ಗೋಣಿಕೊಪ್ಪ, ಜು. 25: ನೆರೆ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದ್ದು, ಸರಿಯಾದ ಪರಿಹಾರ ಸಿಗದೆ ಕುಟುಂಬವೊಂದು ಕಂಗಾಲಾಗಿದೆ.

ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆ ಕಚೇರಿಗೆ ಪರಿಹಾರಕ್ಕಾಗಿ ಅಲೆದು ಅಲೆದು ಈ ಕುಟುಂಬ ಪರಿತಪಿಸುವಂತಾಗಿದೆ.

2019ರ ಆಗಸ್ಟ್ ತಿಂಗಳಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಸಂಕಷ್ಟದ ಅನುಭವ ಈ ಕುಟುಂಬಕ್ಕೆ ಒಂದು ವರ್ಷಗಳಿಂದ ಕಾಡುತ್ತಿದೆ.

ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಡುಬೀಟಿ, ನೆಹರು ಕಾಲೋನಿಯ ಕುಟುಂಬ ಈಗ ಆತಂಕದಲ್ಲಿದೆ.

ಒಂದು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಇಲ್ಲಿನ ನಿವಾಸಿ ಹೆಚ್.ಟಿ. ಪ್ರದೀಪ್ ಎಂಬುವವರ ಮನೆ ಗೋಡೆಗಳು ಕುಸಿದುಬಿದ್ದು ನೆಲಸಮವಾಗಿತ್ತು. ಈ ವೇಳೆ ದೇವರ ದಯೆಯಿಂದ ಈ ಬಡ ಕುಟುಂಬ ಪ್ರಾಣಾಪಾಯದಿಂದ ಪಾರಾಗಿತ್ತು. ಬಳಿಕ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರ ಮತ್ತು ಗ್ರಾಮ ಪಂಚಾಯತಿ ಸದಸ್ಯರ ಕಾಳಜಿಯಿಂದ ಕಂದಾಯ ಇಲಾಖೆ ಸಿಬ್ಬಂದಿ ಹಾನಿ ಸರ್ವೆ ಮಾಡಿ ಪರಿಹಾರ ಸಿಗುವಂತೆ ಕ್ರಮ ಕೈಗೊಂಡಿದ್ದರು.

ರಾಜೀವ್ ಗಾಂಧಿ ವಸತಿ ನಿಗಮದಿಂದ 5 ಲಕ್ಷ ಮನೆ ದುರಸ್ಥಿಗೆ ಪರಿಹಾರ ಹಣ ಬಿಡುಗಡೆಗೊಂಡ ಆದೇಶ ಪತ್ರ ಫಲಾನುಭವಿಗೆ ದೊರಕಿತ್ತು. ಆದೇಶ ಪತ್ರದಲ್ಲಿ ಇರುವಂತೆ ನಾಲ್ಕು ಹಂತಗಳಲ್ಲಿ ಹಣ ಬಿಡುಗಡೆಗೊಳ್ಳುವಂತೆ ಮೊದಲ ಹಂತದ 1 ಲಕ್ಷ ಹಣ ಫಲಾನುಭವಿಯ ಖಾತೆಗೆ ಜಮಗೊಂಡಿತ್ತು.

ಇದೇ ಹರ್ಷದಲ್ಲಿ ಮನೆ ದುರಸ್ಥಿ ಕಾರ್ಯಕ್ಕೆ ತೊಡಗಿಸಿಕೊಂಡ ಪ್ರದೀಪ್ ಕುಟುಂಬಕ್ಕೆ ಉಳಿದ ಮೂರು ಹಂತದಲ್ಲಿ ಬಿಡುಗಡೆಯಾಗಬೇಕಿದ್ದ 4 ಲಕ್ಷ ಹಣ ಬಾರದೆ ನಿರಾಶೆಯಾಗಿದೆ. ಇದರಿಂದ ಈ ಕುಟುಂಬ ಬೀದಿ ಪಾಲಾಗಿ ಅತಂತ್ರ ಸ್ಥಿತಿ ಎದುರಾಗಿದೆ. ಮನೆಯ ಹಿಂಭಾಗದಲ್ಲಿ ಪ್ಲಾಸ್ಟಿಕ್ ಹೊದಿಕೆ ಅಡಿಯಲ್ಲಿ ಅಡುಗೆ ತಯಾರಿಸಿಕೊಳ್ಳುತ್ತಿದರೆ, ಮನೆಯ ಸಮೀಪ ಇರುವ ಗ್ಯಾರೇಜ್ ಮಾಲೀಕರೊಬ್ಬರು ನಿಲ್ಲಿಸಿದ ಮಾರುತಿ ಕಾರಿನಲ್ಲಿ ಮಕ್ಕಳು ಸೇರಿದಂತೆ ನಾಲ್ಕು ಜನ ರಾತ್ರಿ ನಿದ್ರಿಸಲು ಆಶ್ರಯವಾಗಿಸಿಕೊಂಡಿದ್ದಾರೆ. ಮೊದಲ ಹಂತದ ಹಣ ಬಿಡುಗಡೆಯಲ್ಲಿ ಏರಿಸಿದ ಮನೆಯ ಗೋಡೆ ಈ ಬಾರಿಯ ಮಳೆಗೆ ಕುಸಿದುಬಿದ್ದು ಗಾಯದ ಮೇಲೆ ಮತ್ತೊಂದು ಬರೆ ಎಳೆದಂತ ನೋವು ಉಂಟುಮಾಡಿದೆ. ಮೊದಲೇ ಬಡತನದಲ್ಲಿ ಬೇಯುತ್ತಿರುವ ಸದಸ್ಯರು ಈ ಆಘಾತದಿಂದ ಮತ್ತಷ್ಟು ಹೈರಾಣಾಗಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಇವರ ಈ ನೋವಿನ ಹೃದಯಕ್ಕೆ ಪರಿಹಾರ ಒದಗಿಸಲು ಮುಂದಾಗ ಬೇಕಾಗಿದೆ. ಇದೇ ಸ್ಥಿತಿಯಲ್ಲಿ ಇದೇ ಕಾಲೋನಿಯ ಸುಬ್ರಮಣಿ ಎಂಬುವವರ ಕುಟುಂಬವು ಸಂಕಷ್ಟದಿಂದ ನರುಳುತ್ತಿದೆ.

-ಜಗದೀಶ್ ಜೋಡುಬೀಟಿ