ಸೋಮವಾರಪೇಟೆ, ಜು, 26: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಘೋಷಿಸಲ್ಪಟ್ಟಿರುವ ಭಾನುವಾರದ ಲಾಕ್‍ಡೌನ್‍ನ ನಡುವೆಯೂ ಸೋಮವಾರಪೇಟೆಯಲ್ಲಿ ತೆರೆದಿದ್ದ ಕೋಳಿ ಮಾಂಸದ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿ, ಎಚ್ಚರಿಕೆ ನೀಡಿದ ಘಟನೆ ನಡೆಯಿತು.

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹೈಟೆಕ್ ಮಾರುಕಟ್ಟೆಯ ಆವರಣದಲ್ಲಿರುವ ಕೋಳಿ ಮಾಂಸ ಮಾರಾಟದ ಅಂಗಡಿಗಳನ್ನು ತೆರೆದು ವ್ಯಾಪಾರಕ್ಕಾಗಿ ಗ್ರಾಹಕರನ್ನು ಎದುರು ನೋಡುತ್ತಿದ್ದ ಅಂಗಡಿ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ನೀಡಿ ಅಂಗಡಿಗಳನ್ನು ಮುಚ್ಚಿಸಿದರು.

ಪಟ್ಟಣದ ಕೋಳಿ ಹಾಗೂ ಮೀನು ಮಾರಾಟದ ಎರಡು ಅಂಗಡಿಗಳು ಬೆಳಗ್ಗಿನಿಂದ ತೆರೆಯಲ್ಪಟ್ಟಿದ್ದು, ಮಾಂಸ ಮಾರಾಟಕ್ಕಾಗಿ ಗ್ರಾಹಕರನ್ನು ಎದುರು ನೋಡುತ್ತಿದ್ದರು. ಈ ಸಂದರ್ಭ ಪೊಲೀಸರು ಆಗಮಿಸಿ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಿದರಲ್ಲದೇ, ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸುವದಾಗಿ ಎಚ್ಚರಿಕೆಯಿತ್ತರು. ಪೊಲೀಸರ ಆಗಮನದ ನಂತರ ಅಂಗಡಿಗಳನ್ನು ಮುಚ್ಚಿ ಮಾಲೀಕರು ತೆರಳಿದರು.

ಶ್ರಮದಾನ

ಭಾನುವಾರ ಲಾಕ್‍ಡೌನ್ ಆದೇಶದ ಹಿನ್ನೆಲೆಯಲ್ಲಿ ಕೊಳಕೇರಿಯ ಬ್ಲೂ ಬಾಯ್ಸ್ ಕಣ್ಣಪಣೆ ಸಂಘದ ಸಂಶುದ್ದೀನ್, ಅಶ್ರಫ್ ಕೆ.ವೈ, ಝುಬೈರ್, ಸಿರಾಜ್, ಸೈಫುದ್ದೀನ್, ಅಬ್ದುಲ್ ರಹೀಮ್ ಸಾದಿಕ್, ಫಾರೂಕ್ ಮೊದಲಾದ ಯುವಕರು ಕೊಳಕೇರಿ ಬಳಿ ಮುಖ್ಯರಸ್ತೆಯಲ್ಲಿ ಉಂಟಾದ ಗುಂಡಿಗಳನ್ನು ಕಲ್ಲು ಮಣ್ಣಿನಿಂದ ಮುಚ್ಚಿ ಶ್ರಮದಾನ ನಡೆಸಿದರು.