ಕುಶಾಲನಗರ, ಜು. 25: ದುಪ್ಪಟ್ಟು ಹಣಗಳಿಸುವ ಆಸೆ ತೋರಿಸಿ ಸಾವಿರಾರು ಮಂದಿಯಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಮೊಬೈಲ್ ಆ್ಯಪ್ ಪ್ರಕರಣವೊಂದು ಇನ್ನೂ ತನಿಖೆ ಪೂರ್ಣಗೊಳ್ಳದೆ ವಂಚನೆಗೊಳಗಾದ ಹೂಡಿಕೆದಾರರು ತಮ್ಮ ಹಣಕ್ಕಾಗಿ ಕಾಯುತ್ತಿರುವ ಪ್ರಕರಣವೊಂದು ಇನ್ನೂ ತನಿಖಾ ಹಂತದಲ್ಲಿಯೇ ಉಳಿದಿದೆ.

ಕಳೆದ ಫೆಬ್ರವರಿ ಅಂತ್ಯದಲ್ಲಿ ಸುಮಾರು 15 ರಿಂದ 20 ಕೋಟಿ ರೂಪಾಯಿ ಸಂಗ್ರಹಿಸಿ ಹೂಡಿಕೆದಾರರಿಗೆ ವಂಚನೆ ಮಾಡಿದ ಪ್ರಕರಣವನ್ನು ‘ಶಕ್ತಿ’ ಬೆಳಕಿಗೆ ತಂದ ಬೆನ್ನಲ್ಲೇ ಅಂದಿನ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಮೂವರು ಆರೋಪಿಗಳನ್ನು ಬಂಧಿಸುವುದರೊಂದಿಗೆ ರಾಜ್ಯಮಟ್ಟದ ಪ್ರಕರಣವೊಂದರ ತನಿಖೆ ಕೈಗೆತ್ತಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ವೆಬ್‍ಸೈಟ್ ಮೂಲಕ ಹಣ ಹೂಡಿಕೆ ಮಾಡಿದರೆ ಸುಲಭವಾಗಿ ದುಪ್ಪಟ್ಟು ಹಣ ಮಾಡಬಹುದಾಗಿ ಆಮಿಷವೊಡ್ಡಿ 3 ಸಾವಿರಕ್ಕೂ ಅಧಿಕ ಮಂದಿಯಿಂದ ಹಣ ಹೂಡಿಕೆ ಮಾಡಿಸಿಕೊಂಡು ನಂತರ ವಂಚಿಸಿದ ಹಿನ್ನೆಲೆ ಕುಶಾಲನಗರದ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣದ ಕಿಂಗ್‍ಪಿನ್ ಸೇರಿದಂತೆ ಇನ್ನುಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿತ್ತು. ಅಷ್ಟರೊಳಗಾಗಿ ಕೊರೊನಾ ಮಾರಿ ಜಿಲ್ಲೆಗೆ ಕಾಲಿಟ್ಟ ಬೆನ್ನಲ್ಲೇ ಪ್ರಕರಣದ ತನಿಖೆ ಬಹುತೇಕ ಹಳ್ಳ ಹಿಡಿದಂತಾಗಿದೆ.

ಪ್ರಾಥಮಿಕ ತನಿಖಾ ಹಂತದಲ್ಲಿ ಕುಶಾಲನಗರ ಮೂಲದ ಜಾನ್, ಶಶಿಕಾಂತ್ ಮತ್ತು ಅಂಥೋಣಿ ಎಂಬವರುಗಳನ್ನು ಬಂಧಿಸಲಾಗಿತ್ತು. ಜೊತೆಗೆ ಬಂಧಿತರಿಂದ ಮೊಬೈಲ್‍ಗಳು, ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆದಿತ್ತು.

ಕ್ಯಾಪಿಟಲ್ ರಿಲೇಷನ್ ಡಾಟ್ ಇನ್ ವ್ಯವಹಾರದಲ್ಲಿ ಹೂಡಿಕೆದಾರರು ತಲಾ 4 ಸಾವಿರದಂತೆ ಪಾವತಿಸಿ ನಂತರ ಸಾವಿರಾರು ರೂಗಳ ಹಣ ತೊಡಗಿಸಿಕೊಂಡು ಬ್ಯಾಂಕ್ ಖಾತೆಗಳ ಮೂಲಕ ಹಣ ಪಡೆಯುವ ಪ್ರಕರಣ ನಿರಂತರವಾಗಿ ಒಂದು ವರ್ಷದ ತನಕ ನಡೆದು ನಂತರ ಏಕಾಏಕಿ ಆರೋಪಿಗಳು ಹೂಡಿಕೆದಾರರಿಗೆ ವಂಚನೆ ಮಾಡುವ ಹುನ್ನಾರ ನಡೆಸಿ ಯಶಸ್ವಿಯಾಗಿದ್ದರು. ಗೂಗಲ್ ಪೇ, ಫೋನ್‍ಪೇ, ನೆಟ್ ಬ್ಯಾಂಕಿಂಗ್ ಮೂಲಕ ಹಣ ಹಾಕಿ ಹೂಡಿಕೆ ಮಾಡಿದ ವ್ಯಕ್ತಿಗೆ 7 ದಿನಗಳ ನಂತರ ಹಣ ದ್ವಿಗುಣಗೊಂಡು ಸಂದಾಯವಾಗುತ್ತಿತ್ತು. ಪ್ರಾರಂಭದಲ್ಲಿ ಈ ಪ್ರಕರಣದಲ್ಲಿ ಕುಶಾಲನಗರ ಸೇರಿದಂತೆ ಜಿಲ್ಲೆಯ ಕೆಲ ಮಂದಿ ಪೊಲೀಸರು ಅಧಿಕಾರಿಗಳು, ಸಿಬ್ಬಂದಿಗಳು, ಗಣ್ಯ ವ್ಯಕ್ತಿಗಳು ಎನಿಸಿಕೊಂಡವರು ಹಣ ಹಾಕಿ ಲಾಭ ಪಡೆದ ದಾಖಲೆಗಳು ಕೂಡ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಒಬ್ಬೊಬ್ಬನ ಹೆಸರಿನಲ್ಲಿ ಹಲವು ಖಾತೆಗಳು ಕೂಡ ಕಂಡುಬಂದಿದ್ದವು.

ಬೇರೆ ಬೇರೆ ಹೆಸರುಗಳಲ್ಲಿ ಹಣ ಹೂಡಿಕೆ ಮಾಡಿ ಕೋಟಿಗಟ್ಟಲೆ ಸಂಗ್ರಹವಾದ ಬೆನ್ನಲ್ಲೇ ಆರೋಪಿಗಳು ಹೂಡಿಕೆದಾರರಿಗೆ ಹಣ ನೀಡದೆ ಸತಾಯಿಸಲು ಪ್ರಾರಂಭಿಸಿದರು. ಸುಮಾರು 15 ರಿಂದ 25 ಕೋಟಿಯಷ್ಟು ಹಣದ ವ್ಯವಹಾರ ನಡೆದಿರುವ ದಾಖಲೆಗಳು ತನಿಖಾ ಹಂತದಲ್ಲಿ ದೊರೆತಿದ್ದರೂ ಸಾವಿರಾರು ಸಂಖ್ಯೆಯ ಹಣ ಹೂಡಿಕೆದಾರರು ಮಾತ್ರ ತಮ್ಮ ಹೂಡಿಕೆಯ ಹಣದ ಬರುವಿಕೆಗಾಗಿ ಶಬರಿಯಂತೆ ಕಾಯುವಂತಾಗಿದೆ. ಪ್ರಕರಣದ ಬಗ್ಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿಧಾನಸಭೆ ಅಧಿವೇಶನದಲ್ಲಿ ಕೂಡ ಪ್ರಸ್ತಾಪಿಸಿ ಗಮನ ಸೆಳೆದ ಬೆನ್ನಲ್ಲೇ ರಾಜ್ಯ ಗೃಹಮಂತ್ರಿಗಳು ಪ್ರಕರಣವನ್ನು ಸಿಒಡಿಗೆ ಒಪ್ಪಿಸಿ ತನಿಖೆ ನಡೆಸುವ ಭರವಸೆ ಕೂಡ ನೀಡಿದ್ದರು. ಆದರೆ ಇದುವರೆಗೆ ವಂಚನೆಗೊಳಗಾದ ಹೂಡಿಕೆದಾರರಿಗೆ ಮಾತ್ರ ಯಾವುದೇ ರೀತಿಯ ನ್ಯಾಯ ದೊರಕದಿರುವುದು ಮಾತ್ರ ವಿಪರ್ಯಾಸ.

ಈ ವಂಚನಾ ಜಾಲವನ್ನು ಬೇಧಿಸಿ ತಪಿತಸ್ಥರನ್ನು ವಶಕ್ಕೆ ಪಡೆದುಕೊಂಡು ಉನ್ನತ ಮಟ್ಟದ ತನಿಖೆ ನಡೆಸಿ ಸಾಮಾನ್ಯ ಜನರಿಗೆ ಆಗಿರುವ ಅನ್ಯಾಯಕ್ಕೆ ಕೂಡಲೇ ಪರಿಹಾರ ಕಲ್ಪಿಸಬೇಕಾಗಿದೆ ಎನ್ನುವುದು ಬಡ ಹೂಡಿಕೆದಾರರ ಅಳಲು.

- ಎಂ.ಎನ್. ಚಂದ್ರಮೋಹನ್