ಕೂಡಿಗೆ, ಜು. 26: ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ರೈತರು ವಾಣಿಜ್ಯ ಬೆಳೆಯಾದ ಶುಂಠಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆದರೆ ಉತ್ತಮವಾದ ಬೆಳೆ ಬಂದರೂ ರೈತರಲ್ಲಿ ರೋಗದ ಆತಂಕ ಹೆಚ್ಚಾಗಿದೆ.
ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶ ಮತ್ತು ಇತರೆ ಬಯಲು ಪ್ರದೇಶಗಳಲ್ಲಿ ಕಾರ್ಮಿಕರ ಕೊರತೆಯ ನಡುವೆ ಶುಂಠಿ ಬೆಳೆಯನ್ನು 48 ಉಪ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ಬಿತ್ತನೆ ಮಾಡಿ ಈಗಾಗಲೇ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ.
ಆದರೆ ಈ ಜಮೀನುಗಳಲ್ಲಿ ಶುಂಠಿ ಬೆಳೆ ಸಣ್ಣ ಪ್ರಮಾಣದಲ್ಲಿ ಇದ್ದರೂ ಬೆಂಕಿರೋಗದಂತ ರೋಗ ಕಂಡುಬಂದು ಗದ್ದೆಗಳಲ್ಲಿ ಶುಂಠಿ ಬೆಳೆ ಒಣಗುತ್ತಿದೆ. ಇದರಿಂದಾಗಿ ಈ ವ್ಯಾಪ್ತಿಯ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಲು ಸಿದ್ದರಾಗಿದ್ದಾರೆ.
ಈ ವ್ಯಾಪ್ತಿಯ ಪ್ರದೇಶಗಳಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಶುಂಠಿಯು ಸಾಗಾಣಿಕೆಯಾಗದೆ ಇರುವುದರಿಂದ ಬೆಲೆಯಲ್ಲಿ ಬಾರಿ ಕುಸಿತ ಉಂಟಾಗಿದೆ. ಕಳೆದ ವರ್ಷದಲ್ಲಿ ಒಂದು ಚೀಲಕ್ಕೆ ರೂ. 2800 ಇದ್ದಿದ್ದು ಈ ಸಾಲಿನಲ್ಲಿ ಕೇವಲ 1,000 ರೂ. ಇದೆ. ಈಗಾಗಲೇ ಶುಂಠಿ ಬೆಳೆಗೆ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿ ಬೇಸಾಯ ಮಾಡಲಾಗಿದೆ. ಖರ್ಚುಮಾಡಿದ ಹಣವನ್ನೂ ತೆಗೆಯಲು ಸಾದ್ಯವಾಗುತ್ತಿಲ್ಲ ಎಂದು ಶುಂಠಿ ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಶುಂಠಿ ಬೆಳೆಯು ರೋಗದ ಅಂಚಿನಲ್ಲಿ ಇರುವುದರಿಂದ ಅನೇಕ ರೈತರು ಹಾರಂಗಿ ನಾಲೆಯಲ್ಲಿ ಕಾಲುವೆಗಳ ಮೂಲಕ ನೀರನ್ನು ಹರಿಸಲು ಸಿದ್ದರಾಗಿರುವ ಸಂದರ್ಭದಲ್ಲಿ ಭತ್ತದ ನಾಟಿ ಮಾಡಲು ಭತ್ತದ ಸಸಿ ಮಡಿ ತಯಾರಿಯಲ್ಲಿದ್ದಾರೆ.