ಮಡಿಕೇರಿ, ಜು. 24: ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಸಮಿತಿಯ ಉಪಾಧ್ಯಕ್ಷರಾಗಿ ‘ಶಕ್ತಿ’ ಸಂಪಾದಕರಾದ ಜಿ. ಚಿದ್ವಿಲಾಸ್ ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ತುಮಕೂರಿನ ಕುಂಚಿಟಿಗ ಸಮುದಾಯ ಭವನದಲ್ಲಿ ನಡೆದ ಸಂಘದ ಸರ್ವ ಸದಸ್ಯರ ಮಹಾಸಭೆಯ ನಿರ್ಣಯದಂತೆ ಚಿದ್ವಿಲಾಸ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ.1972ರಲ್ಲಿ ಉದಯವಾಗಿ ನಾಲ್ಕು ದಶಕಗಳ ಕಾಲ ನಿರಂತರವಾಗಿ ಸಕ್ರಿಯತೆಯಿಂದ ಪತ್ರಿಕೆಗಳ ಹಿತಕ್ಕಾಗಿ ವಿವಿಧ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಮತ್ತು ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳ ಸಂಪಾದಕರನ್ನು ಪ್ರತಿನಿಧಿಸುವ ರಾಜ್ಯದ ಏಕೈಕ ಸಂಘಟನೆ ಇದಾಗಿದೆ. ನೇಮಕದ ಕುರಿತು ರಾಜ್ಯ ಸಂಘದ ಅಧ್ಯಕ್ಷ ಎನ್. ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ.