ಕೂಡಿಗೆ, ಜು. 24: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ದುಸ್ಥಿತಿಯಿಂದ ಕುಡಿಯುವ ನೀರಿನ ಸಮಸ್ಯೆಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ನೇತೃತ್ವದಲ್ಲಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರ ಸಭೆ ನಡೆಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ನೀರಿನ ವ್ಯವಸ್ಥೆಯನ್ನು ನಿರ್ವಹಣೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಡಲ್ ಅಧಿಕಾರಿ ವರದರಾಜ್ ಸೂಚನೆ ನೀಡಿದರು.

ಕಳೆದ ಎರಡು ತಿಂಗಳುಗಳಿಂದ ಕಾರ್ಯ ನಿರ್ವಹಿಸದ ಶುದ್ಧೀಕರಣ ಘಟಕದ ವ್ಯವಸ್ಥೆಯನ್ನು ಸರಿಪಡಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಶುಚಿತ್ವದ ಕಡೆಗೆ ಹೆಚ್ಚು ಗಮನಕ್ಕೆ ನಾವು ಒತ್ತು ನೀಡಬೇಕು. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕೆಲಸ ನಿರ್ವಹಿಸಬೇಕು. ಕೊರೊನಾ ಸೋಂಕು ತಡೆಗಟ್ಟಲು ಶ್ರಮ ಮೀರಿ ದುಡಿಯಬೇಕು. ಅದರಿಂದಾಗಿ ಗ್ರಾಮದ ಒಳಿತಿಗೆ ಸಹಕಾರವಾಗುತ್ತದೆ ಎಂದರು.

ಈ ಸಂದರ್ಭ ನೋಡಲ್ ಅಧಿಕಾರಿ ವರದರಾಜ್, ಹಾರಂಗಿ ತೋಟಗಾರಿಕಾ ಇಲಾಖೆಯ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.