ಮಡಿಕೇರಿ, ಜು. 25: ರಾಜ್ಯದಲ್ಲಿ ಕೊರೊನಾ ವೈರಸ್‍ನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿರುವ “ಆರೋಗ್ಯ ಅಭಯ ಹಸ್ತ” ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಪಂಚಾಯಿತಿ ಮಟ್ಟದಲ್ಲಿ ನಡೆಸಲು ಕೆಪಿಸಿಸಿ ನೀಡಿರುವ ಆದೇಶದಂತೆ ಕೊಡಗು ಜಿಲ್ಲೆಯಲ್ಲೂ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ನಿಯೋಜಿತ ಆರು ಬ್ಲಾಕ್‍ನ ವೀಕ್ಷಕರುಗಳು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳು ಹಾಗೂ ಸಾಮಾಜಿಕ ಜಾಲತಾಣದ ಪ್ರಮುಖರ ಪೂರ್ವಭಾವಿ ಸಭೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಜುನಾಥ್‍ಕುಮಾರ್, ಆರೋಗ್ಯ ಅಭಯ ಹಸ್ತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮವಹಿಸುವಂತೆ ಕರೆ ನೀಡಿದರು. ಆರು ಬ್ಲಾಕ್ ಕಾಂಗ್ರೆಸ್‍ನ ವ್ಯಾಪ್ತಿಗೆ ಒಳಪಡುವ ಎಲ್ಲಾ ಪಂಚಾಯಿತಿ ಮಟ್ಟದಲ್ಲಿ ಮತ್ತು ನಗರ, ಪಟ್ಟಣ ಪಂಚಾಯಿತಿಗೆ ಒಳಪಡುವ ಎಲ್ಲಾ ಬೂತ್ ಮಟ್ಟದಲ್ಲಿ ಇಬ್ಬರು ಡಿಜಿಟಲ್ ಪ್ರತಿನಿಧಿಗಳನ್ನು ನೇಮಕಗೊಳಿಸಲು ಸಭೆ ನಿರ್ಧರಿಸಿತು.

ವೀಕ್ಷಕರುಗಳಾದ ವೆಂಕಪ್ಪಗೌಡ, ಪ್ರದೀಪ್ ರೈ ಪಂಬಾರ್, ಹೇಮನಾಥ್ ಶೆಟ್ಟಿ, ಪಿ. ರಾಜು, ಎಡ್ವಿನ್ ರಿಚರ್ಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪಟ್ಟಡ ರಂಜಿ ಪೂಣಚ್ಚ, ಮಿದೇರಿರ ನವೀನ್, ಇಸ್ಮಾಯಿಲ್, ಬಿ.ಎಸ್. ಅನಂತಕುಮಾರ್, ಬಿ.ಬಿ. ಸತೀಶ್, ಅಪ್ರು ರವೀಂದ್ರ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್, ಸೋಮವಾರಪೇಟೆ ಬ್ಲಾಕ್‍ನ ಮಂಜುನಾಥ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣದ ಸಂಚಾಲಕ ಆರ್.ಪಿ. ಚಂದ್ರಶೇಖರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರಾ ಮೈನ, ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ಸಭೆಯಲ್ಲಿ ಹಾಜರಿದ್ದರು.