ಮಾತೆಯ ಕೃಪೆಯಿಂದ ಒದಗಿಬಂದ ಆದಿಮ ಸಂಜಾತೆ ಕನ್ಯೆಯನ್ನು ಕ್ಷತ್ರಿಯ ರಾಜಕುವರ ಚಂದ್ರವರ್ಮ ಸ್ವೀಕರಿಸುತ್ತಾನೆ, ಆದರೆ, ವ್ಯಾಕುಲಚಿತ್ತನಾಗಿ ಹೀಗೆ ನುಡಿಯುತ್ತಾನೆ:-“ ದಯಾಮೂರ್ತಿಯೂ, ಸರ್ವಾನುಗ್ರಹಕಾರಿಣಿಯೂ ಆದ ಪಾರ್ವತಿಯೇ, ಸ್ವಜಾತಿಯ ಯುವತಿ ಸಕಲ ಕರ್ಮಕ್ಕೆ ಯೋಗ್ಯಳು. ಆದರೆ, ನೀನು ಅನ್ಯ ಜಾತಿಯ (ಆದಿಮ ಸಂಜಾತೆ) ಕನ್ಯೆಯನ್ನು ನೀಡಿರುವೆ. ಕ್ಷತ್ರಿಯನಾದ ನನಗೆ ಅನ್ಯ ಜಾತಿ ಸ್ತ್ರೀಯಲ್ಲಿ ಜನಿಸುವ ಮಕ್ಕಳಿಂದ ಏನು ಪ್ರಯೋಜನ ? ಇದರಿಂದ ನಾನು ಪುತ್ರ ಶೂನ್ಯನಾದಂತೆಯೇ ಸರಿ. ಹೀಗಿರುವಾಗ ನನಗೆ ಬೇರೆ ರಾಜ್ಯವಾದರೂ ಏಕೆ ಬೇಕಿದೆ ? ನೀನೇ ನೀಡಿದ ಈ ಕನ್ಯೆಯನ್ನು ನೀನೇ ಪರಿಗ್ರಹಿಸು ಎಂದು ದೇವಿಯೊಡನೆ ಅಂಗಲಾಚಿ ಬೇಡಿದ. ಹೀಗೆ ಅತಿ ವ್ಯಸನದಿಂದ ಮಾತನಾಡುತ್ತ್ತಿದ್ದ ರಾಜಕುವರ ನನ್ನು ಪ್ರಸನ್ನತಾ ದೃಷ್ಟಿಯಿಂದ ನೋಡಿದ ಮಾತೆ ಪಾರ್ವತಿಯು “ಎಲೈ ಪುತ್ರನೇ ವ್ಯಸನದಿಂದ ದೂರಾಗು. ನಿನ್ನ ಪುತ್ರ ಜನನದ ಬಯಕೆಯು ಈಡೇರುತ್ತದೆ. ನಾನು ನೀಡಿದ ಈ ಕನ್ನಿಕೆಯಲ್ಲಿಯೇ ನಿನಗೆ ಗುಣವಂತರಾದ ಹನ್ನೊಂದು ಗಂಡು ಮಕ್ಕಳು ಹುಟ್ಟುತ್ತಾರೆ” ಎಂದು ಹರಸುತ್ತಾಳೆ.

ಕ್ಷತ್ರಿಯನಾದ ನಿನಗೆ ನನ್ನ ಶಕ್ತಿಯಿಂದಲೇ ಜನಿಸಿದ ಈ ಆದಿಮ ಸಂಜಾತೆ ಸ್ತ್ರೀಯಲ್ಲಿ ನಿನಗೆ ಜನಿಸುವ ಮಕ್ಕಳು ಪರಾಕ್ರಮಿಗಳಾಗಿರುತ್ತಾರೆ. ನನ್ನ ಭಕ್ತರಾಗಿರುತ್ತಾರೆ. ಶಿವ ಪೂಜಕರಾಗಿರುತ್ತಾರೆ. ಧರ್ಮಿಷ್ಠರೂ, ಸತ್ಯ ಸಂಧರೂ ವೇದಜ್ಞರಿಗೆ ಗೌರವ ಕೊಡುವವರೂ ಆಗಿರುತ್ತಾರೆ. ಅವರು ಕ್ಷತ್ರಿಯರಲ್ಲದಿದ್ದರೂ ನೀನು ಕ್ಷತ್ರಿಯನಾಗಿರುವದರಿಂದ ಆ ಅಂಶವನ್ನೊಳಗೊಂಡು ಅನ್ಯ ಜಾತಿಯ ಸ್ತ್ರೀಯಲ್ಲಿ ಜನಿಸಿದ್ದರೂ ರಾಜ್ಯವನ್ನಾಳುವದಕ್ಕೆ ಅರ್ಹತೆಯುಳ್ಳವರಾಗಿರುತ್ತಾರೆ., ರಾಜ ಪೂಜ್ಯರೂ, ರಾಜನಂತೆ ಸರ್ವರಿಂದ ಗೌರವಿಸಲ್ಪಡುವವರೂ ಆಗಿರುತ್ತಾರೆ. ವೇದ ಹಾಗೂ ವೇದಾಂಗ ಕರ್ಮಗಳನ್ನು ಹೊರತುಪಡಿಸಿ ಕ್ಷತ್ರಿಯ ಧರ್ಮವುಳ್ಳವರಾಗಿರುತ್ತಾರೆ. ಶೂರರೂ ಅಭಿಮಾನಿಗಳೂ ಆಗುವರೆಂಬದರಲ್ಲಿ ಸಂದೇಹವಿಲ್ಲ. ಅವರಿಂದಲೇ ನಿನಗೆ ಇಹ-ಪರಗಳಲ್ಲಿ ಹೆಚ್ಚು ಸುಖ ದೊರಕುತ್ತದೆ. ಎಲೈ ರಾಜಕುವರನೇ, ಇನ್ನೊಂದು ಮುಖ್ಯ ವಿಚಾರವನ್ನು ಅರಿತುಕೋ, ಈ ದೇಶವು ಪುಣ್ಯಕರವೂ, ಮಹರ್ಷಿಗಳಿಗೆ ಪುಣ್ಯಪ್ರದವೂ ಆಗಿದೆ. ಅಲ್ಲದೆ, ಗಂಧರ್ವ, ಸಿದ್ಧ, ಯಕ್ಷ, ಕಿನ್ನರ, ಉರಗ ಚಾರಣರಿಗೆ ಈ ದೇಶವು ಆಲಯವಾಗಿದೆ. ಈ ದೇಶದಲ್ಲಿರುವ ಪುಣ್ಯಕರವಾದ ಸಹ್ಯಗಿರಿಯು ಈಶ್ವರನಿಗೆ ಮೂಲ ಸ್ಥಾನವಾಗಿದೆ. ಈ ಸಹ್ಯಗಿರಿಯ ಶಿಖರವು ಬ್ರಹ್ಮಗಿರಿಯೆಂಬ ಹೆಸರನ್ನು ಧರಿಸಿದೆ. ಈ ಸಹ್ಯಗಿರಿಯ ಶಿಖರದಲ್ಲಿ ಭಕ್ತವತ್ಸಲನಾದ ಶ್ರೀಹರಿಯು ಧಾತ್ರೀ ಮರದ ರೂಪದಲ್ಲಿ ಸದಾ ಸನ್ನಿಹಿತನಾಗಿದ್ದಾನೆ.

ಅಹಂ ಬ್ರಹ್ಮಸುತಾ ಭೂತ್ವಾ ಕವೇರಸ್ಯ ತತಃ ಪರಂ

ಪುತ್ರೀ ಭೂತ್ವಾ ಚ ಮುಕ್ತಿಂ ಚ ತಸ್ಮೈ ದತ್ವಾ ಮಹಾತ್ಮನೇ

ಕಾವೇರೀತ್ಯಭಿಧಾನಂ ತು ವಹಂತೀ ಲೋಕ ಪಾವನಂ

ಇಂತಹ ಪರ್ವತಗಳಲ್ಲಿ ಶ್ರೇಷ್ಠವೆನಿಸಿದ ಸಹ್ಯಗಿರಿ ಪರ್ವತ ಶಿಖರವಾದ ಬ್ರಹ್ಮಗಿರಿಯಲ್ಲಿ ಕೆಲ ಕಾಲಾನಂತರ ಸಕಲ ಜನರ ಕಲ್ಯಾಣಕ್ಕಾಗಿ ನಾನು ಬ್ರಹ್ಮನ ಮಗಳಾಗಿ ಕಾಣಿಸಿಕೊಳ್ಳುತ್ತೇನೆ. ಅಲ್ಲಿ ಕವೇರನ ಪುತ್ರ್ರಿಯೆಂದು ಪ್ರಖ್ಯಾತಗೊಳ್ಳುತ್ತೇನೆ. ಕವೇರನಿಗೆ ಮೋಕ್ಷಪ್ರದಾಯಕಿಯಾಗುತ್ತೇನೆ. ಜಗತ್ಪವಿತ್ರವಾದ ಕಾವೇರಿಯೆಂಬ ನಾಮಧೇಯ ಧರಿಸಿ ಕೊಟ್ಯಂತರ ತೀರ್ಥಗಳ ಸ್ವರೂಪವುಳ್ಳವಳಾಗುತ್ತೇನೆ

ತುಲಾರ್ಕೇ ಪ್ರವಹಿಷ್ಯಾಮಿ ಧಾತ್ರೀಮೂಲಾನ್ಮುನೇರ್ಘಟಾತ್

ಪುನಾನಾ ನಿಖಿಲಾನ್ ಲೋಕಾನ್ಗಮಿಷ್ಯಾಮಿ ಮಹೋದಧಿüಂ

ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವಾಗ, ನೆಲ್ಲಿ ಮರದ ಬುಡದಲ್ಲಿರುವ ಅಗಸ್ತ್ಯರ ಕಮಂಡಲುವಿನಿಂದ ಹೊರಟು ಸಮಸ್ತ ಜನರನ್ನೂ ಪವಿತ್ರರಾಗಿಸಿ ಸಮುದ್ರಕ್ಕೆ ತೆರಳುವೆನು. ಪುತ್ರನೇ, ಆ ಸಂದರ್ಭ ಈ ಆದಿಮ ಸಂಜಾತೆ ಸ್ತ್ರೀಯಲ್ಲಿ ಜನಿಸುವ ನಿನ್ನ ಎಲ್ಲ ಮಕ್ಕಳಲ್ಲಿಯೂ ನಾನು ಪ್ರೀತಿ ತೋರಿಸುತ್ತೇನೆ. ಅವರಿಗೆ ಅನೇಕ ವರಗಳನ್ನು ನೀಡುತ್ತೇನೆ. ನಿನ್ನ ಸಂತೋಷಕ್ಕಾಗಿ, ಅಲ್ಲದೆ, ಪರಲೋಕದಲ್ಲಿಯೂ ನಿನಗೆ ಸುಖವಾಗುವದಕ್ಕಾಗಿ ನಿನ್ನ ಪುತ್ರರಿಗೆ ವರಗಳನ್ನು ನೀಡುತ್ತೇನೆ. ನಿನ್ನ ಪುತ್ರರಿಂದ ನಿನಗೆ ನನ್ನ ಅನುಗ್ರಹದ ಮೂಲಕ ಮೋಕ್ಷವು ನಿಶ್ಚಯ. ನೀನು ನಿಷ್ಪುತ್ರನೆಂದು ದುಃಖಿಸುವ ಅಗತ್ಯವಿಲ್ಲ. ಇತರ ಸಕಲ ದೇಶಗಳಿಗಿಂತಲೂ ಈ ದೇಶವು ಉತ್ತಮವಾದುದು ಹಾಗೂ ಪವಿತ್ರವಾದುದಾಗಿದೆ. ಆದರೆ, ಈಗಿನ ಸ್ಥಿತಿಯಲ್ಲಿ ಈ ದೇಶವು ನಾಸ್ತಿಕರೂ, ಪಾಪ ಭೂಯಿಷ್ಠರೂ, ಪ್ರಾಣಿ ಹಿಂಸಕರೂ, ಕ್ರೂರಿಗಳೂ ಆದ ಮ್ಲೇಚ್ಛರಿಂದ ತುಂಬಿ ಹೋಗಿದೆ. ನನ್ನ ಅನುಗ್ರಹದಿಂದ ನೀನು ಅವರನ್ನೆಲ್ಲ ಪರಾಭವಗೊಳಿಸುವೆ. ಬಳಿಕ ನೀನು ಈ ದೇಶದ ಅರಸನಾಗು. ಧರ್ಮವನ್ನು ಪರಿಪಾಲಿಸು. ಪ್ರಜೆಗಳನ್ನು ನ್ಯಾಯದಿಂದ ನೋಡಿಕೋ. ಹೋಮ ಹವ್ಯಗಳಿಂದ ದೇವತೆಗಳನ್ನು ತೃಪ್ತಿಪಡಿಸು. ಧಾರ್ಮಿಕರನ್ನು ರಕ್ಷಿಸು . ಕವ್ಯಗಳಿಂದ ಪಿತೃಗಳನ್ನು , ಭೋಜನಗಳಿಂದ ವೈದಿಕರನ್ನು ಪಂಡಿತರನ್ನೂ ಆನಂದಪಡಿಸು. ಪರಮೇಶ್ವರನನ್ನು, ಮಹಾವಿಷ್ಣುವನ್ನೂ ಸದಾ ಸ್ಮರಿಸುತ್ತಿರು. ನನ್ನನ್ನು ಭಕ್ತಿಯಿಂದ ಪೂಜಿಸುತ್ತಿರು. ನೀನು ನಿನ್ನ ಮಕ್ಕಳೊಂದಿಗೆ ಈ ದೇಶದಲ್ಲಿಯೇ ವಾಸಮಾಡಬೇಕು ಎಂದು ಭಕ್ತ ಚಂದ್ರವರ್ಮನಿಗೆ ಪಾರ್ವತಿ ದೇವಿ ಆದೇಶಿಸಿದಳು. ಅಲ್ಲದೆ, ಕರುಣಾಮಯಿಯಾದ ದುರ್ಗಾ ಸ್ವರೂಪಿಣಿಯಾದ ಪಾರ್ವತಿ ದೇವಿಯು ಈ ನಾಡಿನಲ್ಲಿ ಶಾಂತಿ ಹಾಗೂ ಧರ್ಮ ಸ್ಥಾಪನೆಗೋಸ್ಕರ ಮ್ಲೇಚ್ಛರ ವಿರುದ್ಧದ ಸಮರದಲ್ಲಿ ರಾಜಕುವರ ಚಂದ್ರವರ್ಮನು ಗೆಲುವು ಸಾಧಿಸಲಿ ಎಂದು ಸಂಪೂರ್ಣ ಅನುಗ್ರಹಿಸಿದಳು. ಸರ್ವ ಶತ್ರುಗಳನ್ನೂ ಸದೆಬಡಿಯುವಂತಹ ಭಯಂಕರವೂ, ಸುಂದರವೂ, ಅತಿ ನಿರ್ಮಲವೂ, ಕಾಂತಿಯುಕ್ತವೂ, ಅತಿ ಗಟ್ಟಿಯುಳ್ಳದ್ದೂ, ಉತ್ತಮ ಹಿಡಿಯುಳ್ಳದ್ದೂ ಆದ ಕತ್ತಿಯನ್ನು ಸ್ವತಃ ಚಂದ್ರವರ್ಮನಿಗೆ ಮಾತೆ ಪಾರ್ವತಿ ನೀಡಿದಳು. ಜೊತೆಗೆ ವಾಯುವೇಗದ ಒಂದು ಕುದುರೆಯನ್ನೂ ದಯಪಾಲಿಸಿದಳು. ಸ್ವಲ್ಪ ಸೈನ್ಯವನ್ನು ಕೂಡ ನೀಡಿದಳು. “ಕೂಡಲೇ ಮ್ಲೇಚ್ಛ ಸಮೂಹವನ್ನು ಸಂಹರಿಸು, ರಾಜ್ಯವನ್ನು ಸಂರಕ್ಷಿಸು” ಎಂದು ಆದೇಶಿಸಿ ದೇವಿ ಸ್ಥಳದಿಂದ ಅದೃಶ್ಯಳಾದಳು.

ಬಳಿಕ ಬಲಶಾಲಿಯಾದ ಚಂದ್ರವರ್ಮನು ದೇವಿಯ ಅನುಗ್ರಹದಿಂದ ದುಷ್ಟ ಮ್ಲೇಚ್ಛರ ತಂಡವನ್ನು ಅನಾಯಾಸವಾಗಿ ಕ್ಷಣಾರ್ಧದಲ್ಲಿ ನಾಶ ಮಾಡಿದನು. ಪಾರ್ವತಿಯು ನೀಡಿದ ಚತುರಂಗ ಸೈನ್ಯದಿಂದ ಶೋಭಿಸಿದನು, ವೈದಿಕರಿಂದಲೂ, ಮುನಿಗಳಿಂದಲೂ ಕೂಡಿದವನಾದನು. ಸಂಪ್ರದಾಯದ ಕರ್ತವ್ಯಕ್ಕಾಗಿ ತನ್ನ ಕುಲದ ಯುವತಿಯೊಬ್ಬಳನ್ನು ವಿವಾಹ ಮಾಡಿಕೊಂಡನು. ಆದರೆ, ಸಂತಾನಕ್ಕೋಸ್ಕರ ಮಾತೆ ಪಾರ್ವತಿಯ ವರದಾನದಿಂದ ದೊರೆತ ಆದಿಮ ಸಂಜಾತೆ ಯುವತಿಯನ್ನೂ ಸ್ವೀಕರಿಸಿದನು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಪುರೋಹಿತರು, ಮುನಿಗಳ ಮಾರ್ಗದರ್ಶನ ದಿಂದ ಪಟ್ಟಾಭಿಷಿಕ್ತನಾದನು. ರಾಜನಾಗಿ ಅಧಿಕಾರ ಪಡೆದ ಬಳಿಕ ತೇಜಸ್ಸಿನಿಂದ ರಾರಾಜಿಸುತ್ತಿದ್ದನು.

ಭೂಮಿಯನ್ನು ಪಾಲನೆ ಮಾಡುವದರೊಂದಿಗೆ ಅಗತ್ಯವುಳ್ಳವರಿಗೆ ಅವರವರ ಯೋಗ್ಯತೆಗೆ ತಕ್ಕುದಾಗಿ ಭೂಮಿಯನ್ನು ಒದಗಿಸಿದನು. ಆ ದೇಶದ ಬ್ರಾಹ್ಮಣರು, ವ್ಯಾಪಾರ ಸಮುದಾಯದವರು, ಪರಿಶಿಷ್ಟ ವರ್ಗದ ಜನರಿಂದ, ಇತರ ಎಲ್ಲ ಜಾತಿ ಸಮೂಹದ ಮಂದಿಯಿಂದ ಗೌರವಾನ್ವಿತನಾಗಿ ದೇಶಾಧಿಪತಿಯಾಗಿ ವಿರಾಜಮಾನನಾದನು. ರಾಜನು ಮಾತ್ಸ್ಯ ಕುಲದಲ್ಲಿ ಜನಿಸಿದ್ದರಿಂದ ಪ್ರ್ರಜೆಗಳ ಸಮ್ಮತಿ ಮೇರೆಗೆ ಮಾತ್ಸ್ಯ ದೇಶವೆಂದು ಹೆಸರಿಸಲ್ಪ ಟ್ಟಿತು. ಚಂದ್ರವರ್ಮ ರಾಜನ ಈ ಪವಿತ್ರವೂ, ಶೋಭನವೂ ಆದ ಚರಿತ್ರೆಯನ್ನು ಕೇಳುವವರೂ, ಓದುವವರೂ ಸ್ಮರಿಸುವವರೂ ಪುರುಷಾರ್ಥಗಳನ್ನು ಹೊಂದುವರು.