ಮಡಿಕೇರಿ, ಜು. 26: ವೀರಾಜಪೇಟೆ ರೋಟರಿ ಸಂಸ್ಥೆ 50 ವರ್ಷವನ್ನು ಪೂರೈಸುತ್ತಿದ್ದು, ಈ ಬಾರಿ ಸುವರ್ಣ ಸಂಭ್ರಮದಲ್ಲಿದೆ. ಸೇವಾ ಸಂಸ್ಥೆಯಾಗಿರುವ ರೋಟರಿಯಿಂದ ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಚಿಂತನೆಯಿದೆಯಾದರೂ, ಪ್ರಸ್ತುತದ ಕೊರೊನಾ ಸಮಸ್ಯೆಯಿಂದಾಗಿ ಅಡಚಣೆಯಾಗಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಹೊಂದಿರುವುದಾಗಿ ಈ ಬಾರಿಯ ಪ್ರಮುಖರು ತಿಳಿಸಿದ್ದಾರೆ.

ರೋಟರಿಯ ಈ ಬಾರಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇತ್ತೀಚೆಗೆ ರೋಟರಿ ಸಭಾಂಗಣದಲ್ಲಿ ಸರಳವಾಗಿ ಜರುಗಿತು.

ನೂತನ ಅಧ್ಯಕ್ಷರಾಗಿ ವಕೀಲ ಮುಕ್ಕಾಟಿರ ಬನ್ಸಿಪೂವಣ್ಣ ಅವರು ನೇಮಕಗೊಂಡಿದ್ದಾರೆ. ಇವರು ಎರಡನೇ ಬಾರಿಗೆ ಅಧ್ಯಕ್ಷರಾಗುತ್ತಿದ್ದು, ಈ ಹಿಂದೆ 25ನೇ ವರ್ಷದ ಬೆಳ್ಳಿ ಹಬ್ಬ ಆಚರಣೆ ಸಂದರ್ಭವೂ ಇವರು ಅಧ್ಯಕ್ಷರಾಗಿದ್ದರು. ಇದೀಗ ಸುವರ್ಣ ಮಹೋತ್ಸವ ಸಂದರ್ಭದಲ್ಲಿಯೂ ಬನ್ಸಿ ಪೂವಣ್ಣ ಅಧ್ಯಕ್ಷರಾಗಿದ್ದಾರೆ.

ಪದಗ್ರಹಣ ಕಾರ್ಯಕ್ರಮ ವಲಯ ಸಹಾಯಕ ರಾಜ್ಯಪಾಲ ವಕೀಲ ಬಲ್ಯಮಾಡ ಬಿ. ಮಾದಪ್ಪ ಅವರ ಉಪಸ್ಥಿತಿಯಲ್ಲಿ ನಡೆಯಿತು. ಕಾರ್ಯದರ್ಶಿಯಾಗಿ ಡಾ. ಮಾದಂಡ ಲವಿನ್ ಚಂಗಪ್ಪ, ಪದಾಧಿಕಾರಿಗಳಾಗಿ ಡಾ. ಉತ್ತಪ್ಪ, ಅಯ್ಯಪ್ಪ ಎನ್.ಯು., ರವಿ ಎಂ.ಎಸ್., ಸುಬ್ಬಯ್ಯ ಬಿ.ಸಿ., ಮಿಕ್ಕಿ ಕಾಳಪ್ಪ, ಡಾ. ನರಸಿಂಹನ್, ಪೃಥ್ವಿ ಮಾದಯ್ಯ, ಆದಿತ್ಯ ಕೆ.ಎಚ್., ಹರಿ, ಶಂಕರ್ ಪ್ರಸಾದ್, ಭರತ್ ರೈ, ವಿಕಾರ್ ಕಾಂತ್, ಸರೋಜ ಕಾರ್ಯಪ್ಪ, ಚೇತನ್ ಮುತ್ತಣ್ಣ ಆಯ್ಕೆಗೊಂಡಿದ್ದಾರೆ.