೆಲಸ ಮುಗಿದ ಒಂದು ವಾರದ ಅವಧಿಯಲ್ಲಿ ಕಂಬ ಹಾಗೂ ತಂತಿಗಳು ತುಂಡರಿಸಿ ಬಿದ್ದು, ಹಲವಾರು ಮನೆಗಳ ವಿದ್ಯುತ್ ಉಪಕರಣಗಳು ಸುಟ್ಟುಹೋಗಿ ನಷ್ಟ ಸಂಭವಿಸಿದೆ. ಇದೂ ಅಲ್ಲದೆ, ಹಲವಾರು ಕಡೆಗಳಲ್ಲಿ ಅಂದಾಜು ಪಟ್ಟಿ ತಯಾರಿಸದೆ
(ಮೊದಲ ಪುಟದಿಂದ) ವಿದ್ಯುತ್ ಕಂಬಗಳನ್ನು ಬದಲಾಯಿಸಿ ಇಲಾಖೆಗೆ ನಷ್ಟ ಉಂಟು ಮಾಡಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಕೊಂಪುಳಿರ ಕುಟುಂಬಸ್ಥರು ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಕಂಬಕ್ಕೆ 30 ಸಾವಿರ..!
ಇನ್ನೊಂದು ಪ್ರಕರಣದಲ್ಲಿ ಒಂದು ಕಂಬ ಅಳವಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಲು ರೂ. 30 ಸಾವಿರ ಬೇಡಿಕೆ ಇಟ್ಟಿರುವ ಬಗ್ಗೆ ತಿಳಿದು ಬಂದಿದೆ. ಮರಗೋಡು ಗ್ರಾಮದ ಐ.ವಿ. ನವನೀತ ಎಂಬವರು ತಮ್ಮ ಲೈನ್‍ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕಾರಿ ಚೇತನ್‍ಕುಮಾರ್ ಅವರಲ್ಲಿ ಕೋರಿಕೊಂಡಿದ್ದಾರೆ. ಸ್ಥಳ ಪರಿಶೀಲಿಸಿದ ಅಧಿಕಾರಿ ಒಂದು ಕಂಬ ಹಾಗೂ ಮೀಟರ್ ಅಳವಡಿಸಲು ರೂ. 30 ಸಾವಿರದ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ನವನೀತ ಅವರು ಸೆಸ್ಕ್ ಕಚೇರಿಯಲ್ಲಿ ವಿಚಾರಿಸಿದಾಗ ಅಷ್ಟೊಂದು ದೊಡ್ಡ ಮೊತ್ತ ಆಗುವದಿಲ್ಲವೆಂದು ತಿಳಿದು ಬಂದಿದೆ. ಈ ಬಗ್ಗೆಯೂ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಅವರು ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಸ್ಥಳಾಂತರಕ್ಕೆ 23 ಸಾವಿರ !
ಕಟ್ಟಡದ ಮೇಲೆ ಹಾದು ಹೋದ ವಿದ್ಯುತ್ ಮಾರ್ಗ ಬದಲಾವಣೆ ಮಾಡಲು ರೂ. 23 ಸಾವಿರ ಹಣ ಪಡೆದಿರುವ ಬಗ್ಗೆಯೂ ಈ ಅಧಿಕಾರಿಯ ಮೇಲೆ ದೂರುಗಳಿವೆ. ಮರಗೋಡು ಗ್ರಾಮದ ಪಿ.ಬಿ. ಜೀವನ್‍ಕುಮಾರ್ ಎಂಬವರ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೇಲ್ಭಾಗದಲ್ಲಿ ಹಾದುಹೋಗಿರುವ ವಿದ್ಯುತ್ ಮಾರ್ಗವನ್ನು ಬದಲಾಯಿಸುವಂತೆ ಅಧಿಕಾರಿಯಲ್ಲಿ ಕೋರಿಕೊಂಡ ಮೇರೆಗೆ, ಅಧಿಕಾರಿ ಚೇತನ್ ಇಲಾಖೆ ನಿಯಮದಂತೆ ಎರಡು ಕಂಬ ಅಳವಡಿಸಿ ವಿದ್ಯುತ್ ತಂತಿ ಬದಲಾಯಿಸುವದಾಗಿ ಹೇಳಿ ರೂ. 23 ಸಾವಿರ ಹಣದ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಗ್ರಾಹಕರು ರೂ. 23 ಸಾವಿರ ನೀಡಿದ್ದಾರೆ. ಆದರೆ, ನಂತರದಲ್ಲಿ ಅಂದಾಜು 14 ಅಡಿ ಎತ್ತರವಿರುವ ಕಬ್ಬಿಣದ ಹಳೆಯ ಕಂಬಗಳನ್ನು ನೆಟ್ಟು ಕೆಲಸ ಮುಗಿಸಿದ್ದು, ಇದರಿಂದಾಗಿ ಗ್ರಾಹಕರಿಗೆ ಕಟ್ಟಡ ಕಾಮಗಾರಿ ನಡೆಸಲು ಇನ್ನಷ್ಟು ತೊಂದರೆ ಉಂಟಾಗಿದೆ. ಈ ಬಗ್ಗೆಯೂ ದೂರು ಸಲ್ಲಿಸಿರುವ ಗ್ರಾಹಕರು, ನ್ಯಾಯ ಒದಗಿಸಿಕೊಡುವಂತೆ ಕೋರಿದ್ದಾರೆ.
ಹಣ ಕೊಟ್ಟರೆ ಕೆಲಸ..!
‘ಸೌಭಾಗ್ಯ’ ಉಚಿತ ವಿದ್ಯುತ್ ಸಂಪರ್ಕ ಒದಗಿಸಲು ಹಣ ಕೊಟ್ಟರೆ ಮಾತ್ರ ಮಾಡಿಕೊಡುವದಾಗಿ ಬಡವರಲ್ಲಿ ಬೇಡಿಕೆ ಇಟ್ಟಿರುವ ಮತ್ತೊಂದು ಪ್ರಕರಣವಿದೆ. ಹೊದ್ದೂರು ವಾಟೆಕಾಡುವಿನ ಕಣ್ಣಬಲಮುರಿ ಗ್ರಾಮದ ಹೆಚ್.ಎ. ಚಿತ್ರ ಎಂಬವರ ಮನೆಗೆ 45 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದಿದ್ದು, ಹಲವಷ್ಟು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಇದೀಗ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಒದಗಿಸಲು ಮನವಿ ಸಲ್ಲಿಸಿದಾಗ ಹಣ ನೀಡಿದರೆ ಮಾತ್ರ ಕೆಲಸ ಮಾಡಿಕೊಡುವದಾಗಿ ಅಧಿಕಾರಿ ಹೇಳಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿರುವ ತಮ್ಮಲ್ಲಿ ಅಷ್ಟೊಂದು ಹಣ ಇಲ್ಲದಿದ್ದು, ತಮಗೆ ವಿದ್ಯುತ್ ಸಂಪರ್ಕ ಒದಗಿಸಿಕೊಡುವಂತೆ ಚಿತ್ರ ಅವರು ಹಿರಿಯ ಅಧಿಕಾರಿಗಳಲ್ಲಿ ದೂರು ಸಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ.
ಮೇಲ್ವಿಚಾರಕ - ಅಭಿಯಂತರ..!
ಇವಿಷ್ಟೇ ಅಲ್ಲದೆ ಇನ್ನೂ ಹಲವಾರು ಕಡೆಗಳಲ್ಲಿ ಉಚಿತ ವಿದ್ಯುತ್ ಯೋಜನೆಯಡಿ ಕೆಲವರ ಮನೆಗಳಿಗೆ ಸಂಪರ್ಕ ಕಲ್ಪಿಸಿ, ಗ್ರಾಹಕರಿಂದ ಹಣ ಪಡೆದಿರುವ ದೂರುಗಳೂ ಕೇಳಿಬರುತ್ತಿವೆ. ಅಷ್ಟಕ್ಕೂ ಕಚೇರಿ ಮೇಲ್ವಿಚಾರಕರಾಗಿರುವ ಚೇತನ್‍ಗೆ ಮೂರ್ನಾಡು ಶಾಖೆಯ ಪ್ರಬಾರ ಕಿರಿಯ ಅಭಿಯಂತರ ಹುದ್ದೆಯ ಜವಾಬ್ದಾರಿ ನೀಡಲಾಗಿತ್ತು. ಇದನ್ನೇ ದುರುಪಯೋಗ ಪಡಿಸಿಕೊಂಡ ಈ ಅಧಿಕಾರಿ ಅವ್ಯವಹಾರ ಎಸಗಿರುವದು ಇದೀಗ ಬೆಳಕಿಗೆ ಬಂದಿದೆ. - ಸಂತೋಷ್