ಮಡಿಕೇರಿ, ಜು. 25: ಶ್ರಾವಣ ಮಾಸದ ಪರ್ವದಲ್ಲಿ ಪ್ರಥಮವಾಗಿ ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಆಚರಿಸಲ್ಪಡುವ ನಾಗರ ಪಂಚಮಿ ಪ್ರಯುಕ್ತ ಇಂದು ವಿಶೇಷ ಆರಾಧನೆಯೊಂದಿಗೆ, ನಾಗದೇವತೆಗೆ ಭಕ್ತಿಪೂರ್ವಕ ನಮನ ಸಲ್ಲಿಸಲಾಯಿತು.
ಮಡಿಕೇರಿಯ ಬ್ರಾಹ್ಮಣರ ಬೀದಿಯ ಪುರಾತನ ಅಶ್ವತ್ಥ ಕಟ್ಟೆಯ ನಾಗನೆಲೆ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶ್ರೀ ಸುಬ್ರಹ್ಮಣ್ಯ ಹಾಗೂ ನಾಗದೇವರಿಗೆ ಕ್ಷೀರಾಭಿಷೇಕದೊಂದಿಗೆ ಭಕ್ತರು ನಮನ ಸಲ್ಲಿಸಿದರು. ಮಾತ್ರವಲ್ಲದೆ ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧ ದೇವಾಲಯಗಳು ಹಾಗೂ ನಾಗ ಸನ್ನಿಧಿಗಳಲ್ಲಿ ನಾಗರ ಪಂಚಮಿ ಪ್ರಯುಕ್ತ ಪೂಜೆ, ಕ್ಷೀರಾಭಿಷೇಕ ನೆರವೇರಿತು.
ಚೆಟ್ಟಳ್ಳಿ: ಶ್ರೀಮಂಗಲ ಶ್ರೀ ಭಗವತಿ ದೇವಾಲಯದಲ್ಲಿ ನಾಗರ ಪಂಚಮಿ ಪೂಜೆಯನ್ನು ಸಲ್ಲಿಸಲಾಯಿತು. ನೂತನವಾಗಿ ಜೀರ್ಣೋದ್ಧಾರಗೊಂಡ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀ ಭಗವತಿ ದೇವಾಲಯದ ಸಮೀಪ ಪ್ರತಿಷ್ಠಾಪಿಸಲಾದ ನಾಗದೇವರ ನೆಲೆಯಲ್ಲಿ ನಾಗರ ಪಂಚಮಿಯ ಇಂದು ದೇವಾಲಯದ ತಕ್ಕಮುಖ್ಯಸ್ಥ ಮುಳ್ಳಂಡ ಸೂರು ಗಣಪತಿ ಹಾಗೂ ಊರಿನವರÀ ಸಮ್ಮುಖದಲ್ಲಿ ವಿಶೇಷ ಪೂಜೆಸಲ್ಲಿಸುವ ಮೂಲಕ ನಾಗಪಂಚಮಿ ಪೂಜೆಯನ್ನು ಸಲ್ಲಿಸಲಾಯಿತು.
ನಾಪೆÇೀಕ್ಲು: ವಿವಿಧೆಡೆ ನಾಗರಪಂಚಮಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಮೀಪದ ಪಾಲೂರು ಮಹಾಲಿಂಗೇಶ್ವರ ದೇವಾಲಯದಲ್ಲೂ ನಾಗರಪಂಚಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಅರ್ಚಕ ದೇವಿಪ್ರಸಾದ್ ನೇತೃತ್ವದಲ್ಲಿ ನಾಗದೇವರಿಗೆ ಪೂಜೆ ನೆರವೇರಿತು.
ನಾಗರ ಪಂಚಮಿ ಅಂಗವಾಗಿ ನಾಪೆÇೀಕ್ಲು ಗ್ರಾಮದ ಕುರುಳಿ ಸುಭಾಶ್ ನಗರದ ನಾಗ ಕಟ್ಟೆಯಲ್ಲಿ ನಾಗದೇವರಿಗೆ ಪೂಜೆಯನ್ನು ಸಲ್ಲಿಸಿ ನೈವೇಧ್ಯವನ್ನು ಅರ್ಪಿಸಲಾಯಿತು. ಪೂಜಾ ಕಾರ್ಯವನ್ನು ನಾಪೆÇೀಕ್ಲು ಭಗವತಿ ದೇವಾಲಯದ ಅರ್ಚಕರಾದ ಹರೀಶ್ ಭಟ್ ನೆರವೇರಿಸಿದರು. ಈ ಸಂದರ್ಭ ಗ್ರಾಮಸ್ಥರಾದ ರಾಮಣ್ಣ, ಲೋಕೇಶ್, ಪ್ರವೀಣ್, ಕೃಷ್ಣಪ್ಪ ಮತ್ತಿತರರು ಇದ್ದರು.
ಕೂಡಿಗೆ : ತೂರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದ ಸಮೀಪದಲ್ಲಿರುವ ಅರಸಿನಗುಪ್ಪೆ ಗ್ರಾಮದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಆವರಣದಲ್ಲಿ ನಾಗರಪಂಚಮಿ ಪೂಜೆಯ ಅಂಗವಾಗಿ ಶ್ರಧ್ಧಾಭಕ್ತಿಯಿಂದ, ವಿಶೇಷ ಹೋಮ ಹವನಗಳು ನಡೆದವು.
ಬೆಳಿಗ್ಗಿನಿಂದಲೇ ವಿಶೇಷ ಅಭಿಷೇಕ ಅರ್ಚನೆ ನಡೆದು ಮಧ್ಯಾಹ್ನ ಮಹಾಮಂಗಳಾರತಿ, ಅನ್ನದಾನ ನಡೆಯಿತು.
ಈ ಸಂದರ್ಭ ಅರಸಿನಗುಪ್ಪೆ ಸಿದ್ದಲಿಂಗಪುರ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ದೇವಾಲಯದ ಗುರೂಜಿ ಶ್ರೀ ರಾಜೇಶ್‍ನಾಥ್ ಜೀ ಮತ್ತು ಪ್ರಸಾದ್ ಸೇರಿದಂತೆ ಅರ್ಚಕರು ಇದ್ದರು. ಪೂಜಾ ಕಾರ್ಯಕ್ರಮದಲ್ಲಿ ಅನೇಕ ಗ್ರಾಮಗಳ ಭಕ್ತರು ಸಾಮಾಜಿಕ ಅಂತರದೊಂದಿಗೆ ಭಾಗವಹಿಸಿದರು.
ನಾಗರ ಪಂಚಮಿಯ ಪ್ರಯುಕ್ತ ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಅವರಣದಲ್ಲಿರುವ ಶ್ರೀ ನಾಗ ದೇವರಿಗೆ ಕ್ಷೀರಾಭಿಷೇಕ ಎಳನೀರಾಭಿಷೇಕ, ಪಂಚಾಮೃತಾಭಿಷೇಕ, ಪಂಚಕಜ್ಜಾಯ ಸೇವೆ ಮುಂತಾದ ಸೇವಾ ಕಾರ್ಯಗಳೊಂದಿಗೆ ಮಹಾಪೂಜೆ ನಡೆಯಿತು. ಭಕ್ತಾದಿಗಳು ಸಾಮಾಜಿಕ ಅಂತರದೊಂದಿಗೆ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರ: ನಾಗರಪಂಚಮಿ ಅಂಗವಾಗಿ ಕುಶಾಲನಗರದ ಹೌಸಿಂಗ್ ಬೋರ್ಡ್ ಉದ್ಭವ ಸುಬ್ರಮಣ್ಯ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಭಕ್ತಾದಿಗಳು ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹುತ್ತಕ್ಕೆ ಹಾಲೆರೆದು ಭಕ್ತಿಭಾವ ಮೆರೆದರು.