ಗೋಣಿಕೊಪ್ಪಲು, ಜು.25: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಜನತೆಯಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಅರಿವು ಮೂಡಿಸಬೇಕೆಂದು ಬಿಜೆಪಿ ತಾಲೂಕು ಯುವ ಮೋರ್ಚಾದ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.

ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಯುವ ಮೋರ್ಚಾದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಪ್ರಸ್ತುತ ಕೊರೊನಾದ ಸಂದರ್ಭದಲ್ಲಿ ಯಾರು ಕೂಡ ಭಯಭೀತರಾಗದೆ ಎಚ್ಚರಿಕೆ ವಹಿಸಬೇಕು. ತೊಂದರೆಯಲ್ಲಿರುವ ಜನತೆಗೆ ಸಹಕಾರ ನೀಡಬೇಕೆಂದರು.

ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಮಾತನಾಡಿ ಪಕ್ಷದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ಯುವಕರನ್ನು ಪಕ್ಷಕ್ಕೆ ಕರೆತರುವ ಕೆಲಸ ಮಾಡಬೇಕೆಂದರು.

ತಾಲೂಕು ಪ್ರಧಾನ ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಆರ್‍ಎಂಸಿ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರವೀಣ್, ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಭರತ್ ಸ್ವಾಗತಿಸಿದರು, ಉಪಾಧ್ಯಕ್ಷರಾದ ಗಗನ್ ಗಣಪತಿ ವಂದಿಸಿದರು.