ಮಡಿಕೇರಿ, ಜು. 25: ಎಸ್.ಕೆ.ಎಸ್.ಎಸ್.ಎಫ್., ಜಿಸಿಸಿ ಕೊಡಗು ಘಟಕ ಇವರ ಆಶ್ರಯದಲ್ಲಿ ಕೊಡಗಿನ ಅನಿವಾಸಿ ಕನ್ನಡಿಗರು ಹಾಗೂ ಕೊಡಗಿನ ಪತ್ರಕರ್ತರೊಂದಿಗೆ ಆನ್‍ಲೈನ್ ಸಂವಾದ ಕಾರ್ಯಕ್ರಮ ನಡೆಯಿತು.
‘ಪತ್ರಿಕಾ ಧರ್ಮ ಮತ್ತು ಪತ್ರಕರ್ತರ ಸವಾಲು’ ಎಂಬ ವಿಷಯದ ಕುರಿತು ಚರ್ಚೆ, ಸಂವಾದ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಎಸ್.ಕೆ.ಎಸ್.ಎಸ್.ಎಫ್., ಜಿಸಿಸಿ ಸಮಿತಿ ಅಧ್ಯಕ್ಷ ಹುಸೇನ್ ಫೈಜಿ ಬಜೆಗುಂಡಿ ವಹಿಸಿದ್ದರು.
ಉದ್ಘಾಟನೆಯನ್ನು ನೆರವೇರಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಹುಸೇನ್ ಫೈಜಿ, ಪತ್ರಿಕಾ ಧರ್ಮ ಹಾಗೂ ಪತ್ರಕರ್ತರ ಸವಾಲುಗಳ ಬಗ್ಗೆ ಬೆಳಕು ಚೆಲ್ಲುವ ಮಾತುಗಳನ್ನು ಆಡಿ ಪತ್ರಕರ್ತರು ಹಾಗೂ ಸಮಾಜದ ನಡುವೆ ಉತ್ತಮ ಸಂಬಂಧ ಇದ್ದಲ್ಲಿ ಮಾತ್ರ ದೇಶ ಉತ್ತಮ ಹಾದಿಯಲ್ಲಿ ಸಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಕರ್ತರು ಉತ್ತಮ ಕೆಲಸ ಮಾಡಿದಾಗ ಬೆನ್ನುತಟ್ಟಿ, ತಪ್ಪುಗಳಾದಾಗ ತಿದ್ದುವ ಪ್ರಯತ್ನ ಮಾಡಿದಾಗ ಮಾತ್ರವೇ ಸಮಾಜವು ನೈಜ ಹಾದಿಯಲ್ಲಿ ಸುಗಮವಾಗಿ ಸಾಗಲು ಸಾಧ್ಯ ಎಂದು ಹೇಳಿದರು. ಹಾಗೆಯೇ ಯುವ ಸಮುದಾಯವು ಹೆಚ್ಚು ಹೆಚ್ಚಾಗಿ ಪತ್ರಿಕಾರಂಗಕ್ಕೆ ಬರಲು ಅವರು ಕರೆ ನೀಡಿದರು. ಸರಕಾರದ ಮೇಲೆ ಒತ್ತಡ ಹೇರಿ ಪತ್ರಿಕಾ ಕಾಲೇಜುಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಎಸ್.ಕೆ.ಎಸ್.ಎಸ್.ಎಫ್. ಕೊಡಗು ಜಿಲ್ಲಾಧ್ಯಕ್ಷ ತಮ್ಲೀಖ್ ದಾರಿಮಿ ಪತ್ರಕರ್ತರ ಸಂಕಷ್ಟಕ್ಕೆ ಎಲ್ಲರೂ ಧ್ವನಿಗೂಡಿಸಿ, ಪತ್ರಿಕಾ ರಂಗದ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಸೌದಿ ಅರೇಬಿಯಾ, ಯು.ಎ.ಇ, ಒಮಾನ್, ಬಹರೈನ್, ಕತಾರ್ ಇನ್ನಿತರ ದೇಶಗಳಲ್ಲಿ ಇರುವ ಕೊಡಗಿನ ನೂರಾರು ನಾಗರಿಕರು ಆನ್‍ಲೈನ್ ಸಂವಾದದಲ್ಲಿ ಭಾಗವಹಿಸಿದ್ದರು. ಎಸ್.ಕೆ.ಎಸ್.ಎಸ್.ಎಫ್., ಜಿಸಿಸಿ ಆಡಳಿತ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಯಹ್ಯಾ ಕಾರ್ಯಕ್ರಮವನ್ನು ನಿರೂಪಿಸಿ, ಗಫೂರ್ ಸೌದಿ ವಂದಿಸಿದರು.