ವೀರಾಜಪೇಟೆ, ಜು. 24: ವೀರಾಜಪೇಟೆ ಪಟ್ಟಣ ಇಲ್ಲವೇ ತಾಲೂಕಿನ ಯಾವುದೇ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಬಂದಾಗ ತಾಲೂಕು ಆಡಳಿತದ ವತಿಯಿಂದ ಸೋಂಕು ತಗಲಿದ ವ್ಯಕ್ತಿಯ ಮನೆಯಿಂದ ನೂರು ಮೀಟರ್ ಪ್ರದೇಶದಲ್ಲಿ ಸಾರ್ವಜನಿಕ ಸಂಪರ್ಕಕ್ಕೆ ತಡೆ ಹಿಡಿಯಲಾಗುತ್ತಿದೆ. ಇದನ್ನು ಪರಿವರ್ತಿಸಿ ಸೋಂಕು ತಗುಲಿದ ವ್ಯಕ್ತಿ ಹಾಗೂ ಆತನ ಮನೆಗೆ ಮಾತ್ರ ಸೀಮಿತಗೊಂಡು ಸೀಲ್‍ಡೌನ್ ಮಾಡುವಂತೆ ಇಂಡಿಯನ್ ಮೆಡಿಕಲ್ ಅಸೋಶಿಯೇಶ್‍ನ ವೀರಾಜಪೇಟೆ ಶಾಖೆಯ ಅಧ್ಯಕ್ಷೆ ಫಾತಿಮಾ ಕಾರ್ಯಪ್ಪ ಅವರು ಇಲ್ಲಿನ ತಾಲೂಕು ತಹಶೀಲ್ದಾರ್ ನಂದೀಶ್ ಅವರಿಗೆ ಮನವಿ ಸಲ್ಲಿಸಿದರು.

ವೀರಾಜಪೇಟೆ ಶಾಖೆಯ ಐ.ಎಂ.ಎ ವೈದ್ಯ ಸದಸ್ಯರುಗಳು ಡಾ. ಫಾತಿಮಾ ಕಾರ್ಯಪ್ಪ ಅವರ ನೇತೃತ್ವದಲ್ಲಿ ತಾಲೂಕು ತಹಶೀಲ್ದಾರ್ ನಂದೀಶ್ ಅವರನ್ನು ಭೇಟಿ ಮಾಡಿ ಒಬ್ಬನಿಗೆ ಕೊರೊನಾ ಸೋಂಕು ತಗಲಿ ವರದಿಯಲ್ಲಿ ಪಾಸಿಟಿವ್ ಬಂದಾಗ ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ಹಾಗೂ ಆರೋಗ್ಯ ತಂಡ ನೂರು ಮೀಟರ್ ಅಂತರಕ್ಕೂ ಅಧಿಕ ಪ್ರದೇಶವನ್ನು ಸೀಲ್‍ಡೌನ್ ಮಾಡುತ್ತಿದೆ. ಕೊರೊನಾ ಸೋಂಕಿತ ವ್ಯಕ್ತಿಯನ್ನು ನಿರ್ಬಂಧ ಮಾಡುವುದರೊಂದಿಗೆ ಆ ಪ್ರದೇಶದ ಎಲ್ಲ ಮನೆಗಳನ್ನು, ನಿವಾಸಿಗಳನ್ನು ಸಾರ್ವಜನಿಕವಾಗಿ ನಿರ್ಬಂಧಿಸುವುದು ನ್ಯಾಯಬದ್ಧವಲ್ಲ, ಇದನ್ನು ಪರಿವರ್ತಿಸಿ ಕೊರೊನಾ ಸೋಂಕಿತ ಪಾಸಿಟಿವ್ ವ್ಯಕ್ತಿಗೆ ಸೀಮಿತಗೊಂಡಂತೆ ನಿರ್ಬಂಧ ವಿಧಿಸುವಂತೆ ವೈದ್ಯರ ಒಕ್ಕೂಟ ತಾಲೂಕು ತಹಶೀಲ್ದಾರ್ ಅವರನ್ನು ಒತ್ತಾಯಿಸಿತು.

ಈ ಸಂದರ್ಭ ಡಾ. ದುರ್ಗಾಪ್ರಸಾದ್, ಡಾ. ನರಸಿಂಹನ್, ಡಾ. ಅಚ್ಚಯ್ಯ, ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕೆ ್ಷಎಂ.ಕೆ. ದೇಚಮ್ಮ, ಸದಸ್ಯ ಎಸ್.ಎಚ್. ಮತೀನ್, ವಕೀಲ ಎನ್. ನರೇಂದ್ರಕಾಮತ್ ಹಾಜರಿದ್ದರು.

ಮನವಿಯ ಪ್ರತಿಯನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೂ ಸಲ್ಲಿಸಲಾಯಿತು.

ತಹಶೀಲ್ದಾರ್ ಭರವಸೆ : ಈ ಮನವಿಯನ್ನು ಜಿಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಕಳುಹಿಸಿ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ವೈದ್ಯರ ಒಕ್ಕೂಟದ ಮನವಿಗೆ ಭರವಸೆ ನೀಡಿದರು.